)
ಬೆಂಗಳೂರು ಲೋಕಾಯುಕ್ತ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಪರವಾನಗಿ ನೀಡಲು 25 ಲಕ್ಷ ರು. ಲಂಚ ಸ್ವೀಕಾರದ ವೇಳೆ ಅಬಕಾರಿ ಉಪ ಆಯುಕ್ತ ಸೇರಿ ಮೂವರನ್ನು ಬಂಧಿಸಿದ್ದಾರೆ.
ಲಕ್ಷ್ಮೀ ನಾರಾಯಣ ಅವರು ಸಿಎಲ್-7 ಮತ್ತು ಮೈಕ್ರೋ ಬ್ರೇವರಿ ಪರವಾನಗಿಗೆ ಅಬಕಾರಿ ಇಲಾಖೆಗೆ ಅರ್ಜಿ ಹಾಕಿದ್ದರು. ಈ ವೇಳೆ ಅಬಕಾರಿ ಇಲಾಖೆ ಅಧಿಕಾರಿಗಳು 80 ಲಕ್ಷ ರು. ಲಂಚಕ್ಕೆ ಬೇಡಿಕೆ ಇರಿಸಿದ್ದರು. ಈ ಸಂಬಂಧ ಲಕ್ಷ್ಮೀ ನಾರಾಯಣ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಶನಿವಾರ ಬ್ಯಾಟರಾಯನಪುರ ಅಬಕಾರಿ ಭವನದ ಬಳಿ 25 ಲಕ್ಷ ರು. ಲಂಚ ಸ್ವೀಕರಿಸುವಾಗ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಮೂವರು ಆರೋಪಿಗಳನ್ನೂ ಬಂಧಿಸಿ ಲಂಚದ ಹಣವನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿದಿದೆ ಎಂದು ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
2.30 ಕೋಟಿ ಲಂಚಕ್ಕೆ ಬೇಡಿಕೆ: ದೂರುದಾರ ಲಕ್ಷ್ಮೀ ನಾರಾಯಣ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಸಿಎಲ್-7 ಮತ್ತು ಮೈಕ್ರೋ ಬ್ರೇವರಿ ಪರವಾನಗಿ ಪಡೆಯಲು ಅಬಕಾರಿ ಇಲಾಖೆಗೆ ಅರ್ಜಿ ಹಾಕಿದ್ದ. ನಿಯಮದ ಪ್ರಕಾರ 14.66 ಲಕ್ಷ ರು. ಶುಲ್ಕ ಸಹ ಪಾವತಿಸಿದ್ದೆ. ಆದರೆ, ಅಬಕಾರಿ ಇಲಾಖೆ ಅಧಿಕಾರಿಗಳು ಸಿಎಲ್-7 ಪರವಾನಗಿಗೆ 80 ಲಕ್ಷ ರು. ಮತ್ತು ಮೈಕ್ರೋ ಬ್ರೇವರಿಗೆ 1.50 ಕೋಟಿ ರು. ಸೇರಿ ಒಟ್ಟು 2.30 ಕೋಟಿ ರು. ಲಂಚಕ್ಕೆ ಬೇಡಿಕೆ ಇರಿಸಿದ್ದರು ಎಂದು ಹೇಳಿದರು.ಅಷ್ಟೊಂದು ಹಣ ಕೊಡಲು ಸಾಧ್ಯವಿಲ್ಲ ಎಂದಾಗ, 25 ಲಕ್ಷ ರು. ರಿಯಾಯಿತಿ ಕೊಟ್ಟರು. ಈ ಸಂಬಂಧ ನಾನು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದೆ. ಅದರಂತೆ ನನ್ನಿಂದ 25 ಲಕ್ಷ ರು. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಇಷ್ಟೊಂದು ಲಂಚ ಕೇಳಿದರೆ ಬಿಜಿನೆಸ್ ಮಾಡುವುದು ಹೇಗೆ? ಲಂಚ ಕೊಡದೇ ಫೈಲ್ ಮುಂದಕ್ಕೆ ಹೋಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅಧೀಕ್ಷಕ ಮೆಟ್ರೋದಲ್ಲಿ ಎಸ್ಕೇಪ್!ದೂರುದಾರ ಲಕ್ಷ್ಮೀ ನಾರಾಯಣ ಅವರಿಂದ ಅಬಕಾರಿ ಭವನದ ಬಳಿ 25 ಲಕ್ಷ ರು. ಲಂಚ ಸ್ವೀಕರಿಸಲು ಅಬಕಾರಿ ಕಚೇರಿ ಅಧೀಕ್ಷಕ ತಮ್ಮಣ್ಣ ಮತ್ತು ಅಬಕಾರಿ ಕಾನ್ಸ್‌ಟೇಬಲ್ ಲಕ್ಕಪ್ಪ ಗಣಿ ಬಂದಿದ್ದರು. ಈ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ಮಾಡುತ್ತಿದ್ದಂತೆ ಅಧೀಕ್ಷಕ ತಮ್ಮಣ್ಣ ತಪ್ಪಿಸಿಕೊಂಡು ಮೆಟ್ರೋ ರೈಲು ಹತ್ತಿ ಪರಾರಿಯಾಗಿದ್ದರು. ಬಳಿಕ ಲೋಕಾಯುಕ್ತ ಪೊಲೀಸರು ಬೆನ್ನಟ್ಟಿ ಹಿಡಿದಿದ್ದಾರೆ. ಇನ್ನು ಅಬಕಾರಿ ಉಪ ಆಯುಕ್ತ ಜಗದೀಶ್ ನಾಯ್ಕ್ ಮತ್ತು ಕಾನ್ಸ್‌ಟೇಬಲ್ ಲಕ್ಕಪ್ಪ ಗಣಿಯನ್ನು ಅಬಕಾರಿ ಭವನದ ಬಳಿಯೇ ಬಂಧಿಸಿದ್ದಾರೆ.