ನಟ ದರ್ಶನ್ ಆರೋಪಿಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರತ್ಯಕ್ಷ ದರ್ಶಿಯಾಗಿ ಪರಿಗಣಿಸಲ್ಪಟ್ಟಿರುವ ಪ್ರಾಸಿಕ್ಯೂಷನ್‌ ಸಾಕ್ಷಿ ಎಂ.ಜಿ. ಪುನೀತ್‌, ಪ್ರತಿಕೂಲ (ಹಾಸ್ಟೈಲ್‌) ಸಾಕ್ಷ್ಯ ನುಡಿದಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು:

ನಟ ದರ್ಶನ್ ಆರೋಪಿಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರತ್ಯಕ್ಷ ದರ್ಶಿಯಾಗಿ ಪರಿಗಣಿಸಲ್ಪಟ್ಟಿರುವ ಪ್ರಾಸಿಕ್ಯೂಷನ್‌ ಸಾಕ್ಷಿ ಎಂ.ಜಿ. ಪುನೀತ್‌, ಪ್ರತಿಕೂಲ (ಹಾಸ್ಟೈಲ್‌) ಸಾಕ್ಷ್ಯ ನುಡಿದಿದ್ದಾರೆ.

ಬುಧವಾರ ನಗರದ 59ನೇ ಸಿಟಿ ಸಿವಿಲ್‌ ಮತ್ತು ಸೆಷನ್ಸ್ ಕೋರ್ಟ್‌ ನಡೆಸಿದ ವಿಚಾರಣೆ ವೇಳೆ ಪುನಿತಾ ಪ್ರತಿಕೂಲ ಸಾಕ್ಷ್ಯ ನುಡಿದರು. ಪುನೀತ್‌ ರಿಕವರಿ ಏಜೆಂಟ್‌ ಆಗಿ ಕೆಲಸ ಮಾಡುತ್ತಿದ್ದು, ಜಪ್ತಿ ಮಾಡಿದ ವಾಹನಗಳನ್ನು ಪಟ್ಟಣಗೆರೆ ಶೆಡ್‌ನಲ್ಲಿ ಪಾರ್ಕಿಂಗ್‌ ಮಾಡುತ್ತಿದ್ದರು. 2024ರ ಜೂ.8ರಂದು (ಶನಿವಾರ) ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಕೊಲೆ ನಡೆದಾಗ, ಆ ದಿನ ಬೆಳಗ್ಗೆ 10 ಗಂಟೆಗೆ ಶೆಡ್‌ಗೆ ಹೋಗಿದ್ದೆ. ನಂತರ ಶೆಡ್‌ ಮಾಲೀಕರ ಮಗನನ್ನು ಶಾಲೆಯಿಂದ ಕರೆದುಕೊಂಡು ಬರಲು ಹೋಗಿ, ಮಧ್ಯಾಹ್ನ 12.30ಕ್ಕೆ ಶೆಡ್‌ಗೆ ಮರಳಿದ್ದೆ. ಸಂಜೆ 6.30ರವರೆಗೆ ಅಲ್ಲಿಯೇ ಇದ್ದೆ. ಬಳಿಕ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋದೆ ಎಂದು ಪುನೀತ್‌ ಹೇಳಿಕೆ ನೀಡಿದ್ದಾರೆ.

ನಂತರ ಮಲೆ ಮಹದೇಶ್ವರ ಬೆಟ್ಟದಿಂದ ಭಾನುವಾರ ಮನಗೆ ಬಂದಿದ್ದೆ. ಸೋಮವಾರ ಕೆಲಸಕ್ಕೆ ಹೋಗಿದ್ದೆ. ಶೆಡ್‌ನಲ್ಲಿ ಕೊಲೆಯಾಗಿದೆ ಎಂಬ ಸುದ್ದಿ ಮಂಗಳವಾರ ಟಿವಿಯಲ್ಲಿ ಪ್ರಸಾರವಾದಾಗ ನೋಡಿದೆ. ಆದರೆ, ಇಂದು ನ್ಯಾಯಾಲಯದಲ್ಲಿ ಹಾಜರಾಗಿರುವ ಮತ್ತು ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಿದ್ದ ಆರೋಪಿಗಳನ್ನು ನಾನು ಎಲ್ಲಿಯೂ ನೋಡಿಲ್ಲ. ಪೊಲೀಸರು ನನ್ನನ್ನು ಕರೆದು ವಿಚಾರಣೆ ಮಾಡಿದ್ದರು. ನಾನು ಅವರಿಗೆ ಕೊಲೆಯಾದ ದಿನ ಶೆಡ್‌ನಲ್ಲಿದ್ದೆ. ಸಂಜೆ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದೆ ಎನ್ನುವುದು ಬಿಟ್ಟು ಬೇರೇನೂ ಹೇಳಿಲ್ಲ. ಬಳಿಕ ಕೋರ್ಟ್‌ ಮುಂದೆ ಹಾಜರಾದಾಗಲೂ ನಾನು ಶೆಡ್‌ನಲ್ಲಿದ್ದ ಹಾಗೂ ಇತರೆ ಕೆಲ ವಿಚಾರಗಳನ್ನು ಹೇಳಿದ್ದೇನೆ. ಅದು ಈಗ ನನಗೆ ನೆನಪಿಗೆ ಬರುತ್ತಿಲ್ಲ’ ಎಂದು ಹೇಳಿದರು.ಪಾಟಿ ಸವಾಲು:

ಇದರಿಂದ ವಿಶೇಷ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನ ಕುಮಾರ್‌ ಅವರು, ಪುನೀತ್‌ ಅನ್ನು ಪ್ರತಿಕೂಲ ಸಾಕ್ಷಿಯಾಗಿ ಪರಿಗಣಿಸಿ, ಪಾಟಿಸವಾಲಿಗೆ ಗುರಿಪಡಿಸಲು ಅನುಮತಿ ನೀಡುವಂತೆ ಕೋರಿದರು. ಅದರಂತೆ ನ್ಯಾಯಾಲಯವು ಅನುಮತಿ ನೀಡಿದಾಗ ವಿಶೇಷ ಸರ್ಕಾರಿ ಅಭೀಯೋಜಕರು ಪಾಟಿ ಸವಾಲು ನಡೆಸಿದರು. ಆಗ ದೀಪಕ್‌ ಎಂಬುವವರು ಶೆಡ್‌ ಮಾಲೀಕರಾಗಿದ್ದಾರೆ. ಅವರ ಅಕ್ಕನ ಮಗನೇ ಪ್ರಕರಣದ 10ನೇ ಆರೋಪಿ ವಿನಯ್‌ ಎಂದು ಪುನೀತ್‌ ತಿಳಿಸಿದರು. ವಿಚಾರಣೆಗೆ ಹಾಜರಿದ್ದ ವಿನಯ್‌ ಅನ್ನೂ ಗುರುತಿಸಿದರು. ನಂತರ ನ್ಯಾಯಾಲಯವು ಸರ್ಕಾರಿ ಅಭಿಯೋಜಕರ ಮನವಿ ಮೇರೆಗೆ ಪುನೀತ್‌ ಪಾಟಿ ಸವಾಲು ಪ್ರಕ್ರಿಯೆಯನ್ನು ಮುಂದೂಡಿತು.

ಪ್ರದೂಷ್‌ಗೆ ಮಧ್ಯಂತರ ಬೇಲ್‌ ಬಗ್ಗೆ ನಾಳೆ ಆದೇಶ ಪ್ರಕಟ :

ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಪ್ರದೂಷ್‌ ಎಸ್‌.ರಾವ್‌ಗೆ ಅವರಿಗೆ ಮಧ್ಯಂತರ ಜಾಮೀನು ನೀಡುವ ಕುರಿತ ಆದೇಶವನ್ನು ಅ.30ರಂದು ನೀಡುವುದಾಗಿ ನ್ಯಾಯಾಲಯ ಇದೇ ವೇಳೆ ತಿಳಿಸಿತು.

ಬೆನ್ನುನೋವಿನಿಂದ ನರಳುತ್ತಿದ್ದೇನೆ, ಚಿಕಿತ್ಸೆ ಕೊಡಿಸಿ: ದರ್ಶನ್‌ ಅಳಲು

‘ನಾನು ಬೆನ್ನುನೋವಿಂದ ನರಳುತ್ತಿದ್ದು, ಫಿಸಿಯೋಥೆರಪಿ ಚಿಕಿತ್ಸೆ ಕಲ್ಪಿಸಲು ಜೈಲು ಅಧಿಕಾರಿಗಳಿಗೆ ನಿರ್ದೇಶಿಸಬೇಕು’ ಎಂದು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್‌ ಬುಧವಾರ ನಗರದ 59ನೇ ಸಿಟಿ ಸಿವಿಲ್‌ ಮತ್ತು ಸೆಷನ್ಸ್ ಕೋರ್ಟ್‌ಗೆ ಮನವಿ ಮಾಡಿದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶೆ ಸುಜಾತಾ ಎಂ. ಸಾಂಬ್ರಾಣಿ ಅವರು ಬುಧವಾರ ಮುಂದುವರಿಸಿದರು. ದಿನದ ವಿಚಾರಣೆ ಅಂತ್ಯಗೊಳ್ಳುವ ಸಮಯದಲ್ಲಿ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದ ದರ್ಶನ್‌, ‘ಚಳಿಯಿಂದ ನನಗೆ ಬೆನ್ನುನೋವು ಶುರುವಾಗಿದೆ. ಜೈಲಿನಲ್ಲೇ ಫಿಸಿಯೋಥೆರಪಿ ಚಿಕಿತ್ಸೆ ನೀಡಲಾಗುತ್ತಿತ್ತು. ಸದ್ಯ ಅದನ್ನು ನಿಲ್ಲಿಸಲಾಗಿದೆ. ಹಾಗಾಗಿ, ಫಿಸಿಯೋಥೆರಪಿ ಚಿಕಿತ್ಸೆ ಮುಂದುರಿಸಲು ಜೈಲು ಅಧಿಕಾರಿಗಳಿಗೆ ಸೂಚಿಸಬೇಕು’ ಎಂದು ನ್ಯಾಯಾಧೀಶರಲ್ಲಿ ದರ್ಶನ್‌ ಕೋರಿದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಆ ಕುರಿತು ಅರ್ಜಿ ಸಲ್ಲಿಸಿ. ಕಾನೂನು ಪ್ರಕಾರ ಸೂಕ್ತ ಆದೇಶ ಹೊರಡಿಸಲಾಗುವುದು ಎಂದು ಸೂಚಿಸಿದರು. ಅದರಂತೆ ದರ್ಶನ್ ಪರ ವಕೀಲರು, ಮುಂದಿನ ವಿಚಾರಣೆ ವೇಳೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿದರು. ಇದರಿಂದ ನ್ಯಾಯಾಲಯವು ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.