ಹುಬ್ಬಳ್ಳಿ: ಸಾರ್ವಜನಿಕರ ದೂರಿನ ಮೇರೆಗೆ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಶನಿವಾರ ರಾತ್ರಿ ದ್ವಿಚಕ್ರ ವಾಹನವೇರಿ ಕಾರ್ಯಾಚರಣೆ ಕೈಗೊಂಡರು. ಈ ವೇಳೆ ಸೂಕ್ತ ದಾಖಲೆಗಳಿಲ್ಲದೇ ಸಂಚರಿಸುತ್ತಿದ್ದ 264 ದ್ವಿಚಕ್ರ ವಾಹನ ಹಾಗೂ 3 ಆಟೋಗಳನ್ನು ವಶಕ್ಕೆ ಪಡೆಯಲಾಯಿತು.
ಕಮೀಷನರೇಟ್ ವ್ಯಾಪ್ತಿಯ ಹು-ಧಾ ದಕ್ಷಿಣ ಉಪವಿಭಾಗದ ಐದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಸವಾರರು ರಾತ್ರಿಯ ವೇಳೆ ಅತೀ ವೇಗವಾಗಿ ವಾಹನ ಚಾಲನೆ, ನಿಯಮ ಉಲ್ಲಂಘನೆ, ರಸ್ತೆ ಮಧ್ಯದಲ್ಲಿಯೇ ವಾಹನದ ಮೇಲೆ ಕುಳಿತು ಧೂಮಪಾನ, ಮದ್ಯಪಾನ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವ ಕುರಿತು ಪೊಲೀಸ್ ಠಾಣೆಗಳಿಗೆ ಹಲವು ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ 9ರಿಂದ 12ರ ವರೆಗೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಸ್ವತಃ ದ್ವಿಚಕ್ರ ವಾಹನದಲ್ಲಿ ಸಂಚರಿಸುವ ಮೂಲಕ ಹಲವು ಕಡೆಗಳಲ್ಲಿ ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ತಡೆದು ತಪಾಸಣೆಗೊಳಪಡಿಸಿದರು. ಪರಿಶೀಲನೆಯ ವೇಳೆ ಸೂಕ್ತ ದಾಖಲಾತಿ ಇರದ ವಾಹನಗಳನ್ನು ವಶಕ್ಕೆ ಪಡೆದರು.14 ಚೆಕ್‌ಪೋಸ್ಟ್
ದಕ್ಷಿಣ ಉಪವಿಭಾಗ ವ್ಯಾಪ್ತಿಗೆ ಬರುವ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಾಕಲಾಗಿದ್ದ 5 ಚೆಕ್ ಪೋಸ್ಟ್‌ಗಳಲ್ಲಿ 66 ದ್ವಿಚಕ್ರ ಹಾಗೂ 3 ಆಟೋಗಳನ್ನು ವಶಕ್ಕೆ ಪಡೆಯಲಾಯಿತು. ಕಸಬಾಪೇಟೆ ಠಾಣಾ ವ್ಯಾಪ್ತಿಯಲ್ಲಿ ಹಾಕಲಾಗಿದ್ದ ಎರಡು ಚೆಕ್‌ಪೋಸ್ಟ್‌ಗಳಲ್ಲಿ 62 ದ್ವಿಚಕ್ರ ವಾಹನ, ಘಂಟಿಕೇರಿ ಠಾಣಾ ವ್ಯಾಪ್ತಿಯಲ್ಲಿನ ಎರಡು ಚೆಕ್‌ಪೋಸ್ಟ್‌ಗಳಲ್ಲಿ 27, ಹುಬ್ಬಳ್ಳಿ ಶಹರ ಠಾಣಾ ವ್ಯಾಪ್ತಿಯ 3 ಚೆಕ್‌ಪೋಸ್ಟ್‌ಗಳಲ್ಲಿ 45, ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿ ಎರಡು ಚೆಕ್‌ಪೋಸ್ಟ್‌ಗಳಲ್ಲಿ 64 ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಯಿತು.264 ಬೈಕ್ ವಶಕ್ಕೆ
