ಕನ್ನಡಪ್ರಭ ವಾರ್ತೆ ಬೆಂಗಳೂರು
ಪದ್ಮಶ್ರೀ ಪುರಸ್ಕೃತ, ಪುಸ್ತಕ ಪ್ರೇಮಿ ಅಂಕೇಗೌಡರು ಸಂಗ್ರಹಿಸಿರುವ 20 ಲಕ್ಷಕ್ಕೂ ಹೆಚ್ಚಿನ ಪುಸ್ತಕಗಳಿಗೆ ಸೂಕ್ತ ಜಾಗ ಹುಡುಕಿ, ಸುಸಜ್ಜಿತ ಕಟ್ಟಡ ವ್ಯವಸ್ಥೆ ಮಾಡುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರಿಗೆ ಸೂಚನೆ ನೀಡಿದರು.ವಿಧಾನಸೌಧದಲ್ಲಿ ಸೋಮವಾರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ ಅಂಕೇಗೌಡರು ಪುಸ್ತಕಗಳಿಗೆ ಸೂಕ್ತ ವ್ಯವಸ್ಥೆಗೆ ಮನವಿ ಮಾಡಿ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಅಂಕೇಗೌಡ ಜ್ಞಾನ ಪ್ರತಿಷ್ಠಾನದ ಮೂಲಕ ಬರೋಬ್ಬರಿ 20 ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಲಾಗಿದೆ ಎಂದರು.
ದೇಶದ ಅತಿದೊಡ್ಡ ಪರ್ಸನಲ್ ಲೈಬ್ರರಿ ಇದಾಗಿದೆ. ನೀವು ಸೂಕ್ತ ಕಟ್ಟಡ ವ್ಯವಸ್ಥೆ ಮಾಡಿದರೆ ಮಕ್ಕಳಿಗೆ ಅರಿವಿನ ತಾಣವಾಗಿ ಮಾರ್ಪಾಡಗಲಿದೆ. ಇದರಲ್ಲಿ ಅಪರೂಪದ ಪುಸ್ತಕಗಳು ಅತ್ಯುತ್ತಮ ದಾಖಲೆಗಳು ಇವೆ ಎಂದು ಸಿಎಂಗೆ ಮನವರಿಕೆ ಮಾಡಿಕೊಟ್ಟರು.ಇದೇ ವೇಳೆ ತಮ್ಮ ಬಳಿ ಇರುವ ಅಪರೂಪದ ನಾಣ್ಯಗಳು, ಅಂಚೆ ಚೀಟಿಗಳನ್ನು ಮುಖ್ಯಮಂತ್ರಿಗಳಿಗೆ ತೋರಿಸಿ ಅದರ ಬಗ್ಗೆ ವಿವರಣೆ ನೀಡಿದರು. ಅಪರೂಪದ ವಸ್ತುಗಳನ್ನು ಸಿಎಂ ಡಿ.ಕೆ.ಶಿವಕುಮಾರ್ ಅವರು ಕುತೂಹಲದಿಂದ ವೀಕ್ಷಿಸಿದರು.
ಇದೇ ವೇಳೆ ಅಂಕೇಗೌಡರನ್ನು ಮುಖ್ಯಮಂತ್ರಿಗಳು ಸನ್ಮಾನಿಸಿದರು. ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಇದ್ದರು.
ಕನ್ನಡ ರತ್ನ ಪ್ರಶಸ್ತಿಗೆ ಕವಿ ಸತೀಶ್ ಜವರೇಗೌಡ ಆಯ್ಕೆ
ಮಂಡ್ಯ:ಜಿಲ್ಲಾ ಯುವ ಬರಹಗಾರರ ಬಳಗದ ಸಂಸ್ಥಾಪಕ ಅಧ್ಯಕ್ಷ, ಸಾಹಿತಿ ಟಿ.ಸತೀಶ್ ಜವರೇಗೌಡರಿಗೆ ಬೆಂಗಳೂರಿನ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಗ್ಲೋಬಲ್ ಎಜುಕೇಷನ್ ಟ್ರಸ್ಟ್‌ನಿಂದ ನೀಡಲಾಗುವ ಕನ್ನಡ ರತ್ನ ಪ್ರಶಸ್ತಿ ದೊರೆತಿದೆ.ತಾಲೂಕಿನ ಮಂಗಲ ಗ್ರಾಮದ ಟಿ.ಸತೀಶ್ ಜವರೇಗೌಡ ಅವರು ಸಾಂಸ್ಕೃತಿಕ ಸಂಘಟನೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಎರಡು ದಶಕಗಳ ಸಲ್ಲಿಸಿರುವ ಗಣನೀಯ ಸೇವೆ ಪರಿಗಣಿಸಿ ಕನ್ನಡ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ.ಗುಣವಂತ ಮಂಜು ತಿಳಿಸಿದ್ದಾರೆ.ಜೂ.28 ರಂದು ಮಧ್ಯಾಹ್ನ 2.30ಕ್ಕೆ ಮೈಸೂರಿನ ದಕ್ಷ ಪದವಿ ಕಾಲೇಜು ಸಭಾಂಗಣದಲ್ಲಿ ನಡೆಯಲಿರುವ ವಿಚಾರ ಸಂಕಿರಣದಲ್ಲಿ ಪಂಪ ಪ್ರಶಸ್ತಿ ಪುರಸ್ಕೃತ ಬಹುಶ್ರುತ ವಿದ್ವಾಂಸ ಡಾ.ಸಿ.ಪಿ.ಕೃಷ್ಣಕುಮಾರ್ (ಸಿಪಿಕೆ) ಅವರು ಸತೀಶ್ ಜವರೇಗೌಡರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.