ಶಿವಕುಮಾರ ಕುಷ್ಟಗಿ ಗದಗ
ಗದಗ-ಬೆಟಗೇರಿ ಅವಳಿ ನಗರದ ಜನಸಂಖ್ಯೆಗೆ ಅನುಗುಣವಾಗಿ ಒಟ್ಟು 457 ವಿವಿಧ ಹುದ್ದೆಗಳಿಗೆ ಸರ್ಕಾರ ಮಂಜೂರಾತಿ ನೀಡಿದೆ. ಆದರೆ ಸದ್ಯ 240 ಹುದ್ದೆಗಳು ಖಾಲಿ ಉಳಿದಿದ್ದು, ಕೇವಲ 217 ಜನ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರ ನೇರ ಪರಿಣಾಮ ಸಾರ್ವಜನಿಕರ ಮೇಲಾಗಿದ್ದು, ಜನರ ಸಮಸ್ಯೆ ವರ್ಷ ಕಳೆದರೂ ಇತ್ಯರ್ಥವಾಗುತ್ತಿಲ್ಲ, ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ, ಅವಳಿ ನಗರದಲ್ಲಿ ಕಸ ಸಂಗ್ರಹಣೆ, ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ.
ಯಾವ್ಯಾವ ಹುದ್ದೆ ಖಾಲಿ: ಪೌರಾಯುಕ್ತರ ಹುದ್ದೆ ಖಾಲಿ ಇದೆ. ಸೀನಿಯರ್ ಪ್ರೊಗ್ರಾಮರ್ ಒಂದು ಹುದ್ದೆ ಮಂಜೂರಾಗಿದ್ದು, ಅದು ಕೂಡಾ ಖಾಲಿ ಇದೆ. ಕಿರಿಯ ಅಭಿಯಂತರ 3 ಮಂಜೂರಾಗಿದ್ದು 1 ಖಾಲಿ ಇದೆ, ಮುಖ್ಯವಾಗಿ ಬೇಕಾಗುವ ಹಿರಿಯ ಆರೋಗ್ಯ ನಿರೀಕ್ಷಕರ 3 ಹುದ್ದೆಗಳು ಮಂಜೂರಿದ್ದು 2 ಖಾಲಿ ಇವೆ, ಪ್ರಥಮ ದರ್ಜೆ ಸಹಾಯಕರ 4 ಹುದ್ದೆ ಮಂಜೂರಿದ್ದು, 2 ಖಾಲಿ ಇವೆ. ಶೀಘ್ರ ಲಿಪಿಕಾರರ 2 ಹುದ್ದೆಗಳಿದ್ದು ಎರಡೂ ಖಾಲಿ ಇವೆ. 3 ಪ್ರಥಮ ದರ್ಜೆ ಕಂದಾಯ ನಿರೀಕ್ಷಕರ ಹುದ್ದೆ ಮಂಜೂರಿದ್ದು, 2 ಖಾಲಿ ಇವೆ. 8 ನೀರು ಸರಬರಾಜು ಸಹಾಯಕ ಹುದ್ದೆಗಳು ಮಂಜೂರಾಗಿದ್ದರೂ ಎಂಟೂ ಖಾಲಿ ಇವೆ. ಸಮುದಾಯ ಸಂಘಟಕರ 3 ಹುದ್ದೆಗಳಲ್ಲಿ 2 ಹುದ್ದೆಗಳು ಖಾಲಿ ಇವೆ. ದ್ವಿತೀಯ ದರ್ಜೆ ಸಹಾಯಕರ 14 ಹುದ್ದೆಗಳಲ್ಲಿ 11 ಭರ್ತಿಯಾಗಿದ್ದು, 3 ಖಾಲಿ ಇವೆ. ವಾಹನ ಚಾಲಕರ 10 ಹುದ್ದೆಗಳು ಮಂಜೂರಾತಿ ಇದ್ದರೂ 2 ಮಾತ್ರ ಭರ್ತಿಯಾಗಿದ್ದು, 8 ಹುದ್ದೆಗಳು ಖಾಲಿ ಇವೆ. ಎಲೆಕ್ಟ್ರೀಷಿಯನ್, ಪ್ಲಂಬರ್, ಹೆಡ್ ಗಾರ್ಡನ್ ಮಂಜೂರಾಗಿರುವ ಒಂದೊಂದು ಹುದ್ದೆಗಳು ಖಾಲಿ ಇವೆ. 8 ಅಟೆಂಡರ್ ಹುದ್ದೆಗಳಲ್ಲಿ 3 ಖಾಲಿ ಇವೆ, ಕ್ಲೀನರ್ 6 ಹುದ್ದೆಗಳು ಮಂಜೂರಿದ್ದು, 5 ಹುದ್ದೆಗಳು ಖಾಲಿ ಇವೆ. ವಾಟರ್ ಸಪ್ಲೈ ವಾಲಮನ್, ಹೆಲ್ಪರ್ ಸೇರಿದಂತೆ ಒಟ್ಟು 50 ಹುದ್ದೆಗಳ ಮಂಜೂರಾತಿ ಇದ್ದರೂ ಕಾರ್ಯ ನಿರ್ವಹಿಸುತ್ತಿರುವವರು 16 ಜನ ಮಾತ್ರ ಇನ್ನುಳಿದ 34 ಹುದ್ದೆಗಳು ಖಾಲಿಯೇ ಉಳಿದಿವೆ.136 ಪೌರಕಾರ್ಮಿಕರ ಹುದ್ದೆ ಖಾಲಿ: ಅವಳಿ ನಗರವನ್ನು ನಿತ್ಯವೂ ಸ್ವಚ್ಛವಾಗಿಡುವ, ಸಾರ್ವಜನಿಕರ ಆರೋಗ್ಯದೊಂದಿಗೆ ನೇರ ಸಂಪರ್ಕ ಹೊಂದಿರುವ ಪೌರಕಾರ್ಮಿಕರ 264 ಹುದ್ದೆಗಳಿಗೆ ಮಂಜೂರಾತಿ ಇದೆ. ಸದ್ಯಕ್ಕೆ ಕೇವಲ 128 ಜನರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, 136 ಹುದ್ದೆಗಳು ಖಾಲಿ ಇವೆ. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದ್ದರೆ. 35 ವಾರ್ಡ್‌ಗಳನ್ನು ಹೊಂದಿರುವ ಅವಳಿ ನಗರವನ್ನು ಸ್ವಚ್ಛಗೊಳಿಸುವಂತಹ ಹೆಚ್ಚಿನ ಹೊರೆ, ಕಡಿಮೆ ಸಂಖ್ಯೆಯಲ್ಲಿರುವ ಪೌರಕಾರ್ಮಿಕರ ಮೇಲೆಯೇ ಬಿದ್ದಿರುವ ಹಿನ್ನೆಲೆಯಲ್ಲಿ ಅವರು ಕೂಡಾ ಒತ್ತಡದಲ್ಲಿದ್ದಾರೆ.
ಇದು ಸರ್ಕಾರದ ಹಂತದಲ್ಲಿ ಆಗಬೇಕಾಗಿರುವ ಕೆಲಸ. ಇರುವ ಸಿಬ್ಬಂದಿಗಳಿಂದಲೇ ಸಮರ್ಪಕ ಕೆಲಸ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ಗದಗ-ಬೆಟಗೇರಿ ಅಧ್ಯಕ್ಷ ಉಷಾ ದಾಸರ ತಿಳಿಸಿದ್ದಾರೆ.