ಯಕ್ಷೋತ್ಸವ ತಾಳಮದ್ದಲೆ ಸ್ಪರ್ಧೆಯಲ್ಲಿ ೨೭ ತಂಡ ಭಾಗಿ

KannadaprabhaNewsNetwork |  
Published : Sep 08, 2026, 02:45 AM IST
ಈ ಸಂದರ್ಭದಲ್ಲಿ ಯಕ್ಷಗುರು ಸದಾನಂದ ಇತಾಳ, ಹಿರಿಯ ತಾಳಮದ್ದಲೆ ಅರ್ಥದಾರಿ ಎಂ.ಎನ್. ಹೆಗಡೆ ಹಲವಳ್ಳಿ, ಯಕ್ಷಶಾಲ್ಮಲಾ ಕಾರ್ಯಾಧ್ಯಕ್ಷ ಆರ್.ಎಸ್. ಹೆಗಡೆ ಬೈರುಂಬೆ ಸೇರಿದಂತೆ ಹಲವರು ಉಪಸ್ಥಿತರಿದ್ದರು. | Kannada Prabha

ಸಾರಾಂಶ

ಮಕ್ಕಳು ಪೌರಾಣಿಕ ಪಾತ್ರಗಳ ಸ್ವಭಾವ, ಸಂದರ್ಭ ಹಾಗೂ ಸಂಘರ್ಷಗಳನ್ನು ಮಾತಿನ ಮೂಲಕ ಕಟ್ಟಿಕೊಟ್ಟರು. ಪದ್ಯದ ಆಶಯವನ್ನು ಗ್ರಹಿಸಿ, ಅದಕ್ಕೆ ತಕ್ಕಂತೆ ಪಾತ್ರಗಳ ಭಾವನೆಗಳನ್ನು ಮಾತಿನ ಮೂಲಕ ಅಭಿವ್ಯಕ್ತಿಸಿದ ರೀತಿ ಪ್ರೇಕ್ಷಕರ ಗಮನ ಸೆಳೆಯಿತು.

ಶಿರಸಿ: ಯಕ್ಷಗಾನದ ಸಾಹಿತ್ಯಿಕ ಹಾಗೂ ಸಂವಾದ ಪರಂಪರೆಯನ್ನು ಮಕ್ಕಳಲ್ಲಿ ಬೆಳೆಸುವ ಉದ್ದೇಶದಿಂದ ಸೋಂದಾ‌ ಸ್ವರ್ಣವಲ್ಲೀಯಲ್ಲಿ ನಡೆದ ಎರಡು ದಿನಗಳ‌ ಯಕ್ಷೋತ್ಸವದ ತಾಳಮದ್ದಲೆ ಸ್ಪರ್ಧೆಯಲ್ಲಿ ವಿವಿಧ ಶಾಲೆ ಹಾಗೂ ಕಲಾ ಸಂಸ್ಥೆಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ಗಮನ ಸೆಳೆದರು.

ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಯಕ್ಷಶಾಲ್ಮಲಾ‌ ಸಂಸ್ಥೆಯು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಪ್ತಕ ಬೆಂಗಳೂರು ಸಹಯೋಗದೊಂದಿಗೆ ನಡೆದ ತಾಳಮದ್ದಲೆ ಸ್ಪರ್ಧೆಯಲ್ಲಿ ಕಿರಿಯ, ಹಿರಿಯ ಹಾಗೂ ಸಾಂಸ್ಥಿಕ ವಿಭಾಗಗಳಲ್ಲಿ ಒಟ್ಟು ೨೭ ತಂಡಗಳ ೧೩೭ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಮಕ್ಕಳು ಪೌರಾಣಿಕ ಪಾತ್ರಗಳ ಸ್ವಭಾವ, ಸಂದರ್ಭ ಹಾಗೂ ಸಂಘರ್ಷಗಳನ್ನು ಮಾತಿನ ಮೂಲಕ ಕಟ್ಟಿಕೊಟ್ಟರು. ಪದ್ಯದ ಆಶಯವನ್ನು ಗ್ರಹಿಸಿ, ಅದಕ್ಕೆ ತಕ್ಕಂತೆ ಪಾತ್ರಗಳ ಭಾವನೆಗಳನ್ನು ಮಾತಿನ ಮೂಲಕ ಅಭಿವ್ಯಕ್ತಿಸಿದ ರೀತಿ ಪ್ರೇಕ್ಷಕರ ಗಮನ ಸೆಳೆಯಿತು.ಕಿರಿಯರ ವಿಭಾಗದಲ್ಲಿ ಕಟ್ಟಿಗೆ ಹಿರಿಯ ಪ್ರಾಥಮಿಕ ಶಾಲೆ ತಂಡವು ದಕ್ಷಯಜ್ಞ ಪ್ರಸಂಗವನ್ನು ಪ್ರಸ್ತುತಪಡಿಸಿ ಪ್ರಥಮ ಸ್ಥಾನ ಪಡೆಯಿತು. ಶಿರಸಿ ಲಯನ್ಸ್ ಪ್ರಾಥಮಿಕ ಶಾಲೆ ತಂಡದ ಅಭಿಮನ್ಯು ಕಾಳಗ ದ್ವಿತೀಯ ಸ್ಥಾನ ಗಳಿಸಿದರೆ, ಕೊಡಸೆ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಧರ್ಮಾಂಗದ ದಿಗ್ವಿಜಯ ಪ್ರಸಂಗದ ಮೂಲಕ ತೃತೀಯ ಸ್ಥಾನ ಪಡೆದರು.

