ಎರಡು ವರ್ಷದಲ್ಲಿ ಜಿಲ್ಲೆಯಲ್ಲಿ ೨೭ ಚಿರತೆಗಳ ಸೆರೆ

KannadaprabhaNewsNetwork |  
Published : Nov 17, 2026, 01:30 AM IST
16ಕೆಎಂಎನ್‌ಡಿ-1ಕೆ.ಆರ್‌.ಪೇಟೆಯಲ್ಲಿ ತಾಲೂಕಿನಲ್ಲಿ ಸೆರೆಸಿಕ್ಕ ಚಿರತೆ. | Kannada Prabha

ಸಾರಾಂಶ

ಕಳೆದೆರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ ಅರಣ್ಯ ಇಲಾಖೆ ೨೭ ಚಿರತೆಗಳನ್ನು ಸೆರೆಹಿಡಿದು ಅರಣ್ಯಕ್ಕೆ ರವಾನಿಸಿದೆ. ಜನ ಮತ್ತು ಜಾನುವಾರುಗಳ ಸುರಕ್ಷತೆ ದೃಷ್ಟಿಯಿಂದ ದೂರು ಬಂದ ಕಡೆಗಳಲ್ಲೆಲ್ಲಾ ಬೋನುಗಳನ್ನು ಇಡಲಾಗಿದೆ. ಚಿರತೆಗಳ ಹೆಜ್ಜೆ ಗುರುತು ಮತ್ತು ಅವುಗಳ ಚಲನವಲನಗಳನ್ನು ಆಧರಿಸಿ ಸೆರೆಗೆ ಬಲೆ ಬೀಸಲಾಗಿದೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಕಳೆದೆರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ ಅರಣ್ಯ ಇಲಾಖೆ ೨೭ ಚಿರತೆಗಳನ್ನು ಸೆರೆಹಿಡಿದು ಅರಣ್ಯಕ್ಕೆ ರವಾನಿಸಿದೆ. ಜನ ಮತ್ತು ಜಾನುವಾರುಗಳ ಸುರಕ್ಷತೆ ದೃಷ್ಟಿಯಿಂದ ದೂರು ಬಂದ ಕಡೆಗಳಲ್ಲೆಲ್ಲಾ ಬೋನುಗಳನ್ನು ಇಡಲಾಗಿದೆ. ಚಿರತೆಗಳ ಹೆಜ್ಜೆ ಗುರುತು ಮತ್ತು ಅವುಗಳ ಚಲನವಲನಗಳನ್ನು ಆಧರಿಸಿ ಸೆರೆಗೆ ಬಲೆ ಬೀಸಲಾಗಿದೆ. ಜಿಲ್ಲಾ ಅರಣ್ಯ ಇಲಾಖೆ ಬಳಿ ೫೨ ಬೋನುಗಳಿವೆ. ಅವುಗಳ ಪೈಕಿ ೪೮ ಬೋನುಗಳು ಪ್ರಸ್ತುತ ಕಾರ್ಯಾಚರಣೆಯಲ್ಲಿವೆ. ಒಟ್ಟು ಮೂರು ರೀತಿಯ ಬೋನುಗಳಿವೆ. ಚಿರತೆಯ ಸೆರೆಗೆ ಸಂಪೂರ್ಣ ಕಬ್ಬಿಣದಿಂದ ಕೂಡಿದ ಬೋನು, ಸ್ಟೀಲ್ ಮತ್ತು ಫ್ಯಾಬ್ರಿಕ್ ಒಳಗೊಂಡ ಬೋನು, ವಾಕ್ ಥ್ರೂ ಗೇಜ್ ಬೋನುಗಳಿದ್ದು, ಜಿಲ್ಲಾ ಅರಣ್ಯ ಇಲಾಖೆಯಲ್ಲಿ ಸ್ಟೀಲ್ ಮತ್ತು ಫ್ರಾಬ್ರಿಕ್‌ನಿಂದ ಕೂಡಿದ ಬೋನುಗಳು ಹೆಚ್ಚಾಗಿವೆ. ಸಂಪೂರ್ಣ ಕಬ್ಬಿಣದಿಂದ ಕೂಡಿದ ಎರಡು ಬೋನುಗಳಿವೆ. ತುರ್ತು ಪರಿಸ್ಥಿತಿ ಸಮಯದಲ್ಲಿ ವಾಕ್ ಥ್ರೂ ಗೇಜ್ ಬೋನನ್ನು ಹೊರಗಿನಿಂದ ತರಿಸಿಕೊಂಡು ಇಡಲಾಗುತ್ತಿದೆ.