ಸಣ್ಣ ಈರುಳ್ಳಿ ಕೊಯ್ಲಿಗೆ ಮಳೆ ಅಡ್ಡಿ: ರೈತರಿಗೆ ಆತಂಕ

KannadaprabhaNewsNetwork | Published : Jul 22, 2024 1:23 AM

ಸಾರಾಂಶ

ಮುಂಗಾರಿನಲ್ಲಿ ಕೆಜಿಎಫ್‌ ತಾಲೂಕಿನಾದ್ಯಾಂತ ೧,೨೦೦ ಹೆಕ್ಟೇರ್ ಪ್ರದೇಶದಲ್ಲಿ ಮಿಶ್ರ ತರಕಾರಿ ಬೆಳೆಯ ಜೊತೆಗೆ ಹಾಗೂ ಪ್ರತ್ಯೇಕವಾಗಿ ಸಣ್ಣ ಈರುಳ್ಳಿಯನ್ನು ರೈತರು ಬೆಳೆದಿದ್ದಾರೆ. ಈಗಾಗಲೇ ಕೊಯ್ಯುವ ಹಂತಕ್ಕೆ ಬಂದಿರುವ ಸಣ್ಣ ಈರುಳ್ಳಿಗೆ ಮಳೆ ಅಡ್ಡಿಯಾಗಿದೆ.

ಕನ್ನಡಪ್ರಭ ವಾರ್ತೆ ಕೆಜಿಎಫ್ಆಷಾಢ ಮಾಸದ ಮಳೆ ತಾಲೂಕಿನ ಈರುಳ್ಳಿ ಬೆಳೆಗಾರರಲ್ಲಿ ಕಣ್ಣೀರು ತರಿಸಿದೆ, ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದ ಸಣ್ಣ(ಸಾಂಬರ್) ಈರುಳ್ಳಿ ಕೊಯ್ಲಿಗೆ ಅಡ್ಡಿಯಾಗಿದ್ದು, ಈರುಳ್ಳಿ ಕೊಳೆಯುವ ಭೀತಿ ಎದುರಾಗಿದೆ.ಮುಂಗಾರಿನಲ್ಲಿ ತಾಲೂಕಿನಾದ್ಯಾಂತ ೧,೨೦೦ ಹೆಕ್ಟೇರ್ ಪ್ರದೇಶದಲ್ಲಿ ಮಿಶ್ರ ತರಕಾರಿ ಬೆಳೆಯ ಜೊತೆಗೆ ಹಾಗೂ ಪ್ರತ್ಯೇಕವಾಗಿ ಸಣ್ಣ ಈರುಳ್ಳಿಯನ್ನು ರೈತರು ಬೆಳೆದಿದ್ದಾರೆ. ಈಗಾಗಲೇ ಕೊಯ್ಯುವ ಹಂತಕ್ಕೆ ಬಂದಿರುವ ಸಣ್ಣ ಈರುಳ್ಳಿಗೆ ಮಳೆ ಅಡ್ಡಿಯಾಗಿದೆ. ಕೊಳೆಯುವ ಭೀತಿ

