ಕಣಿವೆ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನ ವಾರ್ಷಿಕ ಬ್ರಹ್ಮರಥೋತ್ಸವ ಇಂದು

KannadaprabhaNewsNetwork | Published : Apr 17, 2024 1:16 AM

ಸಾರಾಂಶ

ಕಣಿವೆ ಗ್ರಾಮದಲ್ಲಿ ಬುಧವಾರ ಶ್ರೀ ರಾಮಲಿಂಗೇಶ್ವರ ಸ್ವಾಮಿ ವಾರ್ಷಿಕ ಬ್ರಹ್ಮರಥೋತ್ಸವ ನಡೆಯಲಿದೆ. ಐತಿಹಾಸಿಕ ಹಿನ್ನೆಲೆಯುಳ್ಳ ಈ ದೇವಾಲಯದಲ್ಲಿ ಪ್ರತಿ ವರ್ಷವೂ ಯುಗಾದಿ ಹಬ್ಬ ಕಳೆದು 7 ದಿನಗಳಿಗೆ ಬ್ರಹ್ಮ ರಥೋತ್ಸವ ನಡೆಯುವುದು ಸಂಪ್ರದಾಯ. ರಥೋತ್ಸವವು ಮಧ್ಯಾಹ್ನ 12.30ಕ್ಕೆ ಜರುಗಲಿದೆ.

ಕನ್ನಡಪ್ರಭ ವಾರ್ತೆ ಕುಶಾಲನಗರ

ಉತ್ತರ ಕೊಡಗಿನ ಕಾವೇರಿ ನದಿಯ ದಂಡೆಯಲ್ಲಿರುವ ಕಣಿವೆ ಗ್ರಾಮದಲ್ಲಿ ಬುಧವಾರ ಶ್ರೀ ರಾಮಲಿಂಗೇಶ್ವರ ಸ್ವಾಮಿ ವಾರ್ಷಿಕ ಬ್ರಹ್ಮರಥೋತ್ಸವ ನಡೆಯಲಿದೆ. ದೇವಸ್ಥಾನ ಸಮಿತಿ ವತಿಯಿಂದ ಭರದ ಸಿದ್ಧತೆ ಕೈಗೊಳ್ಳಲಾಗಿದೆ.

ಐತಿಹಾಸಿಕ ಹಿನ್ನೆಲೆಯುಳ್ಳ ಈ ದೇವಾಲಯದಲ್ಲಿ ಪ್ರತಿ ವರ್ಷವೂ ಯುಗಾದಿ ಹಬ್ಬ ಕಳೆದು 7 ದಿನಗಳಿಗೆ ಬ್ರಹ್ಮ ರಥೋತ್ಸವ ನಡೆಯುವುದು ಸಂಪ್ರದಾಯ.

ರಥೋತ್ಸವವು ಮಧ್ಯಾಹ್ನ 12.30ಕ್ಕೆ ಜರುಗಲಿದ್ದು, ರಥೋತ್ಸವಕ್ಕೆ ಜಿಲ್ಲೆಯ ಭಕ್ತಾದಿಗಳು ಸೇರಿದಂತೆ ನೆರೆಯ ಹಾಸನ ಮತ್ತು ಮೈಸೂರು ಜಿಲ್ಲೆ ಗಡಿಭಾಗದ ಗ್ರಾಮಗಳಿಂದಲೂ ಅಪಾರ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.

ಹೆಬ್ಬಾಲೆ ಬಸವೇಶ್ವರ ದೇವಸ್ಥಾನ ಸಮಿತಿ ಕಾಶಿಯಿಂದ ತೀರ್ಥ ತರಿಸಿ ಅದನ್ನು ಅಡ್ಡಪಲ್ಲಕ್ಕಿ ಮೂಲಕ ತಂದು ಕಣಿವೆ ರಾಮಲಿಂಗೇಶ್ವರನಿಗೆ ಪೂಜೆ, ಅಭಿಷೇಕ ಸಲ್ಲಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡುವ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ. ಈ ವಾರ್ಷಿಕ ಜಾತ್ರೆಗೆ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನ ಸಮಿತಿ ಪದಾಧಿಕಾರಿಗಳು ಅಗತ್ಯ ಸಿದ್ಧತೆ ಕೈಗೊಂಡಿದ್ದಾರೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್‌. ಸುರೇಶ್ ತಿಳಿಸಿದ್ದಾರೆ.

