ಜೆರಾಕ್ಸ್‌ ನೋಟು ಕೊಟ್ಟು ₹25 ಲಕ್ಷ ಮೋಸ : ಕೇಂದ್ರ ಅಪರಾಧ ವಿಭಾಗದಲ್ಲಿ ದೂರು ದಾಖಲು

KannadaprabhaNewsNetwork | Updated : Aug 02 2024, 10:47 AM IST

ಸಾರಾಂಶ

ಮೇಲೆ ಅಸಲಿ ನೋಟು ಇಟ್ಟು ಕೆಳಗೆ ಕಳ್ಳನೋಟು ಕೊಟ್ಟು ವಂಚಿಸಿರುವ 2ನೇ ಪ್ರಕರಣ ನಗರದಲ್ಲಿ ವರದಿಯಾಗಿದೆ.

 ಬೆಂಗಳೂರು :  ಮೇಲೆ ಅಸಲಿ ನೋಟು ಇಟ್ಟು ಕೆಳಗೆ ಕಳ್ಳನೋಟು ಕೊಟ್ಟು ವಂಚಿಸಿರುವ 2ನೇ ಪ್ರಕರಣ ನಗರದಲ್ಲಿ ವರದಿಯಾಗಿದೆ.

ಐನೂರು ರುಪಾಯಿ ಮುಖಬೆಲೆಯ ಕಲರ್‌ ಜೆರಾಕ್ಸ್‌ ನೋಟುಗಳ ಬಂಡಲ್‌ಗಳ ಮೇಲೆ ₹500 ಮುಖ ಬೆಲೆಯ ಅಸಲಿ ನೋಟು ಇರಿಸಿ ನಗರದ ಸಗಟು ಸಿದ್ಧ ಉಡುಪು ವ್ಯಾಪಾರಿಯೊಬ್ಬರಿಗೆ ₹25 ಲಕ್ಷ ವಂಚಿಸಿದ ಆರೋಪದಡಿ ಇಬ್ಬರ ವಿರುದ್ಧ ಕೇಂದ್ರ ಅಪರಾಧ ವಿಭಾಗದಲ್ಲಿ (ಸಿಸಿಬಿ) ದೂರು ದಾಖಲಾಗಿದೆ.

ವಂಚನೆಗೊಳಗಾದ ವಿಶ್ವೇಶ್ವರಪುರದ ಸಗಟು ಸಿದ್ಧ ಉಡುಪು ವ್ಯಾಪಾರಿ ಪ್ರೇಮ್‌ ಕುಮಾರ್‌ ಜೈನ್‌ ನೀಡಿರುವ ದೂರಿನ ಮೇರೆಗೆ ಜಯೇಶ್‌ ಹಾಗೂ ಅಪರಿಚಿತ ವ್ಯಕ್ತಿಯ ವಿರುದ್ಧ ವಂಚನೆ, ನಂಬಿಕೆ ದ್ರೋಹ, ಮೋಸ ಆರೋಪದಡಿ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ವಿವರ:

ಚಿಕ್ಕಪೇಟೆಯಲ್ಲಿ ಸಗಟು ಸಿದ್ಧ ಉಡುಪುಗಳ ವ್ಯಾಪಾರಿ ಆಗಿರುವ ದೂರುದಾರ ಪ್ರೇಮ್‌ಕುಮಾರ್‌ ಇತ್ತೀಚೆಗೆ ಹೊಸ ಬಟ್ಟೆ ಖರೀದಿಸಲು ₹25 ಲಕ್ಷ ಅಗತ್ಯವಿದ್ದ ಹಿನ್ನೆಲೆಯಲ್ಲಿ ಸ್ನೇಹಿತ ಬಿಪಿನ್‌ ಅವರಲ್ಲಿ ಹಣ ಕೇಳಿದ್ದಾರೆ. ಆಗ ಬಿಪಿನ್‌ ದೆಹಲಿಯಲ್ಲಿ ನನ್ನ ಸ್ನೇಹಿತ ಮಹಿ ಎಂಬುವವರ ಬಳಿ ಹಣವಿದೆ. ದೆಹಲಿಯಲ್ಲಿ ಯಾರಾದರೂ ನಿನಗೆ ಪರಿಚಯವಿದ್ದಲ್ಲಿ ಅವರಿಂದ ಹಣ ತರಿಸಿಕೋ ಎಂದು ಹೇಳಿದ್ದಾರೆ.

