ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಆಯುರ್ವೇದವು ಸಮಗ್ರ ಆರೋಗ್ಯ ಹಾಗೂ ರೋಗ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಬದಲಾಗುತ್ತಿರುವ ಜೀವನಶೈಲಿ ಹಾಗೂ ಹವಾಮಾನಕ್ಕೆ ಅನುಗುಣವಾಗಿ ಆಯುರ್ವೇದ ಔಷಧಗಳ ಕುರಿತು ಸಾಕ್ಷ್ಯಾಧಾರಿತ ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಐಸಿಎಂಆರ್-ಎನ್‌ಐಟಿಎಂ ನಿರ್ದೇಶಕಿ ಡಾ. ಸುಬರ್ಣಾ ರಾಯ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಆಯುರ್ವೇದವು ಸಮಗ್ರ ಆರೋಗ್ಯ ಹಾಗೂ ರೋಗ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಬದಲಾಗುತ್ತಿರುವ ಜೀವನಶೈಲಿ ಹಾಗೂ ಹವಾಮಾನಕ್ಕೆ ಅನುಗುಣವಾಗಿ ಆಯುರ್ವೇದ ಔಷಧಗಳ ಕುರಿತು ಸಾಕ್ಷ್ಯಾಧಾರಿತ ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಐಸಿಎಂಆರ್-ಎನ್‌ಐಟಿಎಂ ನಿರ್ದೇಶಕಿ ಡಾ. ಸುಬರ್ಣಾ ರಾಯ್ ಹೇಳಿದರು.

ಶಿವಬಸವ ನಗರದ ಕೆಪಿಟಿಸಿಎಲ್ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಮಹಾನಗರ ಪಾಲಿಕೆ, ಜಿಲ್ಲಾ ಆಯುಷ್ ಇಲಾಖೆ ಹಾಗೂ ಐಸಿಎಂಆರ್-ಎನ್‌ಐಟಿಎಂ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ 11ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜೈವಿಕ ತಂತ್ರಜ್ಞಾನ ಹಾಗೂ ಆಧುನಿಕ ವಿಜ್ಞಾನದ ನೆರವಿನಿಂದ ಆಯುರ್ವೇದ ಸಸ್ಯಗಳ ಸಕ್ರಿಯ ಘಟಕಗಳ ಪರಿಣಾಮವನ್ನು ಹೆಚ್ಚಿಸುವ ಮತ್ತು ಅವುಗಳ ಪರಿಣಾಮಕಾರಿತ್ವವನ್ನು ವೈಜ್ಞಾನಿಕವಾಗಿ ದೃಢಪಡಿಸುವ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಬೆಳಗಾವಿಯ ಐಸಿಎಂಆರ್-ಎನ್‌ಐಟಿಎಂ ಸಂಸ್ಥೆಯೂ ಸಾಂಪ್ರದಾಯಿಕ ಹಾಗೂ ಗಿಡಮೂಲಿಕೆ ಚಿಕಿತ್ಸೆಗಳ ಕುರಿತು ವೈಜ್ಞಾನಿಕ ಅಧ್ಯಯನ ನಡೆಸುತ್ತಿದೆ ಎಂದರು.ಐದು ಏಮ್ಸ್‌ ಸೇರಿದಂತೆ 8 ಸಂಸ್ಥೆಗಳಲ್ಲಿ ನಡೆಸಿದ ಅಧ್ಯಯನದಲ್ಲಿ ಆಯುರ್ವೇದದ ‘ಪುನರ್ನವಾದಿ ಮಂಡೂರ’ ಔಷಧವು ರಕ್ತಹೀನತೆ ಚಿಕಿತ್ಸೆಯಲ್ಲಿ ಐರನ್-ಫೋಲಿಕ್ ಆಸಿಡ್‌ಗೆ ಪರ್ಯಾಯವಾಗಿ ಪರಿಣಾಮಕಾರಿ ಎಂಬುದು ಕಂಡುಬಂದಿದೆ ಎಂದು ತಿಳಿಸಿದರು.