ಎರಡು ತಿಂಗಳ ಹಿಂದೆ ಕ್ವಿಂಟಲ್ ಈರುಳ್ಳಿಗೆ ಆರು ಸಾವಿರ ನೀಡಿ ರೈತರು ಬಿತ್ತನೆ ಮಾಡಿದ್ದಾರೆ, ಇನ್ನೇನು ಫಸಲು ಕೈಗೆ ಸಿಗುವ ಸಂದರ್ಭದಲ್ಲಿ ಮಳೆ ಬಿಡುವು ನೀಡದಿರುವುದು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ರೈತರು ಬೆಳೆದಿರುವ ಈರುಳ್ಳಿ ಜಮೀನಿನಲ್ಲಿ ಕೊಳೆಯುವ ಹಂತ ತಲುಪಿದೆ. ಈ ನಡುವೆ ಈರುಳ್ಳಿ ದರ ದಿಢೀರ್‌ ಕುಸಿತದಿಂದ ತಾಲೂಕಿನಲ್ಲಿ ರೈತರು ಕಂಗಾಲಾಗಿದ್ದಾರೆ. ಸಾವಿರಾರು ರುಪಾಯಿ ಖರ್ಚು ಮಾಡಿ ಬೆಳೆದಿದ್ದ ಸಣ್ಣ ಈರುಳ್ಳಿ ಮಾರಲಾಗದೆ, ಜಮೀನಿನಲ್ಲಿಯೂ ಇಟ್ಟುಕೊಳ್ಳಲಾಗದೆ ಆತಂಕಕ್ಕೀಡಾಗಿದ್ದಾರೆ. ತಾಲೂಕಿನಲ್ಲಿ ಸಣ್ಣ ಈರುಳ್ಳಿ ಪ್ರಮುಖ ಬೆಳೆಯಾಗಿದ್ದ ಕ್ಯಾಸಂಬಳ್ಳಿ ಹೋಬಳಿ, ಕೆಂಪಾಪುರ, ಯರ್ರನಾಗನಹಳ್ಳಿ, ಗೊಲ್ಲಹಳ್ಳಿ, ಕಳ್ಳಿಕುಪ್ಪ ಸೇರಿದಂತೆ ಬಹುತೇಕ ಕಡೆಗಳಲ್ಲಿ ಎರಡು ಎಕರೆಯಿಂದ ಹಿಡಿದು ಹತ್ತು ಎಕರೆಯವರೆಗೂ ಬಿತ್ತನೆ ಮಾಡಿದ್ದು ಬೆಳೆ ಕೊಯ್ಲಿಗೆ ಸಿದ್ಧವಾಗಿದೆ. ಲಾಭದ ನಿರೀಕ್ಷೆಯಲ್ಲಿದ್ದ ರೈತ ಈ ಈರುಳ್ಳಿಯನ್ನು ಕಟಾವು ಮಾಡಲಾಗದ ಸ್ಥಿತಿಯಲ್ಲಿದ್ದಾನೆ.

ಜಮೀನಿನಲ್ಲೆ ಈರುಳ್ಳಿ ಗುಡ್ಡೆ

ಜೂನ್‌ನಲ್ಲಿ ತಮಿಳುನಾಡು ಮತ್ತು ಕೇರಳ ಮೂಲದ ವ್ಯಾಪಾರಿಗಳು ಕ್ವಿಂಟಲ್‌ಗೆ ೫ ರಿಂದ ೬ ಸಾವಿರ ದರದಲ್ಲಿ ಸಣ್ಣ ಈರುಳ್ಳಿ ಖರೀದಿ ಮಾಡಿದ್ದರು, ಸದ್ಯ ಈರುಳ್ಳಿಗೆ ಬೇಡಿಕೆ ಕುಸಿದಿರುವ ಹಿನ್ನೆಲೆಯಲ್ಲಿ ಕ್ವಿಂಟಲ್‌ಗೆ ೧೫೦೦ ರಿಂದ ರು. ೧೮೦೦ಕ್ಕೆ ಮಾರಾಟವಾಗುತ್ತಿದೆ. ಬಹಳಷ್ಟು ರೈತರು ಕಟಾವು ಮಾಡಿದ ಈರುಳ್ಳಿಯನ್ನು ಜಮೀನಿನಲ್ಲಿ ಗುಡ್ಡೆ ಹಾಕುತ್ತಿದ್ದಾರೆ.ತಾಲೂಕಿನ ಕ್ಯಾಸಂಬಳ್ಳಿ, ಸುಂದರಪಾಳ್ಯ, ಕೆಂಪಾಪುರ ಸಂತೆಯಲ್ಲಿ ಈ ಬಾರಿ ರೈತರು ಬಿತ್ತನೆ ಈರುಳ್ಳಿ ಕ್ವಿಂಟಲ್‌ಗೆ ರು.೫ ರಿಂದ ೬ ಸಾವಿರ ಕೊಟ್ಟು ಖರೀದಿಸಿದ್ದರು, ನಾಟಿ ಮಾಡಿದ ಬಳಿಕ ಸುತ್ತು ಮಾರಿ ರೋಗದಿಂದ ಕೆಲವರ ಬೆಳೆ ಹಾಳಾದರೆ, ಕೆಲವರಿಗೆ ಇಳುವರಿ ತೀರಾ ಕಡಿಮೆ ಸಿಕ್ಕಿದೆ, ಇದೀಗ ದರವೂ ಕುಸಿದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಈರುಳ್ಳಿ ಬೆಳೆಯಲು ಗೊಬ್ಬರ ಸೇರಿದಂತೆ ಎಕರೆಗೆ ಸುಮಾರು ರು. ೩೫ ರಿಂದ ೪೦ ಸಾವಿರ ವೆಚ್ಚವಾಗುತ್ತದೆ, ದರ ಕುಸಿತದಿಂದ ಖರ್ಚು ಮಾಡಿದ ಹಣವೂ ಕೈ ಸೇರದಂತಾಗಿದೆ ಎಂದು ತಾಲೂಕಿನ ರೈತರು ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.ಉತ್ತಮ ಬೆಳೆ, ದರ ಕುಸಿತ