ಚಿರತೆಗಳ ದೂರು ಕೇಳಿಬಂದ ಗ್ರಾಮಗಳಲ್ಲಿ ಅವುಗಳ ಚಲನವಲನ, ಹೆಜ್ಜೆ ಗುರುತನ್ನು ಆಧರಿಸಿ ಅಲ್ಲಿ ಬೋನುಗಳನ್ನು ಇಡಲಾಗುತ್ತಿದೆ. ಅಲ್ಲಿ ೧೫ ದಿನಗಳವರೆಗೆ ಬೋನುಗಳು ಇರಲಿವೆ. ಚಿರತೆಗಳ ಹಾವಳಿ ತೀರಾ ಹೆಚ್ಚಾಗಿರುವ ಬಗ್ಗೆ ದೂರುಗಳು ಬಂದಾಗ ಆಗ ಆ ಬೋನುಗಳನ್ನು ತುರ್ತು ಇರುವ ಜಾಗಗಳಿಗೆ ಅಧಿಕಾರಿಗಳು ಸ್ಥಳಾಂತರಿಸುವರು. ಸೆರೆ ಸಿಕ್ಕ ಚಿರತೆಗಳನ್ನು ಅಭಯಾರಣ್ಯಗಳಿಗೆ ರವಾನಿಸಲಾಗಿದೆ. ಅವುಗಳೊಂದಿಗೆ ಸಿಕ್ಕ ಚಿರತೆ ಮರಿಗಳನ್ನು ಸಾಂತ್ವನ ಕೇಂದ್ರಗಳಲ್ಲಿ ಆರೈಕೆ ಮಾಡಿ ನಂತರ ಕಾಡಿಗೆ ಬಿಡಲಾಗುತ್ತಿದೆ.ಸುಲಭವಾಗಿ ಸೆರೆ ಸಿಗುವುದಿಲ್ಲ:ಚಿರತೆಗಳು ಅಷ್ಟು ಸುಲಭಕ್ಕೆ ಸೆರೆ ಸಿಗುವಂತಹ ಪ್ರಾಣಿಯಲ್ಲ. ಒಂದು ಚಿರತೆ ಸೆರೆ ಸಿಕ್ಕಿರುವುದನ್ನು ಕಂಡರೆ ಮತ್ತೊಂದು ಚಿರತೆ ಆ ದಾರಿಯಲ್ಲಿ ಬರುವುದೇ ಇಲ್ಲ. ಬೋನುಗಳನ್ನು ಇಟ್ಟ ಸ್ಥಳಗಳಿಗೆ ಚಿರತೆಗಳು ಬಂದರೂ ಅದರೊಳಗೆ ನುಗ್ಗುವ ಧೈರ್ಯ ಮಾಡುವುದಿಲ್ಲ. ಹಾಗೆಯೇ ವಾಪಸ್ ತೆರಳಿರುವ ನಿದರ್ಶನಗಳೂ ಇವೆ.ಸಾಮಾನ್ಯವಾಗಿ ಚಿರತೆಗಳು ಸುರಕ್ಷತೆಗಾಗಿ ಮನುಷ್ಯರು ಓಡಾಡದೇ ಇರುವಂತಹ ಜಾಗಗಳನ್ನು ಹುಡುಕಿಕೊಳ್ಳುತ್ತವೆ. ಕಬ್ಬಿನ ಗದ್ದೆಗಳು, ಪಾಳುಬಿದ್ದ ಜಮೀನುಗಳು, ಬೆಟ್ಟ-ಗುಡ್ಡಗಳಿಂದ ಕೂಡಿದ ಪ್ರದೇಶಗಳಲ್ಲಿ ಚಿರತೆಗಳು ಆಶ್ರಯ ಪಡೆದುಕೊಂಡಿರುತ್ತವೆ. ಕಾಡಿನಲ್ಲಿ ಆಹಾರ ಸಿಗದಿದ್ದಾಗ ಮತ್ತು ಸಂತಾನಾಭಿವೃದ್ಧಿಗಾಗಿ ಸುರಕ್ಷಿತ ಜಾಗಗಳನ್ನು ಆಶ್ರಯಿಸಿಕೊಂಡು ಬರುತ್ತವೆ.