ಐತಿಹಾಸಿಕ ಹಿನ್ನೆಲೆ: ದಕ್ಷಿಣಗಂಗೆ ಕಾವೇರಿ ನದಿಯ ದಡದ‌‌ ಮೇಲಿರುವ ರಾಮಲಿಂಗೇಶ್ವರ ದೇವಸ್ಥಾನ ಚೋಳರ ಕಾಲದಲ್ಲಿ ನಿರ್ಮಾಣಗೊಂಡ ಐತಿಹ್ಯವಿದೆ.

ರಾಮಾಯಣದಲ್ಲಿ ಸೀತೆ ಅಪಹರಣಗೊಂಡ ಸಂದರ್ಭ ಸೀತೆಯನ್ನು ಹುಡುಕಿಕೊಂಡು ಆಂಜನೇಯ ಮತ್ತು ಲಕ್ಷ್ಮಣನೊಂದಿಗೆ ಬಂದ ಶ್ರೀರಾಮ ಇಲ್ಲಿನ ರಮಣೀಯ ದೃಶ್ಯವನ್ನು ನೋಡಿ ಇಲ್ಲಿಯೇ ಕೆಲಕಾಲ ವಿಶ್ರಮಿಸಿ ಮುಂದೆ ಸಾಗಿದರು ಎಂದು ಹೇಳಲಾಗುತ್ತದೆ.

ಇದೇ ವೇಳೆ ಇಲ್ಲಿನ ನದಿ ದಡದಲ್ಲಿ ತಪಸ್ಸು ಮಾಡುತ್ತಿದ್ದ ವ್ಯಾಘ್ರ ಮಹರ್ಷಿ ಶ್ರೀರಾಮನಿಗೆ ಅಜ್ಞೆ ಮಾಡಿ ತನ್ನ ಪೂಜಾ ಕೈಂಕರ್ಯಗಳಿಗೆ ಅವಶ್ಯವಿರುವ ಶಿವಲಿಂಗವನ್ನು ತರಲು ಆಂಜನೇಯನನ್ನು‌ ಶ್ರೀರಾಮ ಕಾಶಿಗೆ ಕಳುಹಿಸುತ್ತಾನೆ. ಆದರೆ,ಆಂಜನೇಯ ಶಿವಲಿಂಗ ತರುವುದು ವಿಳಂಬವಾದ ಕಾರಣ ಶ್ರೀರಾಮ ಅಲ್ಲಿಯೇ ಮರಳಿನಿಂದ ಶಿವಲಿಂಗವನ್ನು ಮಾಡಿ ಪೂಜೆಗೆ ಅನುವು ಮಾಡಿಕೊಟ್ಟು ಅಲ್ಲಿಂದ ತೆರಳಿದ ಎನ್ನುವ ಪ್ರತೀತಿಯೂ ಇದೆ.

ಈ ಕಾರಣದಿಂದಾಗಿ ಕಣಿವೆ ದೇವಸ್ಥಾನದಲ್ಲಿರುವ ಲಿಂಗವನ್ನು ಮರಳುಲಿಂಗ ಎಂದೇ ಕರೆಯಲಾಗುತ್ತದೆ ಎಂದು ದೇವಾಲಯದ ಪ್ರಧಾನ ಅರ್ಚಕ ಎಚ್.ಆರ್.ರಾಘವೇಂದ್ರ ಆಚಾರ್ ಹೇಳುತ್ತಾರೆ.

ಆಂಜನೇಯನೂ ಶಿವಲಿಂಗವನ್ನು ತಂದದ್ದರಿಂದ ಆ ಲಿಂಗವನ್ನು ಪಕ್ಕದಲ್ಲೇ ಇರುವ ಲಕ್ಷ್ಮಣೇಶ್ವರ ಸನ್ನಿಧಿಯಲ್ಲಿ ಪ್ರತಿಷ್ಠಾಪಿಸಲಾಯಿತು ಎಂದೂ ಹೇಳಲಾಗುತ್ತದೆ.

ರಾಮಲಿಂಗೇಶ್ವರ ಪ್ರತಿಷ್ಠಾಪನೆಯಾದ ಹಿನ್ನೆಲೆಯಲ್ಲಿ ಈ ಪ್ರದೇಶಕ್ಕೆ ಶ್ರೀರಾಂಪುರ ಎಂದು ಕರೆಯಲಾಗುತ್ತದೆ.

Share this article