ಪತ್ರಕರ್ತರ ಶ್ರೇಯೋಭಿವೃದ್ಧಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಸಾಕಷ್ಟು ಶ್ರಮಿಸಿದ್ದಾರೆ ಎಂದು ‘ಕನ್ನಡಪ್ರಭ’ ಪ್ರಧಾನ ಸಂಪಾದಕರಾದ ರವಿ ಹೆಗಡೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬೆಂಗಳೂರು : ಪತ್ರಕರ್ತರ ಶ್ರೇಯೋಭಿವೃದ್ಧಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಸಾಕಷ್ಟು ಶ್ರಮಿಸಿದ್ದಾರೆ ಎಂದು ‘ಕನ್ನಡಪ್ರಭ’ ಪ್ರಧಾನ ಸಂಪಾದಕರಾದ ರವಿ ಹೆಗಡೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬೆಂಗಳೂರು ನಾಗರಿಕರ ವೇದಿಕೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಶೇಷಾದ್ರಿಪುರಂ ಕಾಲೇಜಿನಲ್ಲಿ ಆಯೋಜಿಸಿದ್ದ ಶಿವಾನಂದ ತಗಡೂರು ಅವರಿಗೆ ನಾಗರಿಕ ಸನ್ಮಾನ ಮತ್ತು ಲೋಹಿಯಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರ ನೆರವಿಗೆ ತಗಡೂರು ನಿಂತಿದ್ದರು. ಹಾಸಿಗೆ, ಆಕ್ಸಿಜನ್, ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದ್ದರು. ಪತ್ರಕರ್ತರ ನಿಧಿಯನ್ನು ಅಪಾತ್ರರು ಪಡೆಯುತ್ತಿದ್ದರು. ಇದನ್ನು ತಪ್ಪಿಸಲು ಕಷ್ಟದಲ್ಲಿರುವ ಪತ್ರಕರ್ತರನ್ನು ಗುರುತಿಸಿ ತಗಡೂರು ಅವರೇ ನಿಧಿ ಕೊಡಿಸಲು ಮುಂದಾಗಿದ್ದರು. ಜಿಲ್ಲಾ, ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನಗಳನ್ನು ಕನ್ನಡ ಸಾಹಿತ್ಯ ಸಮ್ಮೇಳನದ ಮಾದರಿಯಲ್ಲಿ ಯಶಸ್ವಿಯಾಗಿ ಮುನ್ನಡೆಸಿದ್ದಾರೆ ಎಂದು ಪ್ರಶಂಸಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರ ಪ್ರಭಾಕರ್ ಮತ್ತು ತಗಡೂರು ಅವರು ಜೋಡೆತ್ತಿನಂತೆ ಕಾರ್ಯನಿರ್ವಹಿಸಿ ಪತ್ರಕರ್ತರಿಗೆ ಸಂಬಂಧಿಸಿದ ಸರ್ಕಾರದ ಯೋಜನೆಗಳು ಜಾರಿಯಾಗುವವರೆಗೂ ಬಿಡುವುದಿಲ್ಲ ಎಂದು ಶ್ಲಾಘಿಸಿದರು.
ಪತ್ರಕರ್ತ ರವೀಂದ್ರ ಭಟ್ ಐನಕೈ, ದೂರದರ್ಶನ ಕಾರ್ಯಕ್ರಮ ಮುಖ್ಯಸ್ಥೆ ಎಚ್.ಎನ್.ಆರತಿ, ಶ್ರೀ ತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಆರ್.ವೆಂಕಟೇಶ್, ಕಾರ್ಯಕ್ರಮ ಸಂಯೋಜಕ ಡಾ.ಎಸ್.ರಾಮಲಿಂಗೇಶ್ವರ ಉಪಸ್ಥಿತರಿದ್ದರು.
ಕೋವಿಡ್ ಅನಾಹುತ ಬಗ್ಗೆ ‘ಕನ್ನಡಪ್ರಭ’ ಭವಿಷ್ಯ: ತಗಡೂರು
ಚೀನಾದಲ್ಲಿ ಕೊರೋನಾ ಪ್ರಾರಂಭವಾದಾಗ, ಭಾರತಕ್ಕೆ ಕೊರೋನಾ ಪ್ರವೇಶಿಸಿದರೆ ಏನೆಲ್ಲಾ ಅನಾಹುತಗಳಾಗಲಿವೆ ಎಂದು ಮೊದಲಿಗೆ ‘ಕನ್ನಡಪ್ರಭ’ ಸವಿವರವಾಗಿ ವರದಿ ಮಾಡಿತ್ತು. ಪ್ರಧಾನ ಸಂಪಾದಕರಾದ ರವಿ ಹೆಗಡೆಯವರು ಅಪರೂಪದಲ್ಲಿ ಅಪರೂಪದ ಪತ್ರಕರ್ತರು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮೆಚ್ಚುಗೆ ವ್ಯಕ್ತಪಡಿಸಿದರು.
ರವಿ ಹೆಗಡೆಯವರು ನಡೆದಾಡುವ ವಿಶ್ವಕೋಶ. ಪತ್ರಿಕೋದ್ಯಮ ಈಗ ಹೇಗಿದೆ, ಭವಿಷ್ಯದಲ್ಲಿ ಹೇಗಿರಲಿದೆ ಎಂದು ನಿಖರವಾಗಿ ಹೇಳುತ್ತಾರೆ. ಮೊಬೈಲ್ ಜರ್ನಲಿಸಂ ಬಗ್ಗೆ 10 ವರ್ಷದ ಹಿಂದೆಯೇ ಸಂವಾದವೊಂದರಲ್ಲಿ ವಿವರಿಸಿದ್ದರು. ಆದರೆ ಆಗ ನಾನು ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಅವರ ಹೇಳಿಕೆ ನಿಜವಾಯಿತು ಎಂದು ನೆನಪಿಸಿಕೊಂಡರು.
ಪತ್ರಕರ್ತ ಶಿವಾನಂದ ತಗಡೂರು ಅವರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ.ವೂಡೇ ಪಿ.ಕೃಷ್ಣ ಮಾತನಾಡಿ, ಮುಖ್ಯವಾಹಿನಿ ಮಾಧ್ಯಮಗಳು ಪತ್ರಿಕೋದ್ಯಮದ ಗಟ್ಟಿತನ, ಗೌರವ ಉಳಿಸಿಕೊಂಡಿವೆ. ಇದೇ ಘನತೆ ಕಾಪಾಡಿಕೊಂಡು ಹೋಗಬೇಕು. ತಗಡೂರು ಅವರನ್ನು ಗೌರವಿಸುವ ಮೂಲಕ ಮಾನವೀಯ ಮೌಲ್ಯಗಳನ್ನು ಗುರುತಿಸಿದ್ದೇವೆ ಎಂದು ವ್ಯಾಖ್ಯಾನಿಸಿದರು.
ಶೇಷಾದ್ರಿಪುರಂ ಕಾಲೇಜಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ‘ಕನ್ನಡ ಪ್ರಭ’ ಪ್ರಧಾನ ಸಂಪಾದಕರಾದ ರವಿ ಹೆಗಡೆ, ಪತ್ರಕರ್ತ ರವೀಂದ್ರ ಭಟ್ ಐನಕೈ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ.ವೂಡೇ ಪಿ.ಕೃಷ್ಣ, ಶ್ರೀ ತ್ಯಾಗರಾಜ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಆರ್.ವೆಂಕಟೇಶ್ ಮತ್ತಿತರರು ಹಾಜರಿದ್ದರು.
