ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಮೊದಲನೇ ಅರೋಪಿ ನಟಿ ಪವಿತ್ರಾ ಗೌಡ ಎರಡನೇ ಆರೋಪಿ ನಟ ದರ್ಶನ್‌ ಆರೋಗ್ಯವನ್ನು ವಿಚಾರಿಸಿದ ಪ್ರಸಂಗ ಗುರುವಾರ ನಡೆಯಿತು.

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಮೊದಲನೇ ಅರೋಪಿ ನಟಿ ಪವಿತ್ರಾ ಗೌಡ ಎರಡನೇ ಆರೋಪಿ ನಟ ದರ್ಶನ್‌ ಆರೋಗ್ಯವನ್ನು ವಿಚಾರಿಸಿದ ಪ್ರಸಂಗ ಗುರುವಾರ ನಡೆಯಿತು.

ಪ್ರಕರಣದ ವಿಚಾರಣೆಯನ್ನು ನಗರದ 59ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಾದ ಸುಜಾತ ಎಂ.ಸಾಂಬ್ರಾಣಿ ನಡೆಸಿದರು. ದರ್ಶನ್‌ ಮತ್ತು ಪವಿತ್ರಾ ಗೌಡ ಸೇರಿದಂತೆ ಆರು ಮಂದಿ ಆರೋಪಿಗಳು ಜೈಲಿನಲ್ಲೇ ಪ್ರತ್ಯೇಕ ಬ್ಯಾರಕ್‌ಗಳಲ್ಲಿ ಕುಳಿತು ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆಯಲ್ಲಿ ಪಾಲ್ಗೊಂಡಿದ್ದರು. ವಿಶೇಷ ಸರ್ಕಾರಿ ಅಭಿಯೋಜಕರಾದ (ಎಸ್‌ಪಿಸಿ) ಪಿ.ಪ್ರಸನ್ನ ಕುಮಾರ್‌ ಅವರು, ಪ್ರಕರಣದ 34ನೇ ಸಾಕ್ಷಿಯಾದ ಪುನೀತ್‌ ಅವರಿಗೆ ಪ್ರಶ್ನೆ ಕೇಳುತ್ತಿದ್ದರು. ಮಧ್ಯಾಹ್ನ 12.45ರಿಂದ 1 ಗಂಟೆಯ ಅವಧಿಯಲ್ಲಿ ದಿಢೀರ್‌ ಆಗಿ ಕೋರ್ಟ್‌ ಹಾಲ್‌ನ ವಿಡಿಯೋ ಕಾನ್ಫರೆನ್ಸ್‌ ನೇರ ಪ್ರಸಾರ ಸ್ಥಗಿತಗೊಂಡಿತು.

ಮೈಕ್‌ ಸಂಪರ್ಕ ಕಡಿತಗೊಂಡಿದೆ ಎಂದು ಭಾವಿಸಿದ ಪವಿತ್ರಾ ಗೌಡ

ಈ ವೇಳೆ ಮೈಕ್‌ ಸಂಪರ್ಕ ಕಡಿತಗೊಂಡಿದೆ ಎಂದು ಭಾವಿಸಿದ ಪವಿತ್ರಾ ಗೌಡ ಮತ್ತು ದರ್ಶನ್‌ ಸಂಭಾಷಣೆ ನಡೆಸಿ ಕಷ್ಟ–ಸುಖ ಹಂಚಿಕೊಂಡರು.

ಈ ವೇಳೆ ಪವಿತ್ರಾ ಗೌಡ, ಹೇಗಿದೆ ಬೆನ್ನು ನೋವು? ಫಿಸಿಯೋಥೆರಪಿ ಆಯ್ತಾ ಎಂದು ದರ್ಶನ್‌ ಅವರನ್ನು ಕೇಳಿದರು. ಅದಕ್ಕೆ ದರ್ಶನ್‌ ಕೈಸನ್ನೆ ಮಾಡುತ್ತಾ, ಪೂರ್ತಿ ಮುರಿದು ಹೋಗಿದೆ, ನೋವು ಆಗುತ್ತಿದೆ. ಫಿಸಿಯೋಥೆರಪಿ ಮಾಡುತ್ತಿದ್ದಾರೆ ಎಂದು ಉತ್ತರಿಸಿದರು.

ಆಗ ಪವಿತ್ರಾ ಗೌಡ, ನನಗೂ ಸಹ ಇಲ್ಲಿ (ಜೈಲಿನಲ್ಲಿ) ತುಂಬಾ ತೊಂದರೆಯಾಗುತ್ತಿದೆ ಎಂದು ತನ್ನ ಕಷ್ಟ ಹೇಳಿಕೊಂಡರು. ಅದಕ್ಕೆ ದರ್ಶನ್‌ ಸಹ, ಹೌದು. ಇಲ್ಲಿ ನನಗೆ ಸಹ ಬಹಳಷ್ಟು ತೊಂದರೆಯಾಗುತ್ತಿದೆ. ದೈಹಿಕವಾಗಿ ಮಾನಸಿಕವಾಗಿ ಗಟ್ಟಿಯಾಗಿರು ಎಂದು ಧೈರ್ಯ ತುಂಬಿದರು.

===

ವಿಡಿಯೋ ಕಾನ್ಫರೆನ್ಸ್ ಪುನಃ ಸಂಪರ್ಕ ‍ಪಡೆಯುತ್ತಿದ್ದಂತೆಯೇ ಇಬ್ಬರೂ ಸುಮ್ಮನಾದರು.

ನಂತರ ಪವಿತ್ರಾ ಗೌಡ ಅವರ ಅನಾರೋಗ್ಯಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿ ಕಲ್ಪಿಸಲಾಗಿರುವ ವೈದ್ಯಕೀಯ ನೆರವು ಕುರಿತಂತೆ ಜೈಲು ಅಧಿಕಾರಿಗಳು ಅನುಪಾಲನಾ ವರದಿ ಸಲ್ಲಿಸಿದರು. ಪವಿತ್ರಾ ಗೌಡಗೆ ಅಗತ್ಯ ವೈದ್ಯಕೀಯ ನೆರವು ಕಲ್ಪಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇನ್ನೂ ಪ್ರಕರಣದ 34ನೇ ಸಾಕ್ಷಿಯ ಪಾಟಿ ಸವಾಲು ಪ್ರಕ್ರಿಯೆಯು ಭಾಗಶಃ ಪೂರ್ಣಗೊಂಡಿದ್ದು, ನ್ಯಾಯಾಲಯವು ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ.