ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿಲ್ಲಾಧಿಕಾರಿ ವೆಂಕಟ್ ರಾಜಾ, ಇನ್ಫೋಸಿಸ್ ಸಂಸ್ಥೆಯ ಸುನಿಲ್ ಕುಮಾರ್, ಸಂತೋಷ್ ಹಾಗೂ ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ ಅವರ ಉಪಸ್ಥಿತಿಯಲ್ಲಿ ಲಾಟರಿ ಮೂಲಕ ‘ಮನೆ ಹಂಚಿಕೆ’ ಕಾರ್ಯವು ಪಾರದರ್ಶಕವಾಗಿ ನಡೆಯಿತು.
‘ಸೋಮವಾರಪೇಟೆ ತಾಲೂಕಿನ ಜಂಬೂರಿನಲ್ಲಿ ಇನ್ಫೋಸಿಸ್ ಸಂಸ್ಥೆ ವತಿಯಿಂದ ನಿರ್ಮಾಣವಾಗಿರುವ 200 ಮನೆಗಳು ಸೇರಿದಂತೆ ಜಂಬೂರಿನಲ್ಲಿ ಇಂಡಿಯನ್ ಹ್ಯಾಬಿಟೇಟ್ ಸಂಸ್ಥೆಯಿಂದ ನಿರ್ಮಾಣವಾಗಿರುವ 4 ಮನೆಗಳು, ಜೊತೆಗೆ ಮದೆನಾಡು ಬಳಿ 4, ಕೆ.ನಿಡುಗಣೆ ಬಳಿ 2, ಗಾಳಿಬೀಡು ಬಳಿ 42 ಸೇರಿದಂತೆ ಒಟ್ಟು 252 ಮನೆಗಳ ಹಂಚಿಕೆ ಕಾರ್ಯವು ಸಂತ್ರಸ್ತರ ಸಮ್ಮುಖದಲ್ಲಿ ಮನೆ ಹಂಚಿಕೆ ನಡೆಯಿತು. ಲಾಟರಿ ತೆಗೆಯುವ ಮೂಲಕ ಸಂತ್ರಸ್ತರೇ ತಮ್ಮ ಮನೆ ಸಂಖ್ಯೆ ಆಯ್ಕೆ ಮಾಡಿಕೊಂಡರು.ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು 2018-19 ರಲ್ಲಿ ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡಿದ್ದ ಬಾಕಿ ಕುಟುಂಬದವರಿಗೆ ಮನೆ ಹಂಚಿಕೆ ಮಾಡಲಾಗುತ್ತಿದೆ. ಇನ್ಫೋಸಿಸ್ ಸಂಸ್ಥೆಯಿಂದ 200 ಮನೆಗಳು ಸೇರಿದಂತೆ ಹ್ಯಾಬಿಟೇಟ್ ಸಂಸ್ಥೆಯಿಂದ ವಿವಿಧ ಕಡೆಗಳಲ್ಲಿ ನಿರ್ಮಿಸಿರುವ 52 ಮನೆಗಳನ್ನು ಲಾಟರಿ ಮೂಲಕ ಪಾರದರ್ಶಕವಾಗಿ ಮನೆ ಹಂಚಿಕೆ ಮಾಡಲಾಗುತ್ತಿದೆ ಎಂದು ವಿವರಿಸಿದರು.
‘ಈಗಾಗಲೇ ಲಾಟರಿ ಮೂಲಕ ಮನೆ ಹಂಚಿಕೆ ಮಾಡಲಾಗಿದ್ದು, ಮನೆ ಹಕ್ಕುಪತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರಿಂದ ಶೀಘ್ರ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.’
ಎರಡು ಬೆಡ್‌ರೂಮ್ ಒಳಗೊಂಡ ಲೈಟಿಂಗ್ ಸೇರಿದಂತೆ ಹಲವು ಮೂಲ ಸೌಕರ್ಯಗಳನ್ನು ಮನೆ ಒಳಗೊಂಡಿದೆ. ಸರ್ಕಾರ ಹಾಗೂ ಜಿಲ್ಲಾಡಳಿತದ ನಿರಂತರ ಪರಿಶ್ರಮದಿಂದ ಈ ಕಾರ್ಯ ಆಗಿದೆ ಎಂದು ಅವರು ನುಡಿದರು.
ಉಪ ವಿಭಾಗಾಧಿಕಾರಿ ಹಾಗೂ ಮನೆ ಹಂಚಿಕೆ ನೋಡಲ್ ಅಧಿಕಾರಿ ವಿನಾಯಕ ನರ್ವಾಡೆ ಅವರು ಮಾತನಾಡಿ ಸಂತ್ರಸ್ತರು ಮೊದಲ ಆದ್ಯತೆಯಲ್ಲಿ ಗಾಳಿಬೀಡು, ಎರಡನೇ ಆದ್ಯತೆಯಲ್ಲಿ ಜಂಬೂರು ಆಯ್ಕೆ ಮಾಡಿದ್ದರು. ಇನ್ಫೋಸಿಸ್ ಸಂಸ್ಥೆಯ 200 ಮನೆಗಳು ಜೊತೆಗೆ ವಿವಿಧ ಪ್ರದೇಶದ 52 ಮನೆಗಳನ್ನು ಪಾರದರ್ಶಕವಾಗಿ ಹಂಚಿಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬುಧವಾರ ಮನೆ ಹಂಚಿಕೆ ಮಾಡಲಾದ 252 ಮನೆಗಳು ಸೇರಿದಂತೆ ಒಟ್ಟು 838 ಮನೆಗಳನ್ನು ಸಂತ್ರಸ್ತರಿಗೆ ಹಂಚಿಕೆ ಮಾಡಿದಂತಾಗಿದೆ.