ವೀರಶೈವ-ಲಿಂಗಾಯತ ಅಧಿವೇಶನಕ್ಕೆ ಜಿಲ್ಲೆಯಿಂದ 25 ಸಾವಿರ ಜನರ ನಿರೀಕ್ಷೆ

KannadaprabhaNewsNetwork |  
Published : Dec 21, 2023, 01:15 AM IST
ವೀರಣ್ಣ ಮತ್ತಿಕಟ್ಟಿ | Kannada Prabha

ಸಾರಾಂಶ

ಸಮಾವೇಶದಲ್ಲಿ ಸುಮಾರು ಎರಡು ಲಕ್ಷ ಜನ ಸೇರುತ್ತಿದ್ದು ಎರಡು ದಿನಗಳ ಕಾಲ ಹಲವು ಅಧಿವೇಶನಗಳು ನಡೆಯಲಿವೆ. ಈ ಮೂಲಕ ಸಮಾಜದ ಒಗ್ಗಟ್ಟು ತೋರಿಸುವ ಮೂಲಕ ಬೇಡಿಕೆ ಈಡೇರಿಸಿಕೊಳ್ಳಬೇಕಿದೆ ಎಂದು ವಿಧಾನ ಪರಿಷತ್‌ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಹೇಳಿದರು.

- ಡಿ. 23, 24ರಂದು ದಾವಣಗೆರೆಯಲ್ಲಿ ನಡೆಯಲಿರುವ ಅಧಿವೇಶನ

- ಒಳಪಂಗಡ ಮರೆತು ಸಂಘಟಿತರಾಗಿ ಕೇಂದ್ರದಲ್ಲಿ ಒಬಿಸಿ ಮೀಸಲಾತಿ ಪಡೆಯೋಣ-ವೀರಣ್ಣ ಮತ್ತಿಕಟ್ಟಿ

ಕನ್ನಡಪ್ರಭ ವಾರ್ತೆ ಧಾರವಾಡ

ಕೇಂದ್ರದಲ್ಲಿ ಸಮಾಜಕ್ಕೆ ಹಿಂದುಳಿದ ವರ್ಗ ಮೀಸಲಾತಿ ಪಡೆಯುವ ಹಿನ್ನೆಲೆಯಲ್ಲಿ ವೀರಶೈವ-ಲಿಂಗಾಯತ ಒಳಪಂಗಡಗಳು ಸಂಘಟಿತರಾಗಿ ಡಿ. 23 ಹಾಗೂ 24ರಂದು ದಾವಣಗೆರೆಯಲ್ಲಿ ಆಯೋಜನೆ ಮಾಡಿರುವ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ 24ನೇ ಅಧಿವೇಶನಕ್ಕೆ ಧಾರವಾಡ ಜಿಲ್ಲೆಯಿಂದ 25 ಸಾವಿರದಿಂದ 50 ಸಾವಿರ ಸಮಾಜದ ಜನರ ನಿರೀಕ್ಷೆ ಮಾಡಲಾಗಿದೆ ಎಂದು ಸಮಾಜದ ಮುಖಂಡರು, ವಿಧಾನ ಪರಿಷತ್‌ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ಸಮಾವೇಶದಲ್ಲಿ ಸುಮಾರು ಎರಡು ಲಕ್ಷ ಜನ ಸೇರುತ್ತಿದ್ದು ಎರಡು ದಿನಗಳ ಕಾಲ ಹಲವು ಅಧಿವೇಶನಗಳು ನಡೆಯಲಿವೆ. ಈ ಮೂಲಕ ಸಮಾಜದ ಒಗ್ಗಟ್ಟು ತೋರಿಸುವ ಮೂಲಕ ಬೇಡಿಕೆ ಈಡೇರಿಸಿಕೊಳ್ಳಬೇಕಿದೆ. ಎರಡು ದಿನಗಳ ಕಾಲ ದಾವಣಗೆರೆಯ ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿ ನಡೆಯಲಿರುವ ಅಧಿವೇಶನವನ್ನು ಡಿ. 23ರಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಲಿದ್ದು, ಶ್ರೀಶೈಲ್ ಪೀಠದ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು, ತುಮಕೂರು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಸಾನಿಧ್ಯ ವಹಿಸುತ್ತಾರೆ. ಮಹಾಸಭೆ ಅಧ್ಯಕ್ಷ ಡಾ.ಶಾಮನೂರ ಶಿವಶಂಕರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಎರಡು ದಿನಗಳಲ್ಲಿ ಕೃಷಿ ಮತ್ತು ಕೈಗಾರಿಕೆ ಅಧಿವೇಶನ, ಶೈಕ್ಷಣಿಕ ಅಧಿವೇಶನ, ಧಾರ್ಮಿಕ ಅಧಿವೇಶನ, ಮಹಿಳಾ ಮತ್ತು ಯವ ಅಧಿವೇಶನ, ನೌಕರರ ಅಧಿವೇಶನ, ಸಾಹಿತಿಗಳ ಅಧಿವೇಶನಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಸಮಾಜದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.

ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ದೊಡ್ಡ ಸಮಾಜವಾಗಿರುವ ಕಾರಣ ಒಳಪಂಗಡಗಳಾಗಿ ಒಡೆದು ಹೋಗಿದೆ. ಅಸ್ತಿತ್ವ ಕಳೆದುಕೊಂಡಿರುವ ವೀರಶೈವ-ಲಿಂಗಾಯತ ಸಮಾಜವನ್ನು ಮತ್ತೇ ಒಂದಾಗಿ ಕಟ್ಟುವ ಉದ್ದೇಶದಿಂದ 119 ವರ್ಷಗಳ ಹಿಂದೆ ಹಾನಗಲ್‌ ಕುಮಾರಸ್ವಾಮಿಗಳು ಮಹಾಸಭೆ ಕಟ್ಟಿದರು. ಆದ್ದರಿಂದ ನಾವು ಒಳಪಂಗಡ ಮರೆತು ಸಂಘಟನೆ ಆಗುವಲ್ಲಿ ಮುನ್ನಡೆಯಬೇಕಿದೆ. ಎಲ್ಲ ಧರ್ಮಗಳು ಒಗ್ಗಟ್ಟಿನ ಅಸ್ತಿತ್ವದ ಮೇಲೆ ವ್ಯವಸ್ಥೆಯನ್ನು ಅಲುಗಾಡಿಸುತ್ತಿವೆ. ಅದೇ ಮಾರ್ಗದಲ್ಲಿ ತಾವು ಸಹ ಗಟ್ಟಿಯಾಗಿ ಸಂಘಟನೆಯಾಗಿ ಶೈಕ್ಷಣಿಕ, ಔದ್ಯೋಗಿಕ, ಧಾರ್ಮಿಕ, ರಾಜಕೀಯವಾಗಿ ಉನ್ನತ ಸ್ಥಾನದಲ್ಲಿರಬೇಕಿದೆ. ಈ ಹಿನ್ನೆಲೆಯಲ್ಲಿ ಮಹಾಸಭೆ ಮಹತ್ವದಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸ್ವಾಮೀಜಿ ಮನವಿ ಮಾಡಿದರು.

ಮಹಾಸಭೆ ಜಿಲ್ಲಾಧ್ಯಕ್ಷ ಗುರುರಾಜ ಹುಣಸೀಮರದ, ಕಾರ್ಯದರ್ಶಿ ಶಿವಶರಣ ಕಲಬಶೆಟ್ಟರ್‌, ಮುಖಂಡರಾದ ಟಿ.ಎಸ್‌.ಪಾಟೀಲ, ವಿಜಯಲಕ್ಷ್ಮಿ ಕಲ್ಯಾಣಶೆಟ್ಟಿ, ಪ್ರಭಾವತಿ ವಡ್ಡೀನ, ರವಿ ಕೂಡವಕ್ಕಲಿಗಾರ ಮತ್ತಿತರರು ಇದ್ದರು.ಲಿಂಗರಾಜರ ಮರೆತ ಮಹಾಸಭಾ

ದಾವಣಗೆರೆಯಲ್ಲಿ ನಡೆಯುತ್ತಿರುವ ವೀರಶೈವ-ಲಿಂಗಾಯತ ಮಹಾಸಭಾದ 24ನೇ ಅಧಿವೇಶನದಲ್ಲಿ ಸಭಾದ ಸಂಸ್ಥಾಪರಲ್ಲಿ ಒಬ್ಬರಾದ ಶಿರಸಂಗಿ ಲಿಂಗರಾಜ ಅವರನ್ನು ಮರೆತಿದ್ದಾಗಿ ಲಿಂಗರಾಜ ವಿವಿದೋದ್ಧೇಶ ಸಂಸ್ಥೆ ಅಧ್ಯಕ್ಷ ಆರ್.ಆರ್. ಕುಡವಕ್ಕಲಿಗರ ಸುದ್ದಿಗೋಷ್ಠಿಯಲ್ಲಿ ಆರೋಪ ಮಾಡಿದ್ದಾರೆ. ಅಧಿವೇಶನದಲ್ಲಿ ಯಾವುದೇ ವೇದಿಕೆಗೆ ಶಿರಸಂಗಿ ಲಿಂಗರಾಜ ಹೆಸರಿಟ್ಟಿಲ್ಲ. ಎಲ್ಲೂ ಅವರ ಭಾವಚಿತ್ರ ಅಳವಡಿಸಿಲ್ಲ. ಮಹಾಸಭಾದ ನಿರ್ಲಕ್ಷ್ಯ ವಹಿಸಿದೆ. ಇಂತಹ ಪುಣ್ಯಾತ್ಮನನ್ನು ಅಧಿವೇಶನದಲ್ಲಿ ಮಹಾಸಭಾ ಮರೆತಿರುವುದು ಲಿಂಗರಾಜರ ಅಭಿಮಾನಿಗಳಿಗೆ ನೋವು ತಂದಿದೆ ಎಂದರು. ತದ ನಂತರ ಮಹಾಸಭಾ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಹಾಸಭಾ ಪದಾಧಿಕಾರಿಗಳು ರಾಜ್ಯ ಘಟಕದ ಪರವಾಗಿ ಕ್ಷಮೆ ಕೇಳಿ ಈ ಪ್ರಮಾದ ಸರಿಪಡಿಸಲು ರಾಜ್ಯ ಘಟಕಕ್ಕೆ ಮನವಿ ಮಾಡುವುದಾಗಿ ಭರವಸೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತಿವೇಗ ಎಂದರೆ ನಿರ್ಲಕ್ಷ್ಯದ ಚಾಲನೆ ಅಲ್ಲ: ಹೈಕೋರ್ಟ್‌
‘ಜಾಹೀರಾತಲ್ಲಿ ಗಾಂಧೀಜಿ ಬಳಕೆ ಗಾಂಧೀಜಿಯರ ಮೌಲ್ಯಗಳ ಹತ್ಯೆ’