ಯಕ್ಷಗಾನ ಕಲಾವಿದರ 26ನೇಯ ಸಮಾವೇಶ: 800 ಕಲಾವಿದರು ಭಾಗಿ

KannadaprabhaNewsNetwork |  
Published : Jun 01, 2026, 02:30 AM IST
ಯಕ್ಷಗಾನ ಕಲಾರಂಗಕ್ಕೆ ಪೂರ್ಣಚಂದ್ರ ಕಲಾ ಪ್ರತಿಷ್ಠಾನದ ವತಿಯಿಂದ ‘ಕೊಂಡದಕುಳಿ ರಾಮ ಹೆಗಡೆ’  ‘ಉತ್ತರ ಕನ್ನಡ ಯಕ್ಷಶ್ರೀ’ ಪ್ರಶಸ್ತಿ ಪ್ರದಾನ ನಡೆಯಿತು.  | Kannada Prabha

ಸಾರಾಂಶ

ಉಡುಪಿಯ ಯಕ್ಷಗಾನ ಕಲಾರಂಗದ 25 ನೇ ವರ್ಷದ ವೃತ್ತಿನಿರತ ಯಕ್ಷಗಾನ ಕಲಾವಿದರ ಸಮಾವೇಶವು ಭಾನುವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜರಗಿತು. ಅಪರಾಹ್ನ ನಡೆದ ಪ್ರದಾನ ಸಮಾರಂಭದಲ್ಲಿ ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು.

ಉಡುಪಿ: ಉಡುಪಿಯ ಯಕ್ಷಗಾನ ಕಲಾರಂಗದ 25 ನೇ ವರ್ಷದ ವೃತ್ತಿನಿರತ ಯಕ್ಷಗಾನ ಕಲಾವಿದರ ಸಮಾವೇಶವು ಭಾನುವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜರಗಿತು. ಅಪರಾಹ್ನ ನಡೆದ ಪ್ರದಾನ ಸಮಾರಂಭದಲ್ಲಿ ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿ, ಯಕ್ಷಗಾನವು ನಮ್ಮ ಸಂಸ್ಕೃತಿಯನ್ನು, ಪುರಾಣ ಕಥೆಯನ್ನು ಉಳಿಸಿ, ಬೆಳೆಸಿಕೊಂಡು ಬಂದಿರುವ ಅತ್ಯುತ್ತಮ ಜನಪ್ರಿಯ ಕಲಾಪ್ರಕಾರವಾಗಿದೆ. ಬೇರೆ ಯಾವುದೇ ಕಲೆಯ ಪ್ರಸ್ತುತಿಯ ಸಂದರ್ಭದಲ್ಲೂ ಯಕ್ಷಗಾನ ಪ್ರದರ್ಶನದಲ್ಲಿ ಸೇರುವಷ್ಟು ಜನ ಸೇರದಿರುವುದೆ ಇದರ ಮಹತ್ವವನ್ನು ತಿಳಿಸುತ್ತದೆ ಎಂದು ಹೇಳಿದರು.

ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿಯವರು ಶುಭಾಶಂಸನಗೈದರು. ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ ಗಂಟಿಗೊಳೆ ಸಮಾವೇಶದಲ್ಲಿ ಭಾಗವಹಿಸಿದ್ದರು. ಯಕ್ಷಗಾನ ಪೋಷಕ ಪಣಂಬೂರು ವಾಸುದೇವ ಐತಾಳ್, ಉದ್ಯಮಿಗಳಾದ ಪಿ. ಪುರುಷೋತ್ತಮ ಶೆಟ್ಟಿ, ಕುಯಿಲಾಡಿ ಸುರೇಶ್ ನಾಯಕ್, ಸಿಎ ಗಣೇಶ್ ಕಾಂಚನ್, ಹರಿಯಪ್ಪ ಕೋಟ್ಯಾನ್, ಆನಂದ ಪಿ. ಸುವರ್ಣ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕಟೀಲು ಮೇಳದ ಕಲಾವಿದ ಶ್ರುತಕೀರ್ತಿ ರಾಜ್ ರಚಿಸಿದ ‘ಯಕ್ಷಗಾನ ಶ್ರೀರಾಮ ಸೂಕ್ತ’ ಪುಸ್ತಕವನ್ನು ಬಿಡುಗಡೆಮಾಡಲಾಯಿತು.

ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿ, ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದರು. ವಿವಿಧ ಮೇಳದ 800ಕ್ಕೂ ಅಧಿಕ ಕಲಾವಿದರು ಸಮಾವೇಶದಲ್ಲಿ ಭಾಗವಹಿಸಿದ್ದು, ಇವರಿಗೆಲ್ಲರಿಗೂ ಉಪಯುಕ್ತ ಉಡುಗೊರೆಯನ್ನು ವಿತರಿಸಲಾಯಿತು. ಪೂರ್ವಾಹ್ನ 9ಗಂಟೆಯಿ೦ದ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ತಜ್ಞ ವೈದ್ಯರಿಂದ ಉಚಿತ ವೈದ್ಯಕೀಯ ತಪಾಸಣೆ ಜರಗಿತು. ಶ್ರೀ ಮಠದ ಪ್ರಬಂಧಕರಾದ ವಾಸುದೇವ ಆಚಾರ್ಯರು ಸಮಾವೇಶವನ್ನು ಉದ್ಘಾಟಿಸಿದರು. ಪೂರ್ವಾಹ್ನ 11.00 ಗಂಟೆಯಿ೦ದ ಕಲಾ ಮಂಡಲಮ್ ನಂದಕುಮಾರ್ ತಂಡದವರಿಂದ ಕಲ್ಯಾಣ ಸೌಗಂಧಿಕಂ ತುಳ್ಳಲ್ ತ್ರಯಮ್ ಪ್ರದರ್ಶನ ಜರಗಿತು.

ನಂತರ ಕಲೆ-ಕಲಾವಿದ-ಪ್ರೇಕ್ಷಕ : ಸಮನ್ವಯ ಎಂಬ ವಿಷಯದ ಕುರಿತು ಕೊಂಡದಕುಳಿ ರಾಮಚಂದ್ರ ಹೆಗಡೆ, ವಾಸುದೇವ ರಂಗಾ ಭಟ್, ನೀಲ್ಕೋಡು ಶಂಕರ ಹೆಗಡೆ, ಪ್ರಜ್ವಲ್ ಗುರುವಾಯನಕೆರೆ, ಮಹೇಶ್ ಸಾಣೂರು, ವಾದಿರಾಜ ಕಲ್ಲುರಾಯ, ನಂದೀಶ್ ಶೆಟ್ಟಿ ಬಿಲ್ಲಾಡಿ ತಮ್ಮ ಅನಿಸಿಕೆಯನ್ನು ಸೊಗಸಾಗಿ ಹಂಚಿಕೊಂಡರು. ಪ್ರಸಂಗಕರ್ತ ಪವನ್ ಕಿರಣ್‌ಕೆರೆಯವರು ಸಮನ್ವಯಕಾರರಾಗಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುದುರೆಮುಖ ಚಾರಣಕ್ಕೆ ಅವಕಾಶ, ಇಂದಿನಿಂದ ಅಧಿಕೃತ ಅನುಮತಿ
ಮಕ್ಕಳಿಗೆ ಸೂಕ್ತ ಶಿಕ್ಷಣ ನೀಡಿ: ಜಯಂತ್ ನಡುಬೈಲು