ಗುರುವಿನ ಬಗ್ಗೆ ಶ್ರದ್ಧಾಭಾವನೆ ಬೆಳೆಸಿಕೊಳ್ಳಿ: ಸ್ವರ್ಣವಲ್ಲೀ ಶ್ರೀ

KannadaprabhaNewsNetwork | Published : Jul 22, 2024 1:23 AM

ಸಾರಾಂಶ

ಪ್ರೇರಣೆಯ ಬುಗ್ಗೆ ಈ ಗುರು ಪೂರ್ಣಿಮೆಯಾಗಿದ್ದು, ಗುರು ಪೂರ್ಣಿಮೆಯಂದು ಭಾರತದ ಐತಿಹಾಸಿಕ ಗುರುಗಳ ದರ್ಶನ ಅನುಭವ ಆಗುತ್ತದೆ. ವ್ಯಾಸ ಪೂರ್ಣಿಮೆಯು ಪುನಶ್ಚೇತನ ಕೊಡುತ್ತದೆ.

ಶಿರಸಿ: ಸಾಧನೆ ಮಾಡಲು ಉತ್ಸುಕತೆಯ ಜತೆ ಮಾರ್ಗದರ್ಶನ ಮಾಡುವ ಗುರುವಿನ ಬಗ್ಗೆ ಶ್ರದ್ಧಾಭಾವನೆ ಬೆಳೆಸಿಕೊಳ್ಳಬೇಕು. ಪ್ರತ್ಯಕ್ಷ ಗುರು ಸಿಕ್ಕಿದಾಗ ಸರಿ ದಾರಿಯಲ್ಲಿ ಸಾಗಲು ಅನುಕೂಲವಾಗುತ್ತದೆ ಎಂದು ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.ಭಾನುವಾರ ತಾಲೂಕಿನ ಸೋಂದಾ ಸ್ವರ್ಣವಲ್ಲೀ ಸಂಸ್ಥಾನದಲ್ಲಿ ಹಮ್ಮಿಕೊಂಡ ಚಾತುರ್ಮಾಸ ಕಾರ್ಯಕ್ರಮದ ಸಾನ್ನಿಧ್ಯ ನೀಡಿ ಆಶೀರ್ವಚನ ನೀಡಿದರು.ನಮ್ಮನ್ನು ಸರಿ ದಾರಿಗೆ ಕರೆದುಕೊಂಡು ಹೋಗುವ ಅರಿವು ಅನುಭವವಾಗಿ ಕೊನೆಯ ಕ್ಷಣದಲ್ಲಿ ಬರುತ್ತದೆ. ಆಗ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಿಲ್ಲ. ಈ ಕಾರಣಕ್ಕೆ ಚಿಕ್ಕ ವಯಸ್ಸಿನಲ್ಲಿಯೇ ಅರಿವಿನ ಸಹಕಾರಮೂರ್ತಿಯಾಗಿರುವ ಗುರುವಿನ ಆಶ್ರಯ ಪಡೆಯಬೇಕು ಎಂದರು.ಪ್ರೇರಣೆಯ ಬುಗ್ಗೆ ಈ ಗುರು ಪೂರ್ಣಿಮೆಯಾಗಿದ್ದು, ಗುರು ಪೂರ್ಣಿಮೆಯಂದು ಭಾರತದ ಐತಿಹಾಸಿಕ ಗುರುಗಳ ದರ್ಶನ ಅನುಭವ ಆಗುತ್ತದೆ. ವ್ಯಾಸ ಪೂರ್ಣಿಮೆಯು ಪುನಶ್ಚೇತನ ಕೊಡುತ್ತದೆ. ಪ್ರೇರಣೆಯ ಬುಗ್ಗೆ ಈ ಗುರು ಪೂರ್ಣಿಮೆ. ನಮಗೆ ಮಾರ್ಗದರ್ಶನ ಮಾಡಿದವರನ್ನು ಭಕ್ತಿ ಭಾವದಲ್ಲಿ, ದಿವ್ಯ ಶಕ್ತಿ ಎಂದು ನೋಡಬೇಕು ಎಂದರು.ಸಾನ್ನಿಧ್ಯ ವಹಿಸಿದ್ದ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿ, ಗುರುವನ್ನು ಆತ್ಮತತ್ವದ ಲಾಭಕ್ಕೆ ಮಾಡಬೇಕು. ಮೋಕ್ಷಕ್ಕಾಗಿ, ಶ್ರೇಯಸ್ಸಿಗಾಗಿ ಗುರುವನ್ನು ಆರಾಧಿಸಬೇಕು. ನಿವೃತ್ತಿ ಮಾರ್ಗದಲ್ಲಿ ಇದ್ದವನಿಗೆ ಮೋಕ್ಷ ಆಗುತ್ತದೆ. ಸಾಂಸಾರಿಕನಿಗೆ ಲೌಕಿಕ ಕಾಮನೆಗಳೂ, ಮೋಕ್ಷ ಸಾಧನೆ ಕೂಡ ಆಗುತ್ತದೆ. ಗುರುವಿಗಿಂತ ದೊಡ್ಡವರು ಯಾರೂ ಇಲ್ಲ ಎಂದರು.

