ಪಿಲಿಕುಳ ಮತ್ಸ್ಯೋತ್ಸವ; ಮೀನು ಖರೀದಿಗೆ ಮುಗಿಬಿದ್ದ ಜನತೆ

KannadaprabhaNewsNetwork | Published : Jul 22, 2024 1:22 AM

ಸಾರಾಂಶ

ಪಿಲಿಕುಳದಲ್ಲಿ ಭಾನುವಾರ ಆಯೋಜಿಸಲಾದ ಮತ್ಸ್ಯೋತ್ಸವದಲ್ಲಿ ತಾಜಾ ಮೀನುಗಳ ಖರೀದಿಗೆ ಗ್ರಾಹಕರು ಮುಗಿಬಿದ್ದರು. ಸ್ಥಳೀಯ ಹಾಗೂ ದೂರದ ಪ್ರದೇಶಗಳ ಮಂದಿ ತಂಡೋಪತಂಡವಾಗಿ ಆಗಮಿಸಿ ಮೀನು ಖರೀದಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಮತ್ಸ್ಯೋತ್ಸವದಲ್ಲಿ ಗ್ರಾಹಕರಿಗೆ ರೋಹ್‌, ಕಾಟ್ಲ್‌, ತೆಲಪಿಯ, ಕಾಮನ್‌ ಕಾಪ್‌ರ್(ಗೌರಿ ಮೀನು) ಮತ್ತಿತರ ತಾಜಾ ಮೀನುಗಳು ಲಭ್ಯವಿವೆ. ಸುಮಾರು ವರ್ಷಗಳಿಂದ ಇಲ್ಲಿನ ಕೆರೆಯಲ್ಲಿ ಸಾಕಿದ ಮೀನು ಹಿಡಿದು ಸ್ಥಳೀಯ ಹಾಗೂ ದೂರದ ಊರುಗಳ ಮೀನು ಪ್ರಿಯರಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಮೂಲ್ಕಿ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್‌ ಹೇಳಿದರು.

ಅವರು ಭಾನುವಾರ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಮತ್ತು ರಾಜ್ಯ ಸರ್ಕಾರದ ಮೀನುಗಾರಿಕೆ ಇಲಾಖೆ ಆಶ್ರಯದಲ್ಲಿ ಜಿಲ್ಲೆಯ ಸಾರ್ವಜನಿಕ ಕೆರೆಗಳ ಪುನರುಜ್ಜೀವ ನಿರ್ವಾಹಕ, ಹವ್ಯಾಸಿ ಮೀನು ಉದ್ಯಮಿ ಡಾ.ಎಂ.ಸೈಯ್ಯದ್‌ ನಜೀರ್‌ ಮುಂದಾಳತ್ವದಲ್ಲಿ ಪಿಲಿಕುಳ ಲೇಕ್‌ ಗಾರ್ಡನ್‌ನಲ್ಲಿ ಆಯೋಜಿಸಲಾದ ‘ಪಿಲಿಕುಳ ಮತ್ಸ್ಯೋತ್ಸವ’ ಉದ್ಘಾಟಿಸಿ ಮಾತನಾಡಿದರು.

ಹಿಂದಿನ ಜಿಲ್ಲಾಧಿಕಾರಿ ಭರತ್‌ಲಾಲ್‌ ಮೀನಾ ಅವರ ಕನಸಿನ ಕೂಸಾಗಿರುವ ಪಿಲಿಕುಳ ಪ್ರವಾಸಿ ಕೇಂದ್ರದಲ್ಲಿ ಪ್ರತಿವರ್ಷ ಸಾರ್ವಜನಿಕ ಮಟ್ಟದಲ್ಲಿ ನಡೆಯುವ ಒಂದು ಉತ್ತಮ ಕಾರ್ಯಕ್ರಮ ಇದಾಗಿದೆ ಎಂದರು.

