ಕನ್ನಡಪ್ರಭ ವಾರ್ತೆ ವಿಜಯಪುರ
ಜಿಲ್ಲೆಯಲ್ಲಿ ಶನಿವಾರ ಆರಂಭವಾದ ದ್ವೀತಿಯು ಪಿಯುಸಿ ವಾರ್ಷಿಕ ಪರೀಕ್ಷೆ-೧ರ ಕನ್ನಡ ಹಾಗೂ ಅರೆಬಿಕ್ ಪರೀಕ್ಷೆಯಲ್ಲಿ ೨೮,೦೮೬ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ೧೩೭೦ ಅಭ್ಯರ್ಥಿಗಳು ಪರೀಕ್ಷೆಗೆ ಗೈರ ಹಾಜರಾಗಿದ್ದಾರೆ.ಜಿಲ್ಲೆಯ ಒಟ್ಟು ೬೩ ಪರೀಕ್ಷೆ ಕೇಂದ್ರಗಳಲ್ಲಿ ಕನ್ನಡ ಮತ್ತು ಅರೆಬಿಕ್ ವಿಷಯಗಳ ಪರೀಕ್ಷೆಗಳು ನಡೆದಿದ್ದು, ಈ ಬಾರಿ ವೆಬ್ ಕಾಸ್ಟ್ ಅಡಿಯಲ್ಲಿ ಪರೀಕ್ಷೆಗಳು ಪ್ರಾರಂಭವಾಗಿವೆ. ಕನ್ನಡ ಭಾಷಾ ಪರೀಕ್ಷೆಗೆ ೨೯,೩೪೭ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಆ ಪೈಕಿ ೨೭,೯೮೧ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ, ೧೩೬೬ ವಿದ್ಯಾರ್ಥಿಗಳು ಗೈರ ಹಾಜರಾಗಿದ್ದರು.
ಅದೇ ರೀತಿ ಆರೇಬಿಕ್ ಭಾಷಾ ಪರೀಕ್ಷೆಗೆ ೧೦೯ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ೧೦೫ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ, ೦೪ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಪರೀಕ್ಷೆ ವೇಳೆ ಯಾವುದೇ ಅಹಿತಕರ ಘಟನೆಗಳು ಮತ್ತು ಯಾವುದೇ ವಿದ್ಯಾರ್ಥಿ ಡಿಬಾರ್ ಆಗಿರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.ವಿಜಯಪುರ ನಗರದ ಬಾಲಕರ ಹಾಗೂ ಬಾಲಕಿಯರ ಪದವಿಪೂರ್ವ ಕಾಲೇಜ್ ಮತ್ತು ಸಿಕ್ಯಾಬ್ ಮಹಿಳಾ ಪದವಿಪೂರ್ವ ಕಾಲೇಜನಲ್ಲಿನ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರೀಕ್ಷೆಗೆ ಹಾಜರಾದ ಎಲ್ಲ ವಿದ್ಯಾರ್ಥಿಗಳ ಹಾಜರಾತಿ, ಪರೀಕ್ಷಾ ಕೇಂದ್ರಗಳ ಕೊಠಡಿ, ಆಸನ ವ್ಯವಸ್ಥೆ, ವಿಶೇಷ ಅಗತ್ಯತೆವುಳ್ಳ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಸೇರಿದಂತೆ ಪರೀಕ್ಷ ಕೇಂದ್ರಗಳಲ್ಲಿ ಕಲ್ಪಿಸಲಾಗಿರುವ ಮೂಲಭೂತ ಸೌಲಭ್ಯಗಳು ಹಾಗೂ ಭದ್ರತಾ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು.ವೆಬ್‌ಕಾಸ್ಟಿಂಗ್ ಕೇಂದ್ರಕ್ಕೆ ಭೇಟಿ: ಪರೀಕ್ಷಾ ಕೇಂದ್ರದ ಮೇಲೆ ನಿಗಾ ಇರಿಸಲು ಜಿಲ್ಲಾ ಪಂಚಾಯತಿಯ ಸಂಪನ್ಮೂಲ ಕೇಂದ್ರದಲ್ಲಿ ಸ್ಥಾಪಿಸಲಾದ ಪರೀಕ್ಷಾ ವೆಬ್ ಕಾಸ್ಟಿಂಗ್ ಕೇಂದ್ರಕ್ಕೆ ಸಿಇಒ ರಿಷಿ ಆನಂದ ಭೇಟಿ ನೀಡಿ ವ್ಯವಸ್ಥಿತ ನಿರ್ವಹಣೆ ಕುರಿತು ಪರಿಶೀಲನೆ ನಡೆಸಿದರು.