ಗುರುವಿನಿಂದಲೇ ಜ್ಞಾನ ಸಿದ್ಧಿ. ಪಡೆದ ಜ್ಞಾನಕ್ಕೆ ಗುರುವಿನ ಮುದ್ರೆ ಬೀಳಬೇಕು. ಗುರು ಇಲ್ಲದವನಿಗೆ ಜೀವನದ ಗುರಿ ಸಿಗದು. ಗುರಿ ಕೂಡ ಮಹತ್ವದ್ದು. ಮರಣದ ಆಚೆಗಿರುವ ಸತ್ಯವ ಅರಿವುದೇ ಗುರಿ ಆಗಬೇಕು. ಪ್ರಪಂಚದ ಪ್ರಲೋಭನೆ ಮಧ್ಯದಲ್ಲಿ ಕಣ್ಣಿಗೆ ಕಾಣದ ಆ ಭಗವಂತನ್ನು ಗಟ್ಟಿಯಾಗಿ ಹಿಡಿದು ಆ ಸತ್ಯದ ಕಡೆಗೆ ತೆರಳಬೇಕು. ಈ ದಾರಿಯಲ್ಲಿ ಸಾಗುವಾಗ ಮುಂದೆ ಸಾಗಿದವರ ಹೆಜ್ಜೆ ಗುರುತು, ಮಾರ್ಗದರ್ಶನ ಅಗತ್ಯವಾಗಿದೆ ಎಂದರು.ಇದೇ ಸಂದರ್ಭದಲ್ಲಿ ಪಂಡಿತ್ ಗಣಪತಿ ಭಟ್ಟ ಹಾಸಣಗಿ ಅವರಿಗೆ ಸಂಗೀತ ರತ್ನಾಕರ ಬಿರುದು, ಶಿಲ್ಪಿ ರಾಮಚಂದ್ರ ಹೆಗಡೆ ಕೆಶಿನ್ಮನೆ ಅವರನ್ನು ಸನ್ಮಾನಿಸಿದರು. ಶ್ರೀನಿಕೇತ ಕೇಂದ್ರೀಯ ವಿದ್ಯಾಲಯದಲ್ಲಿ ಸಿಬಿಎಸ್ಸಿಯಲ್ಲಿ ಅಧಿಕ ಅಂಕ ಪಡೆದ ಸುಘೋಷ ಜೋಶಿ ಅವರನ್ನು ಶ್ರೀಗಳು ಪುರಸ್ಕರಿಸಿದರು.ಸನ್ಮಾನ ಸ್ವೀಕರಿಸಿ, ಪಂಡಿತ್ ಗಣಪತಿ ಭಟ್ ಹಾಸಣಗಿ ಮಾತನಾಡಿ, ನನಗೆ ಸಾಕಷ್ಟು ಪುರಸ್ಕಾರಗಳು ದೊರೆತಿದೆ. ಆದರೆ ಶ್ರೀಗಳು ಮಾಡಿರುವ ಸನ್ಮಾನ ಧನ್ಯತಾ ಭಾವ ತಂದಿದೆ. ತಾನ್ಸೇನ್ ಪ್ರಶಸ್ತಿ ಪಡೆದ ಕರ್ನಾಟಕದ ಮೂರನೆಯವ ನಾನು ಎಂದರು.ಶಿಲ್ಪಿ ರಾಮಚಂದ್ರ ಹೆಗಡೆ ಕೆಶಿನ್ಮನೆ ಮಾತನಾಡಿ, ಗುರುಗಳ ಆರಾಧನ ಬಲ ದೊಡ್ಡದು. ಅವರ ಸಂಕಲ್ಪ ಎಲ್ಲ ಮಾಡಿಸುತ್ತದೆ ಎಂದರು. ಮಠದ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ನಳ್ಳಿ, ಕಾರ್ಯದರ್ಶಿ ಜಿ.ವಿ. ಹೆಗಡೆ ಗೊಡವೆಮನೆ ಇದ್ದರು.ಶಂಕರ ಭಟ್ಟ ಉಂಚಳ್ಳಿ, ಆರ್.ಎಂ. ಹೆಗಡೆ ಮತ್ತಿಹಳ್ಳಿ, ಶಂಕರ ಭಟ್ಟ ತಾರೀಮಕ್ಕಿ ಸನ್ಮಾನ ಪತ್ರ ವಾಚಿಸಿದರು. ಕೆ.ವಿ. ಭಟ್ಟ ಪರಿಚಯಿಸಿದರು. ಎನ್.ಜಿ. ಹೆಗಡೆ ಭಟ್ರಕೇರಿ ನಿರೂಪಿಸಿದರು. ಇದೇ ವೇಳೆ ವಿ. ಮಹಾಬಲೇಶ್ವರ ಭಟ್ಟ ಬಾಸಲ ಅವರು ರಚಿಸಿದ ಮಂಗಳಗೌರಿ ವ್ರತ ಕೃತಿಯನ್ನು ಉಭಯ ಶ್ರೀಗಳು ಬಿಡುಗಡೆಗೊಳಿಸಿದರು.

Share this article