ಮೆಗ್ಗಾನ್‌ ಆಸ್ಪತ್ರೆಯಲ್ಲಿ 25 ಕಾಕ್ಲಿಯಾರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ

KannadaprabhaNewsNetwork |  
Published : Mar 13, 2026, 01:30 AM IST
ಪೊಟೋ: 12ಎಸ್‌ಎಂಜಿಕೆಪಿ01ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಗುರುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಡಾ.ಶಂಕರ್ ಮೆಡಿಕೇರಿ, ಡಾ.ಎಸ್‌.ಶ್ರೀಧರ, ಜಿಲ್ಲಾ ಸರ್ಜನ್ ಡಾ.ಗೀತಾ ಸುಶೀಲ್ ಕುಮಾರ್, ಇಎನ್‌ಟಿ ವಿಭಾಗದ ಡಾ.ಚಂಪಾ, ಶುಶ್ರೂಷಕಾಧೀಕ್ಷಕಿ ಶೇಷಮ್ಮ ಮತ್ತಿತರರು ಇದ್ದರು. | Kannada Prabha

ಸಾರಾಂಶ

ರಾಜ್ಯ ಸರ್ಕಾರದ ಶ್ರವಣ ಸಂಜೀವಿನಿ ಕಾಕ್ಲಿಯಾರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಯೋಜನೆಯ ಮೂಲಕ ಗಂಭೀರ ಶ್ರವಣ ಸಮಸ್ಯೆ ಹೊಂದಿರುವ ಮಕ್ಕಳಿಗೆ ಉಚಿತ ಶಸ್ತ್ರಚಿಕಿತ್ಸೆ ಮತ್ತು ನಂತರದ ಪುನರ್ವಸತಿ ಸೇವೆಗಳನ್ನು ಒದಗಿಸಲಾಗುತ್ತಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ 25 ಯಶಸ್ವಿ ಕಾಕ್ಲಿಯಾರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ ಎಂದು ಇಎನ್‌ಟಿ ವಿಭಾಗದ ಮುಖ್ಯಸ್ಥ ಡಾ.ಶ್ರೀಧರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರಾಜ್ಯ ಸರ್ಕಾರದ ಶ್ರವಣ ಸಂಜೀವಿನಿ ಕಾಕ್ಲಿಯಾರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಯೋಜನೆಯ ಮೂಲಕ ಗಂಭೀರ ಶ್ರವಣ ಸಮಸ್ಯೆ ಹೊಂದಿರುವ ಮಕ್ಕಳಿಗೆ ಉಚಿತ ಶಸ್ತ್ರಚಿಕಿತ್ಸೆ ಮತ್ತು ನಂತರದ ಪುನರ್ವಸತಿ ಸೇವೆಗಳನ್ನು ಒದಗಿಸಲಾಗುತ್ತಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ 25 ಯಶಸ್ವಿ ಕಾಕ್ಲಿಯಾರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ ಎಂದು ಇಎನ್‌ಟಿ ವಿಭಾಗದ ಮುಖ್ಯಸ್ಥ ಡಾ.ಶ್ರೀಧರ್ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹುಟ್ಟು ಕಿವುಡು ಇರುವ ಮಕ್ಕಳಿಗೆ ನಡೆಸುವ ಉನ್ನತ ಮಟ್ಟದ ಮತ್ತು ಸಂಕೀರ್ಣವಾದ ಶಸ್ತ್ರಚಿಕಿತ್ಸೆ ಇದಾಗಿದ್ದು, ಈ ಯೋಜನೆಯಡಿ ಆಸ್ಪತ್ರೆಯಲ್ಲಿ 2023 ಮಾರ್ಚ್‌ 1 ರಂದು ಮೊದಲ ಕಾಕ್ಲಿಯಾರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಪ್ರಾರಂಭಿಸಲಾಯಿತು. ಇಂದಿಗೆ ಆಸ್ಪತ್ರೆಯಲ್ಲಿ 25ನೇ ಕಾಕ್ಲಿಯಾರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಲಾಗಿದ್ದು, ಇದು ಮಕ್ಕಳ ಭವಿಷ್ಯವನ್ನು ಬೆಳಗಿಸುವ ಮಹತ್ವದ ಹೆಜ್ಜೆಯಾಗಿದೆ. ಸಾಮಾನ್ಯ ಜನರು ಈ ಯೋಜನೆಯ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ತಮ್ಮ ಮಕ್ಕಳಿಗೆ ಸಮಯಕ್ಕೆ ಸರಿಯಾದ ಚಿಕಿತ್ಸೆ ಕೊಡಿಸುವಂತೆ ಮನವಿ ಮಾಡಿದರು.