ವಶಪಡಿಸಿಕೊಂಡ ವಾಹನಗಳಲ್ಲಿ ಕಸಬಾಪೇಟೆ ಪೊಲೀಸ್ ಠಾಣಾ ಆವರಣದಲ್ಲಿರಿಸಲಾಗಿತ್ತು. ಭಾನುವಾರ ಕಸಬಾಪೇಟೆ ಠಾಣೆಗೆ ಭೇಟಿ ನೀಡಿ ಮಾತನಾಡಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಹು-ಧಾ ಮಹಾನಗರ ಕಮಿಷನರೇಟ್ ವ್ಯಾಪ್ತಿಯ ದಕ್ಷಿಣ ಉಪವಿಭಾಗದ 5 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅತೀ ವೇಗ, ಸಂಚಾರಿ ನಿಯಮ ಉಲ್ಲಂಘನೆ, ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವ ಬಗ್ಗೆ ದೂರು ಬಂದಿತ್ತು. ಈ ಹಿನ್ನೆಲೆ ಶನಿವಾರ ರಾತ್ರಿ ಒಟ್ಟು 14 ಪ್ರತ್ಯೇಕ ಸ್ಥಳಗಳಲ್ಲಿ ಚೆಕ್ ಪೋಸ್ಟ್ ಹಾಕಿ ಸುಮಾರು 264 ಅಗತ್ಯ ಮತ್ತು ಸೂಕ್ತ ದಾಖಲೆಗಳಿಲ್ಲದ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.ಮುಂದುವರಿಯಲಿದೆ
ವಶಕ್ಕೆ ಪಡೆದ ದ್ವಿಚಕ್ರ ವಾಹನಗಳಲ್ಲಿ ನಂಬರ್ ಪ್ಲೇಟ್ ಇಲ್ಲದೇ ಇರುವ ವಾಹನಗಳು ಸಾಕಷ್ಟಿವೆ. ದಾಖಲಾತಿ ನೀಡಿದವರನ್ನು ಹೊರತು ಪಡಿಸಿ, ಉಳಿದ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಚಿನ್ನಾಭರಣ ಕಳ್ಳತನ, ದರೋಡೆ, ಕೊಲೆ ಪ್ರಯತ್ನ, ಕಳ್ಳತನ ಸೇರಿ ಹಲವು ಪ್ರಕರಣಗಳಲ್ಲಿ ಹೆಚ್ಚಾಗಿ ಇಂತಹ ದ್ವಿಚಕ್ರ ವಾಹನಗಳನ್ನು ಉಪಯೋಗಿಸಲಾಗುತ್ತಿದೆ. ವಶಕ್ಕೆ ಪಡೆದ ವಾಹನಗಳ ಮೇಲೆ ಪ್ರಕರಣ ಸಹ ದಾಖಲಿಸಲಾಗುತ್ತಿದೆ. ನಿಯಮಾವಳಿ ಪ್ರಕಾರವೇ ಅದನ್ನು ಬಿಡಿಸಿಕೊಳ್ಳಬಹುದು. ಇದು ಮೊದಲ ಹಂತದ ಕಾರ್ಯಾಚರಣೆಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತೆ ಮುಂದುವರಿಸಲಾಗುವುದು ಎಂದರು.ಹು-ಧಾ ಮಹಾನಗರ ವ್ಯಾಪ್ತಿಯಲ್ಲಿ ಹಲವು ಅಪರಾಧ ಪ್ರಕರಣಗಳಲ್ಲಿ ಕಾರು ಸೇರಿದಂತೆ ನಾಲ್ಕು ಚಕ್ರ ವಾಹನಗಳ ಬಳಕೆಯೂ ಕಂಡುಬಂದಿದೆ. ಈ ಕುರಿತು ಈಗಾಗಲೇ ಪರಿಶೀಲನೆ ನಡೆಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದೇ ಮಾದರಿಯಲ್ಲಿ ನಾಲ್ಕು ಚಕ್ರದ ವಾಹನಗಳ ಪರಿಶೀಲನೆಗೂ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ವೇಳೆ ಡಿಸಿಪಿ ಮಹಾನಿಂಗ ನಂದಗಾವಿ, ಎಸಿಪಿಗಳಾದ ಉಮೇಶ ಚಿಕ್ಕಮಠ, ಶಿವಪ್ರಕಾಶ ನಾಯಕ, ಇನ್‌ಸ್ಪೆಕ್ಟರ್‌ಗಳಾದ ರಾಘವೇಂದ್ರ ಹಳ್ಳೂರ, ಸುರೇಶ ಯಳ್ಳೂರ, ಎಂ.ಎಂ. ತಹಸೀಲ್ದಾರ್, ಎಸ್.ಆರ್. ನಾಯಕ, ಬಿ.ಎ. ಜಾಧವ ಸೇರಿದಂತೆ ಹಲವರಿದ್ದರು.