ಕನ್ನಡಪ್ರಭ ವಾರ್ತೆ ಜಮಖಂಡಿ ಎಕಲಮಟ್ಟಿ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಆಗ್ರಹಿಸಿ ನಾಲ್ಕು ಗ್ರಾಮಗಳ ರೈತರು ಬುಧವಾರ ಚಿಕ್ಕಲಕಿ ಕ್ರಾಸ್ ಬಳಿ ಜಮಖಂಡಿ-ವಿಜಯಪುರ ಜಿಲ್ಲಾ ಮುಖ್ಯ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಜಮಖಂಡಿ
ಎಕಲಮಟ್ಟಿ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಆಗ್ರಹಿಸಿ ನಾಲ್ಕು ಗ್ರಾಮಗಳ ರೈತರು ಬುಧವಾರ ಚಿಕ್ಕಲಕಿ ಕ್ರಾಸ್ ಬಳಿ ಜಮಖಂಡಿ-ವಿಜಯಪುರ ಜಿಲ್ಲಾ ಮುಖ್ಯ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.ಈ ವೇಳೆ ಪ್ರತಿಭಟನಾಕಾರರು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಹಿಂದೆ ಶ್ರೀಕಾಂತ ಕುಲಕರ್ಣಿ ಶಾಸಕರಿದ್ದ ಸಂದರ್ಭದಲ್ಲಿ ಐದು ಗ್ರಾಮಗಳ 5,000 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಆರಂಭಿಸಲಾದ ಎಕ್ಕಲಮಟ್ಟಿ ಏತ ನೀರಾವರಿ ಯೋಜನೆ ಇಂದಿಗೂ ಪೂರ್ಣಗೊಂಡಿಲ್ಲ. ಯೋಜನೆ ಪೂರ್ಣಗೊಳಿಸುವಂತೆ ರೈತರು ಈಗಾಗಲೇ ಆರು ಬಾರಿ ಸತ್ಯಾಗ್ರಹ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.
ರೈತ ಮುಖಂಡ ಸುನೀಲ ಕದಮ ಮಾತನಾಡಿ, ಯೋಜನೆಯ ಶೇ.99ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಕೇವಲ ಶೇ.1ರಷ್ಟು ಕಾಮಗಾರಿ ಬಾಕಿಯಿದೆ. ಆದರೂ ಸಣ್ಣ ನೀರಾವರಿ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿಳಂಬ ನೀತಿಯಿಂದ ಯೋಜನೆ ಪೂರ್ಣಗೊಳ್ಳುತ್ತಿಲ್ಲ ಎಂದು ಆರೋಪಿಸಿದರು. ವರ್ಷಗಳಿಂದ ನೀರಾವರಿ ಸೌಲಭ್ಯಕ್ಕಾಗಿ ಕಾಯುತ್ತಿರುವ ರೈತರಿಗೆ ನ್ಯಾಯ ದೊರೆಯಬೇಕು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸತ್ತು ರಸ್ತೆ ತಡೆ ನಡೆಸಬೇಕಾದ ಪರಿಸ್ಥಿತಿ ಬಂದಿದೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಯೋಜನೆ ಪೂರ್ಣಗೊಳಿಸುವ ಕುರಿತು ಸ್ಪಷ್ಟ ಭರವಸೆ ನೀಡುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ರೈತ ಮುಖಂಡ ಶರಣಪ್ಪ ಕರಜಿ ಮಾತನಾಡಿ, ನೀರಾವರಿ ಯೋಜನೆ ವಿಳಂಬದಿಂದ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಪ್ರಸ್ತಾಪಿಸಿ, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
ಜ್ಯೋತಿಬಾ ಚೌಹಾಣ, ಪಾಂಡುರಂಗ ಜಾಂಬರೆ, ರಾಮಪ್ಪ ಕರಜಗಿ, ಪಾಂಡು ಮಡಿಕ, ಕಲ್ಲಪ್ಪ ಗಿಡಗಿಂಚಿ, ಸದಾಶಿವ ಅಮಠಿ, ಗೋರಖ ಕದಮ, ಸಹದೇವ ಕದಮ ಸಿದ್ಧರಾಯ ಸಣ್ಣಸಿದ್ಧ ಸೇರಿದಂತೆ ಹಲವರು ಭಾಗವಹಿಸಿದ್ದರು.