ಈ ಸೌಲಭ್ಯವು ಬಿಪಿಎಲ್ ಹಾಗೂ ಎಪಿಎಲ್ ಎಂಬ ಭೇದವಿಲ್ಲದೆ ಎಲ್ಲಾ ಅರ್ಹ ರೋಗಿಗಳಿಗೆ ಲಭ್ಯವಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಇದೇ ಶಸ್ತ್ರಚಿಕಿತ್ಸೆಯ ಒಟ್ಟು ವೆಚ್ಚವು ಸಾಮಾನ್ಯವಾಗಿ ಸುಮಾರು ರು. 12 ರಿಂದ 15 ಲಕ್ಷದವರೆಗೆ ಆಗುತ್ತದೆ. ಮೆಗ್ಗಾನ್ ಜಿಲ್ಲಾ ಆಸ್ಪತ್ರೆಯಲ್ಲಿ ಈ ಯೋಜನೆಯಡಿ ಈಗಾಗಲೇ 25 ಮಕ್ಕಳಿಗೆ ಯಶಸ್ವಿಯಾಗಿ ಕಾಕ್ಲಿಯಾರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಹೇಳಿದರು.

ಈ ಯೋಜನೆಯಡಿ ಇಂಪ್ಲಾಂಟ್ ಸಾಧನದ ವೆಚ್ಚಕ್ಕಾಗಿ ಸುಮಾರು 6 ಲಕ್ಷ ರು. ಹಾಗೂ ಶಸ್ತ್ರಚಿಕಿತ್ಸೆ ಮತ್ತು ನಂತರದ ಪುನರ್ವಸತಿ (ರಿಹ್ಯಾಬಿಲಿಟೇಶನ್)ಗಾಗಿ ಒಟ್ಟು ಸುಮಾರು 1.75 ಲಕ್ಷ ರು. ಅನುದಾನವನ್ನು ಸರ್ಕಾರದಿಂದ ನೀಡಲಾಗುತ್ತದೆ. ಹೀಗಾಗಿ ಒಟ್ಟು 7.75 ಲಕ್ಷ ರು. ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ.

ಶಸ್ತ್ರಚಿಕಿತ್ಸೆ ನಂತರ ಎಲ್ಲಾ 25 ಮಕ್ಕಳನ್ನು ಮೈಸೂರಿನ ಎಐಐಎಸ್ಎಚ್ ಸಂಸ್ಥೆಗೆ ಆಡಟರಿ ವರ್ಬಲ್ ಥೆರಪಿಗಾಗಿ ರೆಫರ್ ಮಾಡಲಾಗಿದೆ. ಚಿಕಿತ್ಸೆ ನಂತರ ಹೆಚ್ಚಿನ ಮಕ್ಕಳಲ್ಲಿ ಕೇಳುವ ಸಾಮರ್ಥ್ಯ ಮತ್ತು ಮಾತಿನ ಕೌಶಲ್ಯಗಳಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ ಎಂದು ಮಾಹಿತಿ ನೀಡಿದರು.

ಆರೋಗ್ಯ ಕೇಂದ್ರಗಳು, ಎನ್‌ಐಸಿಯು, ಎಸ್‌ಎನ್‌ಸಿಯು, ಮಕ್ಕಳ ಆಸ್ಪತ್ರೆಗಳು ಹಾಗೂ ಸಮುದಾಯ ಮಟ್ಟದಲ್ಲಿ ಆಶಾ, ಎಎನ್‌ಎಂ, ಆರ್‌ಬಿಎಸ್‌ಕೆ ಹಾಗೂ ಎನ್‌ಪಿಪಿಸಿಡಿ ತಂಡಗಳು ಶ್ರವಣ ತಪಾಸಣೆ ನಡೆಸುತ್ತಿದ್ದು, ಇಲ್ಲಿ ಶ್ರವಣ ಸಮಸ್ಯೆ ಕಂಡುಬಂದ ಮಕ್ಕಳನ್ನು ಜಿಲ್ಲಾ ಮಟ್ಟದ ಜಿಲ್ಲಾ ಕಾಕ್ಲಿಯಾರ್ ಇಂಪ್ಲಾಂಟ್ ಕಮಿಟಿಗೆ ರೆಫರ್ ಮಾಡಲಾಗುತ್ತದೆ ಎಂದರು.