ಕೆಎಫ್‌ಡಿಸಿಎಲ್‌ ಪ್ರಧಾನ ವ್ಯವಸ್ಥಾಪಕ ಮಹೇಶ್‌ ಕುಮಾರ್‌ ಮಾತನಾಡಿ, ನಿಗಮದ ವತಿಯಿಂದ ಈ ಬಾರಿ 20,000 ಮೀನು ಮರಿ ಬಿಡಲಾಗಿದೆ. ಇಲ್ಲಿನ ಗ್ರಾಹಕರಿಗೆ ಮಾರಾಟ ಮಾಡಿ ಉಳಿಕೆಯಾದ ಮೀನನ್ನು ಬೆಂಗಳೂರು ಕಬ್ಬನ್‌ ಪಾರ್ಕ್, ಕೋಲಾರ, ತುಮಕೂರಿಗೆ ರಫ್ತು ಮಾಡುತ್ತೇವೆ. ಜತೆಗೆ ಇಲಾಖೆಯೊಂದಿಗೆ ಸಹಕರಿಸುತ್ತಿರುವ 28 ಏಜೆನ್ಸಿಗಳು ಮೀನು ಮಾರಾಟ ಮಾಡುತ್ತವೆ. ಈ ಬಾರಿ ಸುಮಾರು 7-8 ಕಿಲೋ ತೂಕದ ಮೀನುಗಳು ಸಿಕ್ಕಿವೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸಂತೋಷ್‌ ಕುಮಾರ್‌, ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಪ್ರವೀಣ್‌ ನಾಯಕ್‌, ಪಿಲಿಕುಳ ವಿಜ್ಞಾನ ಕೇಂದ್ರ ನಿರ್ದೇಶಕ ಡಾ.ಕೆ.ವಿ.ರಾವ್‌, ದ.ಕ. ಜಿಲ್ಲಾ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ದಿಲೀಪ್‌, ಮೂಡುಶೆಡ್ಡೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಅನಿಲ್‌ ಕುಮಾರ್‌, ಜಿಲ್ಲೆಯ ಸಾರ್ವಜನಿಕ ಕೆರೆಗಳ ಪುನರುಜ್ಜೀವ ನಿರ್ವಾಹಕ, ಹವ್ಯಾಸಿ ಮೀನು ಉದ್ಯಮಿ ಡಾ.ಎಂ.ಸೈಯ್ಯದ್‌ ನಜೀರ್‌ ಮತ್ತಿತರರು ಇದ್ದರು.ಪಿಲಿಕುಳ ಪ್ರಾಧಿಕಾರ ಅಧಿಕಾರಿ ರಾಮಕೃಷ್ಣ ಮರಾಠೆ ಸ್ವಾಗತಿಸಿದರು. ಪ್ರಾಧಿಕಾರದ ಸಸ್ಯಶಾಸ್ತ್ರ ವಿಭಾಗದ ಪ್ರಧಾನ ವಿಜ್ಞಾನಿ ಡಾ.ಸೂರ್ಯಪ್ರಕಾಶ್‌ ಶೆಣೈ ವಂದಿಸಿದರು.ವ್ಯಾಪಕ ಬೇಡಿಕೆ: ಪಿಲಿಕುಳದಲ್ಲಿ ಭಾನುವಾರ ಆಯೋಜಿಸಲಾದ ಮತ್ಸ್ಯೋತ್ಸವದಲ್ಲಿ ತಾಜಾ ಮೀನುಗಳ ಖರೀದಿಗೆ ಗ್ರಾಹಕರು ಮುಗಿಬಿದ್ದರು. ಸ್ಥಳೀಯ ಹಾಗೂ ದೂರದ ಪ್ರದೇಶಗಳ ಮಂದಿ ತಂಡೋಪತಂಡವಾಗಿ ಆಗಮಿಸಿ ಮೀನು ಖರೀದಿಸಿದರು.ಪಿಲಿಕುಳ ಲೇಕ್‌ ಗಾರ್ಡನ್‌ಲ್ಲಿ ಕಳೆದ ರಾತ್ರಿಯೇ ಬೀಡು ಬಿಟ್ಟಿದ್ದ ಡಾ.ನಜೀರ್‌ ಮತ್ತು ತಂಡದ ಸದಸ್ಯರು ತೆಪ್ಪಗಳ ಮೂಲಕ ಕೆರೆಗೆ ಹರಡಲಾದ ಬಲೆಗಳಿಂದ ನಿರಂತರ ಕಾಟ್ಲ, ರೋಹ್‌, ತೆಲಪಿಯ, ಕಾಮನ್‌ ಕಾಪ್‌ರ್ ಹಾಗೂ ಇತರ ಜಾತಿಯ ಮೀನು ಹಿಡಿದು ದಡದಲ್ಲಿ ರಾಶಿ ಹಾಕಿದ್ದು, ಬೆಳಿಗ್ಗಿನಿಂದಲೇ ಬಿರುಸಿನ ಮಾರಾಟ ನಡೆದಿತ್ತು. ಅಲ್ಲೇ ಸಮೀಪ ಮೀನುಗಾರಿಕಾ ಇಲಾಖೆಯು ಮೀನಿನ ಖಾದ್ಯಗಳ ವ್ಯವಸ್ಥೆ ಮಾಡಿತ್ತು.

Share this article