ಕನ್ನಡಪ್ರಭ ವಾರ್ತೆ ಮಂಗಳೂರು
ಉಡುಪಿ ಜಿಲ್ಲೆಯ ಹುಲಿಕಲ್ ಘಾಟ್ ಮೂಲಕ ಬೆಂಗಳೂರಿಗೆ 120 ಕಿ.ಮೀ. ಸುತ್ತು ಬಳಸಿ ಕ್ರಮಿಸಬೇಕು. ಕುದುರೆಮುಖ-ಕಳಸ-ಎಸ್.ಕೆ.ಬಾರ್ಡರ್ ಆಗಿ ಚಿಕ್ಕಮಗಳೂರು ಮೂಲಕ 45 ಕಿ.ಮೀ. ಹೆಚ್ಚು ಕ್ರಮಿಸಬೇಕು. ಆದರೆ ಈ ರಸ್ತೆ ಕಿರಿದಾಗಿದ್ದು, ದೊಡ್ಡ ವಾಹನಗಳ ಸಂಚಾರಕ್ಕೆ ಯೋಗ್ಯವಾಗಿಲ್ಲ. ಬಿಸಿಲೆ ಘಾಟ್ ಮೂಲಕ ಸಂಚಾರಕ್ಕೆ ಚಿಂತನೆ ನಡೆಸಿದ್ದರೂ ಸುಬ್ರಹ್ಮಣ್ಯ ಭಾಗದಲ್ಲಿ ಕೃತಕ ನೆರೆ ಸೃಷ್ಟಿಯಾಗಿರುವುದು ತೊಂದರೆಯಾಗಿದೆ. ಹೀಗಾಗಿ ಮಲ್ಟಿ ಆ್ಯಕ್ಸಿಲ್ ಬಸ್‌ಗಳನ್ನು ಅನಿವಾರ್ಯವಾಗಿ ಶಿರಾಡಿ ಘಾಟ್ ಮೂಲಕವೇ ಓಡಿಸಬೇಕಾಗಿದೆ.
ನಸುಕಿಗೆ ತಲುಪಿ, ಬೆಳಗ್ಗೆ ಸಂಚಾರ: ಮಂಗಳೂರಿನಿಂದ ಬೆಂಗಳೂರು ಕಡೆಗೆ ಸಂಚರಿಸುವ ಮಲ್ಟಿ ಆ್ಯಕ್ಸಿಲ್ ಕೆಎಸ್‌ಆರ್‌ಟಿಸಿ ಬಸ್‌ಗಳು ನಿಗದಿತ ಸಮಯಕ್ಕೆ ಹೊರಡುತ್ತವೆ. ಬಳಿಕ ಗುಂಡ್ಯ ತಲುಪುವಾಗ ಸಾಮಾನ್ಯವಾಗಿ ಮಧ್ಯರಾತ್ರಿ ಕಳೆದು ನಸುಕಿನ ಜಾವ ಬಂದಿರುತ್ತದೆ. ಬಳಿಕ ಮೂರ್ನಾಲ್ಕು ಗಂಟೆಗಳ ಕಾಲ ಕಾದು ಬೆಳಗ್ಗೆ 6 ಗಂಟೆಗೆ ಬೆಂಗಳೂರಿಗೆ ಸಂಚಾರ ಮುಂದುವರಿಸುತ್ತಿವೆ. ಇದೇ ರೀತಿ ಮಡಿಕೇರಿ ಘಾಟ್ ಮೂಲಕ ಮೈಸೂರು ಕಡೆಗೆ ಸಂಚರಿಸುವ ವಾಹನಗಳೂ ಸಂಪಾಜೆ ಬಳಿ ರಾತ್ರಿ ಕಳೆದು, ಬೆಳಗ್ಗೆ 6 ಗಂಟೆಗೆ ಹೊರಡುತ್ತವೆ. ಅಲ್ಲಿವರೆಗೆ ಪ್ರಯಾಣಿಕರೂ ಬಸ್‌ನಲ್ಲೇ ಕಳೆಯುವಂತಾಗಿದೆ. ರಾತ್ರಿ ಗುಂಡ್ಯ ಹಾಗೂ ಸಂಪಾಜೆಯಲ್ಲಿ ಕಾಯುವ ಬಗ್ಗೆ ಪ್ರಯಾಣಿಕರಿಗೆ ತಿಳಿಸಿಯೇ ಬಸ್‌ಗಳು ಸಂಚಾರ ನಡೆಸುತ್ತಿವೆ ಎನ್ನುತ್ತಾರೆ ಕೆಎಸ್ಸಾರ್ಟಿಸಿ ಅಧಿಕಾರಿಗಳು.ರೈಲುಗಳ ಉಪಯೋಗ: ಶಿರಾಡಿ ಮತ್ತು ಮಡಿಕೇರಿ ಘಾಟ್‌ಗಳು ಕೈಕೊಟ್ಟ ಕಾರಣ ರಾತ್ರಿ ಸಂಚಾರಕ್ಕೆ ಪ್ರಯಾಣಿಕರು ರೈಲನ್ನು ಹೆಚ್ಚಾಗಿ ಆಶ್ರಯಿಸುತ್ತಿದ್ದಾರೆ. ಈಗಾಗಲೇ ಘಾಟ್ ಸಮಸ್ಯೆ ಹಿನ್ನೆಲೆಯಲ್ಲಿ ಮಂಗಳೂರು-ಬೆಂಗಳೂರು ನಡುವೆ ವಿಶೇಷ ರೈಲು ಓಡಾಟ ನಡೆಸುತ್ತಿದೆ. ಅಲ್ಲದೆ ಮಂಗಳೂರು-ಮಡ್ಗಾಂವ್ ಮಧ್ಯೆಯೂ ವಿಶೇಷ ರೈಲು ಏರ್ಪಡಿಸಲಾಗಿದೆ. ಇದು ಪ್ರಯಾಣಿಕರಿಗೆ ವರವಾಗಿದ್ದು, ಈ ರೈಲುಗಳು ಭರ್ತಿಯಾಗಿ ಸಂಚರಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.