ಆಯುರ್ವೇದದ ಬೆಳವಣಿಗೆಗೆ ನಾವೀನ್ಯತೆ, ಸಂಶೋಧನೆಗಳ ದಾಖಲೀಕರಣ, ಔಷಧಗಳ ಗುಣಮಟ್ಟ ಕಾಪಾಡುವುದು, ಆಧುನಿಕ ವೈದ್ಯಕೀಯ ಪದ್ಧತಿಯೊಂದಿಗೆ ಸಮನ್ವಯ ಹಾಗೂ ಆರೋಗ್ಯ ಕಾರ್ಯಕರ್ತರ ಸಾಮರ್ಥ್ಯ ಹೆಚ್ಚಿಸುವುದು ಅಗತ್ಯ. ಈ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸುಲಭವಾಗಿ ಲಭ್ಯವಾಗುವ ಆರೋಗ್ಯ ಸೇವೆ ಒದಗಿಸುವುದು ಮುಖ್ಯವಾಗಿದೆ ಎಂದರು.ಐಸಿಎಂಆರ್ ವಿಜ್ಞಾನಿ ಡಾ.ಹರ್ಷ ಹೆಗಡೆ ಮಾತನಾಡಿ, ಆಯುರ್ವೇದವು ವ್ಯಕ್ತಿಯ ಶರೀರ ಪ್ರಕೃತಿಯನ್ನು ಆಧರಿಸಿ ಚಿಕಿತ್ಸೆ ನೀಡುವ ಪದ್ಧತಿಯಾಗಿದೆ. ರೋಗಗಳಿಗೆ ಚಿಕಿತ್ಸೆ ನೀಡುವುದಷ್ಟೇ ಅಲ್ಲದೆ, ರೋಗಗಳು ಬಾರದಂತೆ ತಡೆಯುವಲ್ಲಿ ಆಯುರ್ವೇದದ ಪಾತ್ರ ಮಹತ್ವದ್ದಾಗಿದೆ ಎಂದರು.ಆಯುರ್ವೇದವನ್ನು ರೋಗದ ಸ್ಥಿತಿ ಹಾಗೂ ಅಗತ್ಯಕ್ಕೆ ಅನುಗುಣವಾಗಿ ಸೂಕ್ತ ಸಮಯದಲ್ಲಿ ಬಳಸಬೇಕು. ರೋಗದ ಕೊನೆಯ ಹಂತದಲ್ಲಿ ಮಾತ್ರ ಆಯುರ್ವೇದದ ಮೊರೆ ಹೋಗಿ ಈ ಪದ್ಧತಿಗೆ ಅಪಕೀರ್ತಿ ತರುವಂತಾಗಬಾರದು. ರೋಗಲಕ್ಷಣಗಳು ಕಂಡುಬಂದ ಕೂಡಲೇ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.ಜಿಲ್ಲಾ ಆಯುಷ್ ಅಧಿಕಾರಿ ಡಾ.ಶ್ರೀಕಾಂತ ಸುಣದೋಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಆಯುರ್ವೇದ ಪದ್ಧತಿಯನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ರಾಷ್ಟ್ರೀಯ ಆಯುರ್ವೇದ ದಿನ ಆಚರಿಸಲಾಗುತ್ತಿದೆ. ಜಿಲ್ಲೆಯ ತಾಲೂಕು ಮಟ್ಟದ ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈಗಾಗಲೇ ಆಯುಷ್ ಸೇವೆಗಳು ಲಭ್ಯವಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆಗಳನ್ನು ಮತ್ತಷ್ಟು ವಿಸ್ತರಿಸಲಾಗುತ್ತಿದೆ ಎಂದರು.ಇದೇ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಕಾರ್ಯಕರ್ತರು ಹಾಗೂ ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರಿಗೆ ಆಯುಷ್ ಕಿಟ್‌ಗಳನ್ನು ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಡಾ.ಮಂಜುನಾಥ ಗಡ್ಡೆ, ಸಿಪಿಐ ಸಂಗಮೇಶ ಬಿರಾದಾರ, ಡಾ.ಸಚಿನ್ ಪಾಟೀಲ, ಡಾ.ಚಂದ್ರಶೇಖರ, ಆಯುಷ್ ಇಲಾಖೆಯ ವೈದ್ಯಾಧಿಕಾರಿಗಳು, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು ಹಾಗೂ ವಿವಿಧ ಹೋಮಿಯೋಪತಿ ಕಾಲೇಜುಗಳ ಪ್ರಾಚಾರ್ಯರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.