ಡಾ.ಶಂಕರ್ ಮೆಡಿಕೇರಿ ಮಾತನಾಡಿ, ಮೊದಲಿಗೆ 1 ರಿಂದ 6 ವರ್ಷದ ಒಳಗಿನ ಮಕ್ಕಳಿಗೆ ಈ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿತ್ತು. ಈಗ 2 ವರ್ಷದೊಳಗೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಮಕ್ಕಳ ಭವಿಷ್ಯಕ್ಕೆ ಈ ಶಸ್ತ್ರಚಿಕಿತ್ಸೆ ಅತ್ಯುತ್ತಮವಾಗಿದೆ. ಹೇಗೆ ಕಾಕ್ಲಿಯಾರ್ ಇಂಪ್ಲಾಂಟ್ ಅಳವಡಿಸಲಾಗುವುದು ಎಂದು ವಿವರಿಸಿದ ಅವರು ಈ ಶಸ್ತ್ರಚಿಕಿತ್ಸೆ ಪಡೆದ ಮಕ್ಕಳು ಉತ್ತಮ ಶಿಕ್ಷಣ ಪಡೆದು ಯಶಸ್ವಿ ಜೀವನ ಮಾಡುತ್ತಿರುವ ಕುರಿತು ತಿಳಿಸಿದರು.

ಈ ಶಸ್ತ್ರಚಿಕಿತ್ಸೆಯನ್ನು ಇಎನ್‌ಟಿ ವಿಭಾಗದ ಮುಖ್ಯಸ್ಥ ಡಾ. ಎಸ್‌. ಶ್ರೀಧರ ಅವರು ನೆರವೇರಿಸಿದ್ದು, ಇಎನ್‌ಟಿ ವಿಭಾಗದ ವೈದ್ಯರು, ಸಿಬ್ಬಂದಿ ಹಾಗೂ ಆಸ್ಪತ್ರೆಯ ಆಡಳಿತ ವರ್ಗದ ಸಹಕಾರದೊಂದಿಗೆ, ವೈದ್ಯಕೀಯ ಅಧೀಕ್ಷಕರು, ಜಿಲ್ಲಾ ಶಸ್ತ್ರಚಿಕಿತ್ಸಕರು ಮತ್ತು ನಿರ್ದೇಶಕರ ಸಹಾಯ, ಪ್ರೋತ್ಸಾಹ ಹಾಗೂ ಮಾರ್ಗದರ್ಶನದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ 1020 ಕಾಕ್ಲಿಯಾರ್ ಇಂಪ್ಲಾಂಟ್ ಶಸ್ತ್ರ ಚಿಕಿತ್ಸೆ ನಡೆಸಿರುವ ಡಾ.ಶಂಕರ್ ಮೆಡಿಕೇರಿ ಇವರನ್ನು ಸನ್ಮಾನಿಸಲಾಯಿತು.

ಗೋಷ್ಠಿಯಲ್ಲಿ ಮೆಗ್ಗಾನ್ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಗೀತಾ ಸುಶೀಲ್ ಕುಮಾರ್, ಇಎನ್‌ಟಿ ವಿಭಾಗದ ಡಾ.ಚಂಪಾ, ಶುಶ್ರೂಷಕಾಧೀಕ್ಷಕಿ ಶೇಷಮ್ಮ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚನ್ನರಾಯಪಟ್ಟಣದಲ್ಲಿ ವಿಶ್ವ ಮಹಿಳಾ ದಿನಾಚರಣೆ
ಸಾಹಿತ್ಯದ ಮೂಲಕ ಜಗತ್ತಿಗೆ ಕೊಡುಗೆ ನೀಡಿದ ಜೈನಧರ್ಮ: ಪ್ರೊ. ಶಾಂತಿನಾಥ ದಿಬ್ಬದ