ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಭಾನುವಾರ ಸಂಜೆ ಬೀಸಿದ ಬಿರುಗಾಳಿಗೆ ತಾಲೂಕಾದ್ಯಂತ 250ಕ್ಕೂ ಹೆಚ್ಚು ಎಕರೆ ಬಾಳೆ ನೆಲಕ್ಕುರಳಿದ್ದು, 20ಕ್ಕೂ ವಿದ್ಯುತ್ ಕಂಬ ಹಾಗೂ ಹಲವಾರು ಮನೆಗಳು ಕುಸಿದು ಬಿದ್ದಿವೆ.
ಗ್ರಾಮ ಆಡಳಿತ ಅಧಿಕಾರಿ ಗೋವರ್ಧನ್ ಬಾಳೆ ನೆಲಸಮಗೊಂಡ ಜಮೀನಿಗೆ ಭೇಟಿ ನೀಡಿ ಮಹಜರು ನಡೆಸಿದ್ದು, ಸೋಮವಾರವೂ ಮುಗಿಯದ ಕಾರಣ ಮಂಗಳವಾರ ದಿನವೂ ಮಹಜರು ನಡೆಸಲಿದ್ದಾರೆ. ವಿಎ ಗೋವರ್ಧನ್ ಪ್ರಕಾರ ನೂರಾರು ಎಕರೆ ಪ್ರದೇಶದಲ್ಲಿ ಬಾಳೆ ಹಾನಿಯಾಗಿದೆ. ಬಾಳೆ ನಷ್ಟ ಖಚಿತವಾಗಿ ಹೇಳಲು ಬರುತ್ತಿಲ್ಲ. ಕೋಡಸೋಗೆ ಬಳಿಯೂ ಬಾಳೆ ಹಾನಿಯಾಗಿದೆ ಎಂಬ ಮಾಹಿತಿಯಿದೆ ಎಂದರು.
ತಹಸೀಲ್ದಾರ್ ಟಿ.ರಮೇಶ್ ಬಾಬು ಮಾತನಾಡಿ, ಭಾನುವಾರ ಸಂಜೆ ಬೀಸಿದ ಗಾಳಿಗೆ ಬಾಳೆ ಹಾಗೂ ವಿದ್ಯುತ್ ಕಂಬಗಳು ಉರುಳಿವೆ ಎಂಬ ಮಾಹಿತಿ ಬಂದಿದೆ. ವರದಿ ಕೊಡಲು ಗ್ರಾಮ ಆಡಳಿತ ಅಧಿಕಾರಿಗೆ ಸೂಚನೆ ನೀಡಿದ್ದೇನೆ. ಅಂದಾಜು ಬಾಳೆ 250ಕ್ಕೂ ಹೆಚ್ಚು ಪ್ರದೇಶದಲ್ಲಿ ಹಾನಿಯಾಗಿದೆ ಎಂದರು.ಕಣ್ಣೀರು ಹಾಕಿದ ದಂಪತಿ:ಕೋಡಸೋಗೆ ಗ್ರಾಮದ ಬಳಿಯ ರೈತರೊಬ್ಬರ ಬಾಳೆ ಗಿಡ ಸಂಪೂರ್ಣ ನೆಲಸಮವಾಗಿರುವುದನ್ನು ಕಂಡು ರೈತ ದಂಪತಿ ಜಮೀನಿನಲ್ಲಿ ಕುಳಿತು ಕಣ್ಣೀರು ಹಾಕುತ್ತಿದ್ದರು ಎನ್ನಲಾಗಿದೆ.ಮುರಿದ ವಿದ್ಯುತ್ ಕಂಬ:ಶೀಲವಂತಪುರ, ಸೋಮನಪುರ ಸುತ್ತ ಮುತ್ತ ಬೀಸಿದ ಬಿರುಗಾಳಿಗೆ ಸುಮಾರು 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಗಾಳಿಯ ವೇಗಕ್ಕೆ ಜಂಘಾ ಬಲವೇ ಅಡಗಿ ಹೋಗಿತ್ತು ಎಂದು ರೈತರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ. ಇತ್ತೀಚಿನ ದಶಕಗಳಲ್ಲಿ ಈ ಪರಿಯ ಬಿರುಗಾಳಿ ನೋಡೇ ಇಲ್ಲ ಎಂದು ರೈತರು ಹೇಳಿದ್ದು ಗಾಳಿಯ ಆತಂಕ ದೂರವಾಗಿಲ್ಲ ಎಂದು ಕೊಡಸೋಗೆ ಗ್ರಾಮದ ಶಿವಪ್ರಸಾದ್ ಹೇಳಿದ್ದಾರೆ.ರೈತರಲ್ಲಿ ಹೆಚ್ಚಿದ ಆತಂಕ:ಸಾಲ, ಸೋಲ ಮಾಡಿ ಕಷ್ಟ ಪಟ್ಟು ಬೆಳದ ಬೆಳೆ ಕೈ ಸೇರುವ ಹೊತ್ತಿಗೆ ಬಾಯಿಗೆ ಬರಲಿಲ್ಲವಲ್ಲ ಎಂಬ ಬೇಸರದ ಜೊತೆಗೆ ಆತಂಕವೂ ಬಂದಿದೆ. ಬಿರುಗಾಳಿಗೆ ನೂರಾರು ಎಕರೆ ಪ್ರದೇಶದಲ್ಲಿ ಬಾಳೆ ನೆಲಸಮಗೊಂಡಿರುವುದಕ್ಕೆ ತಾಲೂಕು ಆಡಳಿತ ಕೂಡಲೇ ಪರಿಹಾರ ನೀಡಬೇಕು ಎಂದು ಜಿಲ್ಲಾ ರೈತಸಂಘದ ಅಧ್ಯಕ್ಷ ಶಿವಪುರ ಮಹದೇವಪ್ಪ ಆಗ್ರಹಿಸಿದ್ದಾರೆ.
ಭಾನುವಾರ ಸಂಜೆ ಬೀಸಿದ ಬಿರುಗಾಳಿಗೆ ನೆಲಕ್ಕುರುಳಿದ ಪ್ರದೇಶಗಳಿಗೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಭೇಟಿ ನೀಡಿ ರೈತರಿಗೆ ಧೈರ್ಯ ತುಂಬಿದರು. ಸೋಮನಪುರ, ಶೀಲವಂತಪುರ ಸೇರಿದಂತೆ ಬಾಳೆ ನಾಶವಾದ ಜಮೀನಿಗೆ ಭೇಟಿ ರೈತರಿಗೆ ಪರಿಹಾರದ ಭರವಸೆ ನೀಡಿದ ಬಳಿಕ ಎಚ್.ಎಸ್.ಮಹದೇವಪ್ರಸಾದ್ ಫೌಂಡೇಷನ್‌ನಿಂದ ರೈತರಿಗೆ ಧನ ಸಹಾಯ ಮಾಡಿದರು. ಶಾಸಕರೊಂದಿಗೆ ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ ಸೇರಿದಂತೆ ರೈತರು ಇದ್ದರು.