ಉಡುಪಿ: ತುಳುಕೂಟ ಉಡುಪಿ ಮತ್ತು ವಿಶ್ವಪ್ರಭ ಪ್ರತಿಷ್ಠಾನ ಸಹಯೋಗದಲ್ಲಿ ಮಧುಶ್ರೀ ಪ್ರಕಾಶನದ ನಲ್ವತ್ತನೇ ವರ್ಷದ ಸಂಭ್ರಮ ಭಾನುವಾರ ಸಂಜೆ ನಗರದ ಅನಂತಶಯನ ಸಭಾಂಗಣದಲ್ಲಿ ನಡೆಯಿತು. ಉಡುಪಿ ತುಳುಕೂಟದ ಅಧ್ಯಕ್ಷ ಬಿ.ಜಯಕರ್ ಶೆಟ್ಟಿ ಇಂದ್ರಾಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ತುಳು ಸಾಹಿತ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ತುಳುಕೂಟದ ಕಾರ್ಯದರ್ಶಿ, ಸಾಹಿತಿ ಗಂಗಾಧರ್ ಕಿದಿಯೂರು ಅವರು ೪೦ ವರ್ಷಗಳಲ್ಲಿ ಮಧುಶ್ರೀ ಪ್ರಕಾಶನದ ಮೂಲಕ ೪೦ ಪುಸ್ತಕಗಳನ್ನು ಪ್ರಕಟಿಸುವ ಮೂಲಕ ವಿವಿಧ ಬರಹಗಾರರನ್ನು ಬೆಳೆಸುವ ಕೆಲಸಮಾಡಿದ್ದಾರೆ ಎಂದರು. ಮುಖ್ಯ ಅತಿಥಿಗಳಾಗಿ ವಿಶ್ವಪ್ರಭ ಪ್ರತಿಷ್ಠಾನದ ಯು. ವಿಶ್ವನಾಥ ಶೆಣೈ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇದೇ ಸಂದರ್ಭ ಗೋವಾದ ನಿವೃತ್ತ ಉಪಪ್ರಾಂಶುಪಾಲ ಎಸ್.ಎನ್.ಡಿ. ಪೂಜಾರಿ ಅವರು ಬರೆದಿರುವ ''''''''''''''''ತುಳುವ ದೈವ ಸಂಪ್ರದಾಯ'''''''''''''''' ಅಧ್ಯಯನ ಗ್ರಂಥವನ್ನು ಉಡುಪಿ ತುಳುಕೂಟದ ಸ್ಥಾಪಕಾಧ್ಯಕ್ಷ ಡಾ. ಭಾಸ್ಕರಾನಂದ ಕುಮಾರ್ ಬಿಡುಗಡೆ ಮಾಡಿದರು. ಜಾನಪದ ವಿದ್ವಾಂಸ ಡಾ.ಗಣನಾಥ ಎಕ್ಕಾರ್ ಅವರು ಪುಸ್ತಕ ಪರಿಚಯ ಮಾಡಿದರು. ಮಧುಶ್ರೀ ಪ್ರಕಾಶನದ ಗಂಗಾಧರ ಕಿದಿಯೂರು ಅವರ ''''''''''''''''ಪಿಂಗಾರದ ಬಾಲೆ ಸಿರಿ'''''''''''''''' ತುಳು ನಾಟಕದ ಕೃತಿಯ ಇಂಗ್ಲಿಷ್ ಆವೃತ್ತಿಯನ್ನು ಜಾನಪದ ವಿದ್ವಾಂಸರಾದ ಡಾ. ಗಣೇಶ್ ಅಮಿನ್ ಸಂಕಮಾರ್ ಅವರು ಬಿಡುಗಡೆ ಮಾಡಿದರು. ಈ ಕೃತಿಯನ್ನು ಎಸ್.ಎನ್.ಡಿ. ಪೂಜಾರಿ ಅವರು ಇಂಗ್ಲೀಷಿಗೆ ಅನುವಾದಿಸಿದ್ದರು. ನಿವೃತ್ತ ಇಂಗ್ಲೀಷ್ ಪ್ರಾಧ್ಯಾಪಕಿ,ಲೇಖಕಿ ಡಾ.ಪಾರ್ವತಿ ಜಿ.ಐತಾಳ್ ಪುಸ್ತಕ ಪರಿಚಯ ಮಾಡಿದರು. ಇದೇ ವೇಳೆ ನಿವೃತ್ತ ಪ್ರಾಂಶುಪಾಲ ಪ್ರೊ. ಎಂ. ಎಲ್. ಸಾಮಗ, ನಿವೃತ್ತ ಶಿಕ್ಷಕಿಯರಾದ ಸರಳಾ ಶೆಟ್ಟಿ, ಧನಲಕ್ಷ್ಮೀ, ಮುತ್ತಕ್ಕ ಅವರಿಗೆ ಗುರುವಂದನೆ ಕಾರ್ಯಕ್ರಮ ನಡೆಯಿತು.