ಕಬ್ಬಿನ ಗದ್ದೆ ಮತ್ತು ತೆಂಗಿನ ಸಸಿಗಳು ಇರುವ ಜಾಗಗಳಲ್ಲಿ ಕಾಡಂದಿಗಳು ಸಂಚಾರ ಹೆಚ್ಚಾಗಿರುವುದರಿಂದ ಚಿರತೆಗಳು ಅವುಗಳನ್ನು ಬೇಟೆಯಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಜೊತೆಗೆ ಕೆಲವೊಮ್ಮೆ ಮಂಗಗಳನ್ನು ಬೇಟೆಯಾಡಿ ತಿನ್ನುವುದೂ ಉಂಟು. ತಾನು ಆಶ್ರಯ ಪಡೆದಿರುವ ಕಡೆ ಆಹಾರ ಸಿಗದಿದ್ದ ಸಮಯದಲ್ಲಿ ಆಹಾರವನ್ನರಿಸಿಕೊಂಡು ಗ್ರಾಮಗಳ ಕಡೆ ಬರುವುದುಂಟು. ಪ್ರಸ್ತುತ ಕಬ್ಬು ಕಟಾವು ಆಗಿರುವುದರಿಂದ ಚಿರತೆಗಳ ಗ್ರಾಮಸ್ಥರಿಗೆ ಕಾಣಸಿಗುವುದು ಹೆಚ್ಚಾಗಿದೆ. ಅವುಗಳು ಸುರಕ್ಷಿತ ಸ್ಥಳ ಬಯಸುತ್ತಿರುವುದರಿಂದ ಅಲ್ಲಲ್ಲಿ ಪ್ರತ್ಯಕ್ಷವಾಗುತ್ತಿವೆ. ಇದರಿಂದ ಜನರು ಗಾಬರಿಯಾಗುವುದು ಬೇಡ. ಚಿರತೆಗಳು ಕಂಡುಬಂದ ಕೂಡಲೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರೆ ಬೋನುಗಳನ್ನಿಟ್ಟು ಸೆರೆಗೆ ಕ್ರಮ ವಹಿಸಲಾಗುವುದು ಎಂದು ಅರಣ್ಯಾಧಿಕಾರಿಗಳು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.ಕೋಳಿ ತ್ಯಾಜ್ಯ ವಾಸನೆ:ಕೋಳಿ ತ್ಯಾಜ್ಯ ಮತ್ತು ನಾಯಿಗಳ ವಾಸನೆ ಹಿಡಿದು ಚಿರತೆಗಳು ಗ್ರಾಮಗಳ ಕಡೆ ಬರುತ್ತವೆ. ಆ ಸಮಯದಲ್ಲಿ ಕೋಳಿ, ನಾಯಿಗಳು ಸಿಗದಿದ್ದರೆ ಸಾಕು ಪ್ರಾಣಿಗಳು ಮತ್ತು ಜಾನುವಾರುಗಳ ಮೇಲೆ ದಾಳಿ ನಡೆಸಿ ಹಸಿವನ್ನು ನೀಗಿಸಿಕೊಳ್ಳುತ್ತವೆ. ಚಿರತೆಗಳ ಹಾವಳಿ ಹೆಚ್ಚಾಗಿರುವ ಕಡೆಗಳಲ್ಲಿ ಗ್ರಾಮಸ್ಥರು ಸಾಕು ಪ್ರಾಣಿಗಳು ಮತ್ತು ಜಾನುವಾರುಗಳನ್ನು ಮನೆಗಳ ಹೊರಗೆ ಕಟ್ಟಬಾರದು. ಕೊಟ್ಟಿಗೆಯನ್ನು ನಿರ್ಮಿಸಿಕೊಂಡು ಒಳಗಡೆಯೇ ಕಟ್ಟಿಹಾಕಿಕೊಂಡರೆ ಸಾಕುಪ್ರಾಣಿಗಳ ಸಾವಿನಿಂದ ಉಂಟಾಗುವ ಆರ್ಥಿಕ ನಷ್ಟದಿಂದ ಪಾರಾಗಬಹುದು. ಚಿರತೆಗಳು ಕಂಡುಬರುವ ಗ್ರಾಮಗಳಲ್ಲಿ ಸಂಜೆಯ ಬಳಿಕ ಮಕ್ಕಳು ಓಡಾಡಬಾರದು, ಗ್ರಾಮಸ್ಥ್ಟರು ರಾತ್ರಿ ವೇಳೆ ತೋಟ-ಗದ್ದೆಗಳ ಬಳಿ ತೆರಳದಂತೆ ಅರಣ್ಯ ಇಲಾಖೆ ಭಿತ್ತಿಪತ್ರಗಳನ್ನು ಹಂಚಿ, ಪ್ರಚಾರ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.ಮಂಡ್ಯ ಜಿಲ್ಲೆಗೆ ಹೆಚ್ಚುವರಿ ಎರಡು ಚಿರತೆ ಕಾರ್ಯಪಡೆ ಅಗತ್ಯಮಂಡ್ಯ ಮತ್ತು ಮೈಸೂರು ಜಿಲ್ಲೆಯನ್ನೊಳಗೊಂಡಂತೆ ಚಿರತೆ ಕಾರ್ಯಾಚರಣೆ ಪಡೆಯನ್ನು ರಚಿಸಲಾಗಿದೆ. ಮೈಸೂರು ಜೀವ ವೈವಿಧ್ಯವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಇದರ ಮುಖ್ಯಸ್ಥರಾಗಿದ್ದಾರೆ. ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಈ ಕಾರ್ಯಪಡೆ ಇದೆ. ಮಂಡ್ಯ ಮತ್ತು ಮಳವಳ್ಳಿಗೆ ತಲಾ ಒಂದೊಂದು ಚಿರತೆ ಕಾರ್ಯಾಚರಣೆ ಪಡೆ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಕಾರ್ಯಪಡೆಯು ತುರ್ತು ಸಂದರ್ಭಗಳಲ್ಲಿ ಹಾಗೂ ಚಿರತೆಗಳು ಅಸ್ವಸ್ಥಗೊಂಡಿರುವ, ಅಪಾಯಕ್ಕೆ ಸಿಲುಕಿರುವ, ಗಾಯಗೊಂಡಿರುವ ಸಂದರ್ಭಗಳಲ್ಲಿ ಚಿರತೆ ಕಂಡುಬಂದಿರುವ ಜಾಗಗಳಲ್ಲಿ ಅತ್ಯಾಧುನಿಕ ಡ್ರೋನ್‌ಗಳನ್ನು ಹಾರಿಸಿ ಚಿರತೆಗಳಿರುವ ಸ್ಥಳವನ್ನು ಪತ್ತೆಹಚ್ಚುವುದು, ಈ ಸಮಯದಲ್ಲಿ ಪ್ರಾಣಕ್ಕೆ ತೊಂದರೆಯಾಗದಂತೆ ಸುರಕ್ಷಾ ಕವಚ, ಅಗತ್ಯ ಸಲಕರಣೆಗಳನ್ನಿಟ್ಟುಕೊಂಡು ವೈದ್ಯರ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಲಾಗುವುದು. ಈ ಕಾರ್ಯಪಡೆಗಳಿದ್ದರೆ ಚಿರತೆ ಸೆರೆಗೆ ಅನುಕೂಲವಾಗಲಿದೆ ಎನ್ನುವುದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುವ ಮಾತಾಗಿದೆ.