5 ತಿಂಗಳ ಹಿಂದೆಯೇ ಸಂಪರ್ಕಿಸಿದ್ದ ವಂಚಕ:

ಐದು ತಿಂಗಳ ಹಿಂದೆ ಜಯೇಶ್‌ ಹೆಸರಿನ ವ್ಯಕ್ತಿ ಪ್ರೇಮ್‌ ಕುಮಾರ್‌ ಜೈನ್‌ ಅವರ ಮೊಬೈಲ್‌ಗೆ ವಾಟ್ಸಾಪ್‌ ಕರೆ ಮಾಡಿ, ದೇಶದ ಯಾವುದೇ ನಗರಗಳಿಂದ ನಗದು ರೂಪದಲ್ಲಿ ಹಣ ತರಿಸುವುದಿದ್ದಲ್ಲಿ ತನಗೆ ತಿಳಿಸುವಂತೆ ಹೇಳಿದ್ದಾನೆ. ಹೀಗಾಗಿ ವ್ಯವಹಾರಕ್ಕೆ ತುರ್ತಾಗಿ ಹಣ ಬೇಕಿದ್ದ ಹಿನ್ನೆಲೆಯಲ್ಲಿ ಪ್ರೇಮ್‌ ಕುಮಾರ್‌ ಜೈನ್‌, ಜಯೇಶ್‌ಗೆ ಕರೆ ಮಾಡಿ, ದೆಹಲಿಯಲ್ಲಿ ಮಹಿ ಎಂಬುವವರು ₹25 ಲಕ್ಷ ನೀಡುತ್ತಾರೆ. ಅದನ್ನು ಬೆಂಗಳೂರಿಗೆ ತಲುಪಿಸಬೇಕು ಎಂದು ಹೇಳಿದ್ದಾರೆ. ಇದೇ ವೇಳೆ ದೆಹಲಿಯ ಮಹಿ ಎಂಬುವವರ ಹೆಸರು, ವಿಳಾಸ, ಮೊಬೈಲ್‌ ಸಂಖ್ಯೆಯನ್ನು ಜಯೇಶ್‌ ಪಡೆದುಕೊಂಡಿದ್ದಾನೆ.

ಜೂ.14ರಂದು ಸಂಜೆ ಪ್ರೇಮ್‌ ಕುಮಾರ್‌ ಜೈನ್‌ಗೆ ಕರೆ ಮಾಡಿರುವ ಜಯೇಶ್‌, ನಗರ್ತಪೇಟೆಯ ಜೈನ್‌ ಟೆಂಪಲ್‌ ಬಳಿ ಬರುವಂತೆ ತಿಳಿಸಿದ್ದಾನೆ. ಅದರಂತೆ ಪ್ರೇಮ್‌ ಕುಮಾರ್‌ ಜೈನ್‌ ಅಲ್ಲಿಗೆ ಬಂದಾಗ, ವ್ಯಕ್ತಿಯೊಬ್ಬ ತನ್ನ ಹೆಸರು ಜಯೇಶ್ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ತನ್ನಲ್ಲಿದ್ದ ಬ್ಯಾಗ್ ತೆರೆದು, ₹500 ಮುಖಬೆಲೆಯ ನೋಟುಗಳ 10 ಬಂಡಲ್‌ಗಳನ್ನು ತೋರಿಸಿ ಇದರಲ್ಲಿ ₹25 ಲಕ್ಷವಿದೆ ಎಂದಿದ್ದಾನೆ.

