ಹಾವೇರಿ: ಜಿಲ್ಲೆಯಲ್ಲಿ ಭಾನುವಾರ ಮಳೆ ಇಳಿಮುಖವಾಗಿದ್ದರೂ ನದಿಗಳಲ್ಲಿ ಹರಿವು ಏರಿಕೆಯಾಗಿದ್ದರಿಂದ ಹೊಲಗಳಿಗೆ ನೀರು ನುಗ್ಗಿ ಬೆಳೆ ಮುಳುಗಿದೆ. ಎರಡು ದಿನಗಳಿಂದ ಮುಳುಗಡೆಯಾಗಿರುವ ಸೇತುವೆ, ಬ್ಯಾರೇಜ್‌ಗಳು ಇನ್ನೂ ತೆರವಾಗದ್ದರಿಂದ ಹಲವು ಕಡೆ ರಸ್ತೆ ಸಂಪರ್ಕ ಕಡಿತವಾಗಿದೆ.
ತಾಲೂಕಿನ ನಾಗನೂರು, ಬೆಂಚಿಹಳ್ಳಿ, ವರದಾಹಳ್ಳಿ ಸೇರಿದಂತೆ ಹಲವು ಕಡೆ ಬೆಳೆ ಮುಳುಗಡೆಯಾಗಿದೆ. ಜಿಲ್ಲೆಯಲ್ಲಿ ಮಳೆ ಇಳಿಮುಖವಾಗಿದ್ದರೂ ನದಿ ಮೇಲ್ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ನೀರಿನ ಹರಿವು ಏರಿಕೆಯಾಗಿದೆ. ಕಳೆದ ಒಂದು ವಾರದಿಂದ ಮಳೆಯಾಗುತ್ತಿರುವುದರಿಂದ ವಾತಾವರಣ ಸಂಪೂರ್ಣ ತಂಪಾಗಿದ್ದು, ಕೃಷಿ ಕಾರ್ಯಕ್ಕೂ ಸಮಸ್ಯೆಯಾಗಿದೆ. ಕಚ್ಚಾ ಮನೆಗಳು ತೇವಗೊಂಡು ಕುಸಿಯುವ ಭೀತಿಯನ್ನು ಅನೇಕ ಕುಟುಂಬಗಳು ಎದುರಿಸುತ್ತಿವೆ.
ಮಣ್ಣಿನ ಮನೆ, ಕಚ್ಚಾ ಮನೆ, ನದಿ ಪಾತ್ರದಲ್ಲಿ ವಾಸಿಸುತ್ತಿರುವ ಕುಟಂಬಗಳು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಅದರಂತೆ ಆಯಾ ತಾಲೂಕಾ ಆಡಳಿತಗಳು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿವೆ.