26ರಿಂದ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2: ಜಿಲ್ಲಾಧಿಕಾರಿ ಶುಭಾ ಕಲ್ಯಾಣ್‌

KannadaprabhaNewsNetwork | Published : Apr 17, 2024 1:16 AM

ಸಾರಾಂಶ

ಜಿಲ್ಲೆಯಲ್ಲಿ ಏಪ್ರಿಲ್ 26 ರಿಂದ ಮೇ 16ರ ವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-2ನ್ನು ಸುಗಮವಾಗಿ ನಡೆಸುವ ದೃಷ್ಟಿಯಿಂದ ತಾಂತ್ರಿಕ ಕಾರ್ಯ ನಿರ್ವಹಣೆ, ವೀಕ್ಷಣೆ ಹಾಗೂ ಮೇಲ್ವಿಚಾರಣೆ ಒಳಗೊಂಡಂತೆ ತ್ರಿಸದಸ್ಯ ಸಮಿತಿಯನ್ನು ರಚಿಸಿ ಕಾರ್ಯ ಹಂಚಿಕೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ತುಮಕೂರುಜಿಲ್ಲೆಯಲ್ಲಿ ಏಪ್ರಿಲ್ 26 ರಿಂದ ಮೇ 16ರ ವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-2ನ್ನು ಸುಗಮವಾಗಿ ನಡೆಸುವ ದೃಷ್ಟಿಯಿಂದ ತಾಂತ್ರಿಕ ಕಾರ್ಯ ನಿರ್ವಹಣೆ, ವೀಕ್ಷಣೆ ಹಾಗೂ ಮೇಲ್ವಿಚಾರಣೆ ಒಳಗೊಂಡಂತೆ ತ್ರಿಸದಸ್ಯ ಸಮಿತಿಯನ್ನು ರಚಿಸಿ ಕಾರ್ಯ ಹಂಚಿಕೆ ಮಾಡಲಾಯಿತು.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಕಾರ್ಯ ಹಂಚಿಕೆ ಮಾಡಿ ಮಾತನಾಡಿದ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರು, ಕಳೆದ ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಜಿಲ್ಲೆಯ ಒಟ್ಟು 13ಕೇಂದ್ರಗಳಲ್ಲಿ ಈ ಪರೀಕ್ಷೆಯನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು. ಪರೀಕ್ಷೆಯನ್ನು ಪಾರದರ್ಶಕವಾಗಿ ಯಾವುದೇ ಲೋಪವಿಲ್ಲದಂತೆ ನಡೆಸುವ ನಿಟ್ಟಿನಲ್ಲಿ ಎಲ್ಲಾ ಪರೀಕ್ಷಾ ಕೊಠಡಿಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಬೇಕಲ್ಲದೆ ಸಿಸಿ ಕ್ಯಾಮೆರಾಗಳಿಗೆ ಡಿವಿಆರ್ ಅಳವಡಿಸಬೇಕು. ಎಲ್ಲಾ ಸಿಸಿ ಕ್ಯಾಮೆರಾಗಳಿಗೆ ವೆಬ್ ಕಾಸ್ಟಿಂಗ್, ಯುಪಿಎಸ್ ಸಂಪರ್ಕ ವ್ಯವಸ್ಥೆ ಕಲ್ಪಿಸಬೇಕು. ಪರೀಕ್ಷಾ ಕೇಂದ್ರಗಳಿಗೆ ಸಕಾಲದಲ್ಲಿ ಪ್ರಶ್ನೆಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳ ಹಂಚಿಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ತುಮಕೂರು ತಾಲೂಕಿನಲ್ಲಿ 4 ಪರೀಕ್ಷಾ ಕೇಂದ್ರ ಹಾಗೂ ಉಳಿದ 9 ತಾಲೂಕಿನಲ್ಲಿ ತಲಾ 1ರಂತೆ ಒಟ್ಟು 13 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ-2 ನಡೆಯಲಿದ್ದು, ಪರೀಕ್ಷೆಗೆ ಸಂಬಂಧಿಸಿದಂತೆ ತಾಂತ್ರಿಕ ಕಾರ್ಯ ನಿರ್ವಹಣೆ, ವೀಕ್ಷಣೆ ಹಾಗೂ ಮೇಲ್ವಿಚಾರಣೆಗಾಗಿ ಗುಬ್ಬಿ ತಾಲೂಕು ಚೇಳೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಿ. ಕೃಷ್ಣಮೂರ್ತಿ ಅವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಅಲ್ಲದೆ ಕುಣಿಗಲ್ ತಾಲೂಕು ಎಂಜಿಎಂ ಸರ್ಕಾರಿ ಪದವಿಪೂರ್ವ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕ ಪುಟ್ಟಸ್ವಾಮಯ್ಯ ಅವರನ್ನು ಸಹಾಯಕ ನೋಡಲ್ ಅಧಿಕಾರಿ ಮತ್ತು ತಾಂತ್ರಿಕ ವಿಭಾಗದ ಸಂವೀಕ್ಷಕರಾಗಿ ಹಾಗೂ ನಗರದ ಎಂಪ್ರೆಸ್ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಗ್ರಂಥಪಾಲಕ ಜಬೀವುಲ್ಲಾ ಅವರನ್ನು ತಾಂತ್ರಿಕ ವಿಭಾಗದ ಸಂವೀಕ್ಷಕರಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿ, ಪ್ರತಿ ಪರೀಕ್ಷಾ ಕೇಂದ್ರಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್, ಪರೀಕ್ಷಾ ಕೊಠಡಿ ಹಾಗೂ ಪರೀಕ್ಷಾ ಕಾರ್ಯ ನಡೆಯುವ ಕಚೇರಿಗೆ ಸಿಸಿ ಕ್ಯಾಮೆರಾ ಹಾಗೂ ಡಿವಿಆರ್ ಅಳವಡಿಕೆ, ಅಂತರ್ಜಾಲ ಸಂಪರ್ಕ, ಯುಪಿಎಸ್ ಸಂಪರ್ಕ, ವೆಬ್ ಕಾಸ್ಟಿಂಗ್, ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ, ಕುಡಿಯುವ ನೀರು ಹಾಗೂ ಬೆಳಕಿನ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಉಪನಿರ್ದೇಶಕ ಗಂಗಾಧರ್, ವಿವಿಧ ಕಾಲೇಜಿನ ಪ್ರಾಂಶುಪಾಲರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Share this article