ಮಡಿಕೇರಿ : ಕೊಡಗು ಜಿಲ್ಲೆಯ ಸಿದ್ದಾಪುರ ವಿಭಾಗದ ಕಾವೇರಿ ಜಲಾನಯನ ಪ್ರದೇಶದ 2400 ಎಕರೆ ಕಾಫಿ ತೋಟ ಭೂ ಪರಿವರ್ತನೆ ಮಾಡುವ ಮೂಲಕ ಕೃಷಿಯೇತರ ಚಟುವಟಿಕೆಗಳಿಗೆ ಬಳಸುವ ಪ್ರಯತ್ನ ನಡೆದಿದೆ ಎಂದು ಗಂಭೀರ ಆರೋಪ ಮಾಡಿರುವ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ, ಪ್ರಕರಣದ ಕುರಿತು ಸರ್ಕಾರಕ್ಕೆ ಮತ್ತು ಸಂಬಂಧಿಸಿದ ಇಲಾಖೆಗಳಿಗೆ ದೂರು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಹಸಿರು ಪರಿಸರದಿಂದ ಕೂಡಿರುವ ಕಾಫಿ ತೋಟವನ್ನು ಭೂಪರಿವರ್ತಿಸುವ ಮೂಲಕ ದೈತ್ಯಾಕಾರದ ವಿಲ್ಲಾಗಳು, ಬೃಹತ್ ಟೌನ್‌ಶಿಪ್‌ಗಳು ಮತ್ತು ಮನೆಗಳನ್ನು ನಿರ್ಮಿಸುವ ಸಾಧ್ಯತೆ ಇದೆ. ಇದು ಮುಂದೆ ಭಾರಿ ಅನಾಹುತಗಳಿಗೆ ಕಾರಣವಾಗಬಹುದು ಎಂದು ಆರೋಪಿಸಿದ್ದಾರೆ.
ಭೂ ಪರಿವರ್ತನ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಂದು ರಾಷ್ಟ್ರಪತಿ, ಪ್ರಧಾನಮಂತ್ರಿ, ಕೇಂದ್ರ ಪರಿಸರ ಮತ್ತು ಅರಣ್ಯ ಮಂತ್ರಾಲಯ, ಯುನೆಸ್ಕೋದ ಮಹಾನಿರ್ದೇಶಕರು, ಅರ್ಥಶಾಸ್ತ್ರಜ್ಞ ಡಾ.ಸುಬ್ರಮಣ್ಯನ್ ಸ್ವಾಮಿ ಅವರಿಗೆ ಜಿಲ್ಲಾಧಿಕಾರಿ ಮೂಲಕ ಸಿಎನ್‌ಸಿ ದೂರು ದಾಖಲಿಸಿದೆ ಎಂದು ತಿಳಿಸಿದ್ದಾರೆ.
ಕಾವೇರಿ ನದಿ ಪಾತ್ರದ ಹಸಿರು ಹೊದಿಕೆ ನಾಶಪಡಿಸಲು ಹುನ್ನಾರ ನಡೆಸಲಾಗಿದೆ. ಒಂದು ದೊಡ್ಡ ಭೂಪ್ರದೇಶದ ಪರಿಸರವನ್ನು ನಾಶ ಪಡಿಸಿದಲ್ಲಿ ಅದು ಭೌಗೋಳಿಕ ಅಸಮತೋಲನಕ್ಕೆ ಕಾರಣವಾಗಬಹುದು. ಅಲ್ಲಿನ ಶಾಂತಿ, ಪ್ರಶಾಂತತೆ ಮತ್ತು ನೆಮ್ಮದಿ ಭಂಗವಾಗಬಹುದು. ಇಲ್ಲಿ ನಡೆಯುವ ಪ್ರಕ್ರಿಯೆಗಳು ಕೃಷಿ ವಿಜ್ಞಾನಿ ಡಾ.ಸ್ವಾಮಿನಾಥನ್ ಅವರ ಶಿಫಾರಸ್ಸುಗಳಿಗೆ ವಿರುದ್ಧವಾಗಿದೆ ಎಂದು ನಾಚಪ್ಪ ಆರೋಪಿಸಿದ್ದಾರೆ.
ಹೋಂ ಸ್ಟೇ ವ್ಯವಹಾರ: ದಶಕಗಳ ಹಿಂದೆ ಕೊಡಗು ಹೋಮ್‌ಸ್ಟೇ ವ್ಯವಹಾರದ ಮೂಲಕ ಪ್ರವಾಸೋದ್ಯಮ ನಕ್ಷೆಯನ್ನು ಪ್ರವೇಶಿಸಿದಾಗ, ಇದು ಸ್ಥಳೀಯರ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸಲು ಮತ್ತು ಮುಖ್ಯವಾಗಿ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಉದ್ದೇಶವನ್ನು ಹೊಂದಿತ್ತು. ಆದರೆ ಈಗ ಇಡೀ ಭೂಮಿಯನ್ನು ಎನ್‌ಆರ್‌ಐಗಳು, ಎಂಎನ್‌ಸಿಗಳು, ಕಾರ್ಪೋರೇಟ್ ವಲಯ ಸೇರಿದಂತೆ ಹಲವರು ಆಕ್ರಮಿಸಿಕೊಂಡಿದ್ದಾರೆ. ರೆಸಾರ್ಟ್ ಮತ್ತು ವಿಲ್ಲಾ ಮಾಫಿಯಾಗಳು ಅಕ್ರಮ ಪರಿವರ್ತನೆ ಮೂಲಕ ಭೂಮಿಯನ್ನು ವಶಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.ಹಸಿರ ಪರಿಸರದ ಕಾವೇರಿಯ ನೆಲೆಬೀಡು ‘ಕೊಡವ ಲ್ಯಾಂಡ್’ ಉಳಿಸಿಕೊಳ್ಳಲು ಸಿಎನ್‌ಸಿ ಸಂಘಟನೆ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.