ಶಿರಸಿ: ಧರ್ಮ, ಅಧ್ಯಾತ್ಮ, ಸಂಸ್ಕೃತಿ, ಪರಂಪರೆ, ಇತಿಹಾಸ, ಯೋಗ, ಆಯುರ್ವೇದ ಪರಿಚಯಿಸುವ ನಿಟ್ಟಿನಲ್ಲಿ ಜನ್ಮ ಪಡೆದ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಪ್ರಮುಖ ಅಂಗ ಸಂಸ್ಥೆಯಾದ ಶ್ರೀ ಭಗವತ್ಪಾದ ಪ್ರಕಾಶನವು ರಜತ ವರ್ಷ ಸಂಭ್ರಮದಲ್ಲಿದೆ.
ನವೆಂಬರ್ ೨೫ರಂದು ಸ್ವರ್ಣವಲ್ಲಿಯ ಸುಧರ್ಮಾ ಸಭಾಂಗಣದಲ್ಲಿ ಮಹಾ ಸಂಸ್ಥಾನದ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ರಜತ ಮಹೋತ್ಸವ ನಡೆಯಲಿದೆ ಎಂದರು.
ಬಹುಮುಖಿ ಕಾರ್ಯ: ಪ್ರಕಾಶನದ ಮೂಲಕ ಶಾಶ್ವತ ಹಾಗೂ ಬಹುಮುಖಿ ಕಾರ್ಯ ಮಾಡುತ್ತಿರುವ ಶ್ರೀ ಭಗವತ್ಪಾದ ಪ್ರಕಾಶನ ಹಾಗೂ ಅದು ಪ್ರಕಟಿಸುವ ಸ್ವರ್ಣವಲ್ಲೀ ಪ್ರಭಾ ಆಧ್ಯಾತ್ಮಿಕ ಮಾಸ ಪತ್ರಿಕೆ ಕೂಡ ರಜತ ವರ್ಷ ಕಾಲಘಟ್ಟದಲ್ಲಿದೆ. ೧೯೯೮ರ ನವೆಂಬರ ತಿಂಗಳ ೨೬ರಂದು ಸ್ವರ್ಣವಲ್ಲೀಯಲ್ಲಿ ನಡೆದಿದ್ದ ದಕ್ಷಿಣ ವಲಯ ವೇದ ಸಮ್ಮೇಳನದ ಸಂದರ್ಭದಲ್ಲಿ ಶ್ರೀಭಗವತ್ಪಾದ ಪ್ರಕಾಶನ ಅಸ್ತಿತ್ವಕ್ಕೆ ಬಂದಿದ್ದು, ಅಲ್ಲಿಂದ ಇಲ್ಲಿಯವರೆಗೆ ನಿರಂತರವಾಗಿ ಸ್ವರ್ಣವಲ್ಲೀ ಪ್ರಭಾ ಅಧ್ಯಾತ್ಮ ಪತ್ರಿಕೆ ಹಾಗೂ ೧೩೦ಕ್ಕೂ ಅಧಿಕ ಕೃತಿಗಳನ್ನು ಕನ್ನಡ, ಆಂಗ್ಲ, ಸಂಸ್ಕೃತ ಭಾಷೆಗಳಲ್ಲಿ ಪ್ರಕಟಿಸಿದೆ.ಶ್ರೀಭಗವತ್ಪಾದ ಪ್ರಕಾಶನ ಪ್ರಕಟಿಸಿದ ಸ್ವರ್ಣವಲ್ಲೀ ಶ್ರೀಗಳ ಗೀತಾಂತರಂಗ ಕೃತಿ ಮರಾಠಿ, ಆಂಗ್ಲ ಭಾಷೆಗೂ ಭಾಷಾಂತರಗೊಂಡಿದೆ. ಇದೀಗ ಈ ಕೃತಿ ಹಿಂದಿಗೂ ಭಾಷಾಂತರ ಆಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಹೊಳೆನರಸೀಪುರದ ಅಧ್ಯಾತ್ಮ ಪ್ರಕಾಶಕ್ಕೆ ಸನ್ಮಾನ ನಡೆಯಲಿದೆ. ಅಧ್ಯಾತ್ಮ ಪ್ರಕಾಶ ಪತ್ರಿಕೆಯ ಉಪ ಸಂಪಾದಕ ಲಕ್ಷ್ಮೀಶ ಭಟ್ಟ ಉಪಸ್ಥಿತರಿಲಿದ್ದಾರೆ.
ಹಾಸಣಗಿ ಸಂಗೀತ ಸಂಭ್ರಮ: ಸಭಾ ಕಾರ್ಯಕ್ರಮದ ಬಳಿಕ ಹಿರಿಯ ಹಿಂದುಸ್ತಾನಿ ಗಾಯಕ ಪಂ. ಗಣಪತಿ ಭಟ್ಟ ಹಾಸಣಗಿ ಅವರ ಸಂಗೀತ ಕಾರ್ಯಕ್ರಮ ನಡೆಯಲಿದೆ. ತಬಲಾದಲ್ಲಿ ಶ್ರೀಧರ ಮಾಂಡ್ರೆ, ಸಂವಾದಿನಿಯಲ್ಲಿ ಸತೀಶ ಭಟ್ಟ ಹೆಗ್ಗಾರ ಭಾಗವಹಿಸಲಿದ್ದಾರೆ ಎಂದರು.