ಹಾನಗಲ್ಲ: ಶಿಕ್ಷಕ ವಿದ್ಯಾರ್ಥಿ ಸಂಘಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಸಾಮಾಜಿಕ ಹೊಣೆಗಾರಿಕೆ, ಸಂಘಟನಾ ಕೌಶಲ್ಯಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆಯಲ್ಲದೆ, ಭವಿಷ್ಯದಲ್ಲಿ ಉತ್ತಮ ಶಿಕ್ಷಕರಾಗಬೇಕಾದರೆ ಕೇವಲ ಪಾಠದ ಜ್ಞಾನ ಮಾತ್ರವಲ್ಲದೆ ಮಾನವೀಯ ಮೌಲ್ಯಗಳು ಹಾಗೂ ಸೇವಾ ಮನೋಭಾವವೂ ಅಗತ್ಯವೆಂದು ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ. ಶಿವಾನಂದ ನಾಯಕ ತಿಳಿಸಿದರು.ಹಾನಗಲ್ಲಿನ ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದ ಶಿಕ್ಷಕರ ಸಂಘ ಹಾಗೂ ವಿವಿಧ ವಿಷಯವಾರು ಸಂಘಗಳ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಕೇವಲ ಅಂಕ ಗಳಿಕೆಯ ಮೂಟೆಯಲ್ಲ. ಭಾರತದ ಭವಿಷ್ಯ ತರಗತಿಯ ಕೊಠಡಿಗಳಲ್ಲಿ ನಿರ್ಮಾಣವಾಗುತ್ತದೆ ಎಂಬ ಅರಿವು ಶಿಕ್ಷಕರಾಗುವವರಿಗೆ ಇರಬೇಕು. ಕೊಠಾರಿ ಆಯೋಗದ ಈಡೇರಿಕೆಯಲ್ಲಿ ಶಿಕ್ಷಕರ ಪಾತ್ರ ಅತಿ ಮುಖ್ಯ. ಸಾಧಕರಿಗೆ ಸಾಧನೆಯ ಕನಸಿದ್ದರೆ ಸಾಲದು. ಸಾಧನೆಗೆ ತಕ್ಕ ಬದ್ದತೆ ಇರಬೇಕು, ಆತ್ಮವಿಶ್ವಾಸ ಸಾಧಕನಿಗೆ ಮೆಟ್ಟಿಲುಗಳಾಗಿವೆ. ಜ್ಯೋತಿ ತಾ ಬೆಳಗದೆ ಇನ್ನೊಂದು ಜ್ಯೋತಿ ಬೆಳಗದು. ಜ್ಞಾನಗಳಿಸದ ವ್ಯಕ್ತಿ ಇನ್ನೊಬ್ಬನಿಗೆ ಜ್ಞಾನ ನೀಡಲಾರ. ಬದಲಾದ ವ್ಯವಸ್ಥೆಯಲ್ಲಿ ಪ್ರಾಯೋಗಿಕತೆಗೆ ಹೆಚ್ಚು ಮಹತ್ವ ನೀಡಬೇಕಿದೆ ಎಂದರು.ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಡಾ. ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ಮಾತನಾಡಿ, ಶಿಕ್ಷಣವೆಂದರೆ ಕೇವಲ ಅಕ್ಷರ ಜ್ಞಾನವಲ್ಲ, ಅದು ಮಾನವನ ವ್ಯಕ್ತಿತ್ವವನ್ನು ರೂಪಿಸುವ ಮಹತ್ವದ ಶಕ್ತಿ. ಶಿಕ್ಷಣವು ಮನುಷ್ಯನ ಜೀವನಕ್ಕೆ ದಾರಿ ತೋರಿಸುವ ಬೆಳಕು. ವಿದ್ಯೆಯಿಂದ ಜ್ಞಾನ, ಜ್ಞಾನದಿಂದ ವಿವೇಕ ಮತ್ತು ವಿವೇಕದಿಂದ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಇಂದಿನ ಯುವಜನರು ಉತ್ತಮ ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳು, ಸಂಸ್ಕಾರ ಮತ್ತು ಮಾನವೀಯತೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜವು ಶಾಂತಿ ಮತ್ತು ಪ್ರಗತಿಯ ದಾರಿಗೆ ಸಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ. ಎನ್. ಸದಾಶಿವಪ್ಪ, ಶಿಕ್ಷಕರು ದೇಶದ ಆಸ್ತಿ ಅವರು ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಕಲಿಕೆಗೆ ಯಾವುದೆ ಜನ್ಮ ನಕ್ಷತ್ರಗಳಾಗಲಿ, ಹಸ್ತರೇಖೆಗಳಾಗಲಿ ಕಾರಣವಲ್ಲ, ಎರಡೂ ಕೈ ಇಲ್ಲದ ವ್ಯಕ್ತಿಯು ಸಹ ಸಾಧನೆಯ ಉತ್ತುಂಗಕ್ಕೆ ಬರಬಲ್ಲ ಎಂದರು.ಪ್ರೊ. ದಿನೇಶ ಆರ್. ಪ್ರಾಸ್ತಾವಿಕ ಮಾತನ್ನಾಡಿದರು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮುಖ್ಯಸ್ಥರಾದ ಎಸ್. ಆನಂದ. ಡಿ.ಎಸ್.ಇ.ಆರ್.ಟಿ ನಿವೃತ್ತ ಶಿಕ್ಷಣಾಧಿಕಾರಿ ಆರ್.ಚಂದ್ರಶೇಖರ, ಡಾ. ಜಿತೇಂದ್ರ,ಜಿ.ಟಿ, ಡಾ. ರಾಘವೇಂದ್ರ ಮಾಡಳ್ಳಿ, ಡಾ. ಹರೀಶ ಟಿ ತಿರುಕಪ್ಪ, ಡಾ. ಪ್ರಕಾಶ ಹುಲ್ಲೂರ, ಡಾ. ವಿಶ್ವನಾಥ ಬೊಂದಾಡೆ, ಡಾ. ರುದ್ರೇಶ. ಬಿ.ಎಸ್., ಡಾ. ಪ್ರಕಾಶ ಜಿ.ವಿ. ಪ್ರೊ. ಮಹೇಶ್ ಅಕ್ಕಿವಳ್ಳಿ, ನಿವೃತ್ತ ಪ್ರಾಧ್ಯಾಪಕ ಎಮ್.ಬಿ. ನಾಯಕ್, ಎಸ್.ಸಿ. ವಿರಕ್ತಮಠ, ಮಂಜುನಾಥ ಪರಸಿಕ್ಯಾತಿ, ಜಗದೀಶ ನಿಂಬಕ್ಕನವರ, ಮಾಲತೇಶ ಜಡೆದ, ಎಲ್.ಎಫ್. ಹಾನಗಲ್ಲ ಪ್ರಧಾನ ಕಾರ್ಯದರ್ಶಿ ಸಂಜೀವ ಗೋಡೇರ್ ಮಹಿಳಾ ಪ್ರತಿನಿಧಿ ಸಿರಿನಾಬಾನು ಅಂಗಡಿ ಪಾಲ್ಗೊಂಡಿದ್ದರು.ಶಿವಲೀಲಾ ತಳವಾರ ಸಂಘಡಿಗರು ನೃತ್ಯ ಗಾಯನ ಮಾಡಿದರು, ಚೈತ್ರಾ ಮಹೇಂದ್ರಕರ, ಸುನೀತಾ ಮತ್ತು ಸಂಘಡಿಗರು ಪ್ರಾರ್ಥಿಸಿದರು. ಆಶಾ ಬಿ. ಸ್ವಾಗತಿಸಿದರು. ಭಾಗ್ಯಲಕ್ಷ್ಮಿ ಮತ್ತು ಸಿಮಾ ಕೆರುಡಿ ಅತಿಥಿಗಳನ್ನು ಪರಿಚಯಿಸಿದರು. ಆಶಾ ಬಿ.ಸ್ವಾಗತಿಸಿದರು. ಕಾವೇರಿ ಕೊಟಿಹಾಳ, ಖೈರುನ್ನಿಸಾ ನಿರೂಪಿಸಿದರು. ಕಾವ್ಯಾ ಮಲಗುಂದ ವಂದಿಸಿದರು.
ಉತ್ತಮ ಶಿಕ್ಷಕರಾಗಲು ಪಾಠದ ಜ್ಞಾನದ ಜತೆಗೆ ಮಾನವೀಯ ಮೌಲ್ಯಗಳು ಅಗತ್ಯ
ಶಿಕ್ಷಕ ವಿದ್ಯಾರ್ಥಿ ಸಂಘಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಸಾಮಾಜಿಕ ಹೊಣೆಗಾರಿಕೆ, ಸಂಘಟನಾ ಕೌಶಲ್ಯಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆಯಲ್ಲದೆ, ಭವಿಷ್ಯದಲ್ಲಿ ಉತ್ತಮ ಶಿಕ್ಷಕರಾಗಬೇಕಾದರೆ ಕೇವಲ ಪಾಠದ ಜ್ಞಾನ ಮಾತ್ರವಲ್ಲದೆ ಮಾನವೀಯ ಮೌಲ್ಯಗಳು ಹಾಗೂ ಸೇವಾ ಮನೋಭಾವವೂ ಅಗತ್ಯವೆಂದು ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ. ಶಿವಾನಂದ ನಾಯಕ ತಿಳಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.