ದೆಹಲಿಯಲ್ಲಿ ₹25 ಲಕ್ಷ ಪಡೆದ ಅಪರಿಚಿತ ವ್ಯಕ್ತಿ

ದೆಹಲಿಯ ಮಹಿ ಎಂಬುವವರ ಮನೆ ಬಳಿ ನಮ್ಮ ಕಡೆಯ ವ್ಯಕ್ತಿ ಇದ್ದಾರೆ. ನೀವು ಮಹಿಗೆ ಕರೆ ಮಾಡಿ, ₹25 ಲಕ್ಷ ತಲುಪಿದೆ ಎಂದು ಹೇಳಿದರೆ, ಈ ₹25 ಲಕ್ಷವನ್ನು ನಿಮಗೆ ಕೊಡುತ್ತೇನೆ ಎಂದು ಹೇಳಿದ್ದಾನೆ. ಅದರಂತೆ ಪ್ರೇಮ್‌ಕುಮಾರ್‌ ಜೈನ್‌, ಮಹಿಗೆ ಕರೆ ಮಾಡಿ ₹25 ಲಕ್ಷ ತಲುಪಿದೆ ಎಂದಿದ್ದಾನೆ. ಬಳಿಕ ಮಹಿ ಅವರು ತಮ್ಮ ಮನೆ ಬಳಿ ಇದ್ದ ಅಪರಿಚಿತ ವ್ಯಕ್ತಿಗೆ ₹25 ಲಕ್ಷ ನೀಡಿದ್ದಾರೆ. ಬಳಿಕ ಜಯೇಶ್‌, ಪ್ರೇಮ್‌ ಕುಮಾರ್‌ ಜೈನ್‌ಗೆ ಹಣವಿದ್ದ ಬ್ಯಾಗ್‌ ನೀಡಿದ್ದಾನೆ. ಸಾರ್ವಜನಿಕ ಸ್ಥಳವಾಗಿದ್ದ ಹಿನ್ನೆಲೆಯಲ್ಲಿ ಪ್ರೇಮ್‌ ಕುಮಾರ್‌, ಹಣ ಬ್ಯಾಗ್‌ ತೆರೆದು ಪರಿಶೀಲಿಸದೆ, ನೇರವಾಗಿ ಮನೆಗೆ ತೆರಳಿದ್ದಾರೆ.

ಬಂಡಲ್‌ನಲ್ಲಿ ಒಂದೇ ಅಸಲಿ ನೋಟು!

ಮನೆಯಲ್ಲಿ ಹಣದ ಬ್ಯಾಗ್‌ ತೆರೆದು ಒಂದು ಬಂಡಲ್‌ ಪರಿಶೀಲಿಸಿದಾಗ, ಬಂಡಲ್‌ನ ಮೊದಲ ನೋಟು ಮಾತ್ರ ₹500 ಮುಖ ಬೆಲೆಯ ಅಸಲಿ ನೋಟಾಗಿದ್ದು, ಅದರ ಕೆಳಗೆ ಕಲರ್‌ ಜೆರಾಕ್ಸ್‌ ನೋಟುಗಳನ್ನು ಜೋಡಿಸಿರುವುದು ಕಂಡು ಬಂದಿದೆ. ತಕ್ಷಣ ಜಯೇಶ್‌ಗೆ ಕರೆ ಮಾಡಿದಾಗ ಆತನ ಮೊಬೈಲ್‌ ಸ್ವಿಚ್ಡ್‌ ಆಫ್‌ ಬಂದಿದೆ. ದೆಹಲಿಯಲ್ಲಿ ಮಹಿ ಅವರಿಂದ ₹25 ಲಕ್ಷ ಪಡೆದ ಅಪರಿಚಿತ ವ್ಯಕ್ತಿಯ ಮೊಬೈಲ್‌ಗೆ ಕರೆ ಮಾಡಿದಾಗ ಆತನ ಮೊಬೈಲ್‌ ಸಹ ಸ್ವಿಚ್ಡ್‌ ಆಫ್‌ ಬಂದಿದೆ.

ಈ ವೇಳೆ ತಾನು ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದ ಪ್ರೇಮ್‌ ಕುಮಾರ್‌ ಜೈನ್‌ ಸಿಸಿಬಿಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share this article