ಚಿರತೆ ಸಂರಕ್ಷಣಾ ಕೇಂದ್ರ ಬೇಕುನಾಡಿನಲ್ಲಿ ಸೆರೆಹಿಡಿದ ಚಿರತೆಗಳನ್ನು ಏಕಾಏಕಿ ಕಾಡಿಗೆ ಬಿಡುವುದು ಸರಿಯಾದ ಕ್ರಮವಲ್ಲ. ಸೆರೆಹಿಡಿದ ಚಿರತೆಗಳನ್ನು ಸಂರಕ್ಷಣಾ ಕೇಂದ್ರದಲ್ಲಿಟ್ಟು ಆರೈಕೆ ಮಾಡಬೇಕು. ಚಿರತೆ ಮರಿಗಳಿದ್ದರೆ ತಾಯಿಯಿಂದ ತಕ್ಷಣಕ್ಕೆ ಬೇರ್ಪಡಿಸದೆ ಅವುಗಳೂ ತಾಯಿಯ ಆರೈಕೆಯಲ್ಲಿರುವಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಚಿರತೆ ಸಂರಕ್ಷಣಾ ಕೇಂದ್ರಗಳನ್ನು ತೆರೆದು ಆರೈಕೆ ಮಾಡಿ ನಂತರ ಅವುಗಳನ್ನು ಕಾಡಿಗೆ ಬಿಡುವುದು ಉತ್ತಮ ಎನ್ನುವುದು ಹಿರಿಯ ಅರಣ್ಯಾಧಿಕಾರಿಗಳು ಹೇಳುತ್ತಾರೆ.ಎರಡು ವರ್ಷಗಳಲ್ಲಿ ಸೆರೆಸಿಕ್ಕ ಚಿರತೆಗಳುತಾಲೂಕು ೨೦೨೫ ೨೦೨೬ಪಾಂಡವಪುರ ೦೨ ೦೫ಮಂಡ್ಯ ೦೦ ೦೧ಶ್ರೀರಂಗಪಟ್ಟಣ ೦೨ ೦೧ಕೆ.ಆರ್.ಪೇಟೆ ೦೨ ೦೨ಮಳವಳ್ಳಿ ೦೧ ೦೦ಮದ್ದೂರು ೦೬ ೦೧ನಾಗಮಂಗಲ ೦೩ ೦೧ಒಟ್ಟು ೧೬ ೧೧

ಚಿರತೆಗಳಿಗೆ ಆಹಾರ ಸಿಗದಿದ್ದಾಗ ಮಾತ್ರ ತಮ್ಮ ನೆಲೆಯನ್ನು ಬಿಟ್ಟು ಗ್ರಾಮಗಳ ಕಡೆ ಬರುತ್ತವೆ. ಆ ಸಮಯದಲ್ಲಿ ಸಾಕುಪ್ರಾಣಿಗಳು, ಜಾನುವಾರುಗಳ ಮೇಲೆ ದಾಳಿ ಮಾಡುತ್ತವೆ. ಕೋಳಿ ತ್ಯಾಜ್ಯ, ನಾಯಿಗಳ ವಾಸನೆ ಹಿಡಿದು ಗ್ರಾಮಗಳ ಕಡೆ ಬರುತ್ತವೆ. ಚಿರತೆಗಳ ಬಗ್ಗೆ ದೂರು ಬಂದ ಜಾಗಗಳಲ್ಲಿ ಬೋನುಗಳನ್ನು ಇಡಲಾಗಿದೆ. ಹಾಲಿ ೪೮ ಬೋನುಗಳು ಕಾರ್ಯಾಚರಣೆಯಲ್ಲಿವೆ. ಸೆರೆಸಿಕ್ಕ ಚಿರತೆಗಳನ್ನು ಅಭಯಾರಣ್ಯಗಳಿಗೆ ಬಿಡಲಾಗುತ್ತಿದೆ.- ರಘು, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಂಡ್ಯ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆಐಎನಲ್ಲಿ ₹13 ಕೋಟಿಯ ಡ್ರಗ್ಸ್‌ ಜಪ್ತಿ
ಮಾರತಹಳ್ಳೀಲಿ ಕೊಡಲಿಯಿಂದ ಕೊಚ್ಚಿ ಪತ್ನಿಯನ್ನೇ ಕೊಂದ ಗಂಡ