ತುಂತುರು ಮಳೆಯಿಂದಾಗಿ ಕೊಯ್ಲು ಈರುಳ್ಳಿಯನ್ನು ಹೆಚ್ಚು ದಿನ ಶೇಖರಣೆ ಮಾಡಲು ಸಾಧ್ಯವಾಗುತ್ತಿಲ್ಲ, ಮಾರುಕಟ್ಟೆಗೆ ಹೆಚ್ಚಿನ ಈರುಳ್ಳಿ ಬಂದಿರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಕಡಿಮೆ ಬೆಲೆಗೆ ಮಾರಾಟ ಮಾಡಬೇಕಿದೆ ಎಂದು ರೈತ ರಮೇಶ್ ತಿಳಿಸಿದರು.ಕೆಜಿಎಫ್ ತಾಲೂಕಿನ ಸಣ್ಣ ಈರುಳ್ಳಿ ತಮಿಳುನಾಡು ಮತ್ತು ಆಂಧ್ರ ಪ್ರದೇಶಕ್ಕೆ ಹೆಚ್ಚು ರಫ್ತು ಮಾಡಲಾಗುತ್ತಿತ್ತು, ಹೆಚ್ಚಿನ ಪ್ರಮಾಣದಲ್ಲಿ ಕೇರಳಕ್ಕೂ ಪೂರೈಸಲಾಗುತ್ತಿತ್ತು. ಈ ವರ್ಷ ಹೆಚ್ಚು ಈರುಳ್ಳಿ ಬೆಳೆದಿರುವ ಕಾರಣ ದರ ಕುಸಿದಿದೆ ಎಂದು ಸಗಟು ವ್ಯಾಪಾರಿಗಳು ಹೇಳುತ್ತಾರೆ.ಮಳೆಯಿಂದ ಈರುಳ್ಳಿ ಕೀಳಲು ಕೂಲಿಯಾಳುಗಳು ಸಿಗುತ್ತಿಲ್ಲ, ಕಿತ್ತರೂ ಕೊಯ್ದು ತುಂಬುವುದರೊಳಗೆ ಕೊಳೆಯುತ್ತದೆ, ಈ ಬೆಳೆ ನಷ್ಟವನ್ನು ಪ್ರಕೃತಿ ವಿಕೋಪ ಎಂದು ಪರಿಗಣಿಸಿ ಸರಕಾರ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಸಾಲ ಮಾಡಿ ಕೃಷಿ ಮಾಡಿರುವ ರೈತರ ಬದುಕು ಕಷ್ಟವಾಗುತ್ತದೆ ಎಂದು ಚಂಬರಸರನಹಳ್ಳಿ ರೈತ ಅಶ್ವತ್ಥ್‌ ನಾರಾಯಣ ಅಳಲು ತೋಡಿಕೊಂಡರು.

Share this article