ಹಿರಿಯ ವಿಭಾಗದಲ್ಲಿ ಲಯನ್ಸ್ ಪ್ರೌಢಶಾಲೆ ತಂಡವು ವೀರ ವೃಷಸೇನ ಪ್ರಸಂಗದ ಮೂಲಕ ಪ್ರಥಮ ಸ್ಥಾನ ಗಳಿಸಿತು. ಚಂದನ ನರೇಬೈಲ್ ಶಾಲಾ ತಂಡದ ಭರತಾಗಮನ ದ್ವಿತೀಯ ಸ್ಥಾನ ಪಡೆದರೆ, ಶಾರದಾಂಬಾ ಬೈರುಂಬೆ ಶಾಲಾ ತಂಡವು ಭೌಮಾಸುರ ಕಾಳಗ ಪ್ರಸಂಗವನ್ನು ಮಂಡಿಸಿ ತೃತೀಯ ಸ್ಥಾನ ಪಡೆಯಿತು.ಸಾಂಸ್ಥಿಕ ವಿಭಾಗದಲ್ಲಿ ತ್ರಯಂಬಕೇಶ್ವರ ಯಕ್ಷಗಾನ ಬಳಗ, ಮುರ್ಡೇಶ್ವರ ತಂಡವು ಸುಧನ್ವ ಮೋಕ್ಷ ಪ್ರಸಂಗದ ಮೂಲಕ ಪ್ರಥಮ ಸ್ಥಾನ ಪಡೆಯಿತು. ಯಕ್ಷಗೆಜ್ಜೆ ಶಿರಸಿ ತಂಡವು ಭೀಷ್ಮ ವಿಜಯ ಪ್ರದರ್ಶಿಸಿ ದ್ವಿತೀಯ ಸ್ಥಾನ ಗಳಿಸಿತು. ಚಂದಗುಳಿ ಸಿದ್ಧಿವಿನಾಯಕ ಯಕ್ಷಕಲಾ ಬಳಗದ ಧರ್ಮಾಂಗದ ದಿಗ್ವಿಜಯ ತೃತೀಯ ಸ್ಥಾನ ಪಡೆಯಿತು.ಸ್ಪರ್ಧೆಯ ನಿರ್ಣಾಯಕರಾಗಿ ಕಲಾವಿದರಾದ ಗಣಪತಿ ಗುಂಜಗೋಡ, ಗಣಪತಿ ಕಬ್ಬಿನಮನೆ, ಆರ್.ಟಿ. ಭಟ್ಟ ಕಬಗಾಲ, ಮಂಜುನಾಥ ಗೊರಮನೆ, ಶ್ರೀನಿವಾಸ ಮತ್ತಿಗಟ್ಟ, ಶಿವರಾಮ ಭಾಗವತ, ನಿರಂಜನ ಜಾಗನಳ್ಳಿ, ನಾಗರಾಜ ಕೆಕ್ಕಾರ ಹಾಗೂ ಆಶಾ ಸತೀಶ ಭಾಗವಹಿಸಿದ್ದರು.

ಸ್ಪರ್ಧಾರ್ಥಿಗಳ ಪದ್ಯಗ್ರಹಿಕೆ, ಅರ್ಥಗಾರಿಕೆ, ಸಂಭಾಷಣಾ ಸಾಮರ್ಥ್ಯ, ಪಾತ್ರ ನಿರ್ವಹಣೆ, ಪ್ರಸಂಗದ ಅರಿವು ಹಾಗೂ ಒಟ್ಟಾರೆ ಪ್ರದರ್ಶನವನ್ನು ಪರಿಗಣಿಸಿ ನಿರ್ಣಯ ಕೈಗೊಳ್ಳಲಾಯಿತು. ಯಕ್ಷ ಶಾಲ್ಮಲಾ ಕಾರ್ಯದರ್ಶಿ ನಾಗರಾಜ ಜೋಶಿ ಅವರು ಸ್ಪರ್ಧೆಯ ಫಲಿತಾಂಶವನ್ನು ಪ್ರಕಟಿಸಿದರು.ವಿಜೇತ ತಂಡಗಳಿಗೆ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಯಕ್ಷಗುರು ಸದಾನಂದ ಇತಾಳ, ಹಿರಿಯ ತಾಳಮದ್ದಲೆ ಅರ್ಥದಾರಿ ಎಂ.ಎನ್. ಹೆಗಡೆ ಹಲವಳ್ಳಿ, ಯಕ್ಷಶಾಲ್ಮಲಾ ಕಾರ್ಯಾಧ್ಯಕ್ಷ ಆರ್.ಎಸ್. ಹೆಗಡೆ ಬೈರುಂಬೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಒಟ್ಟು ೨೭ ತಂಡಗಳ ೧೩೭ ಮಕ್ಕಳು ಭಾಗವಹಿಸಿರುವುದು ತಾಳಮದ್ದಲೆಯ ಬಗ್ಗೆ ಮಕ್ಕಳಲ್ಲೂ ಶಿಕ್ಷಣ ಸಂಸ್ಥೆಗಳಲ್ಲೂ ಮೂಡುತ್ತಿರುವ ಆಸಕ್ತಿಗೆ ಸಾಕ್ಷಿಯಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೀವನದಲ್ಲಿ ಶರಣರ ತತ್ವಾದರ್ಶ ಅಳವಡಿಸಿಕೊಳ್ಳಿ: ಡಾ. ಅನ್ನದಾನೀಶ್ವರ ಶ್ರೀಗಳು
ಪ್ರಸ್ತಾಪಿತ ಮಂಗಳೂರು ಹೈಕೋರ್ಟ್‌ ಪೀಠಕ್ಕೆ ಜಿಲ್ಲೆ ಸೇರ್ಪಡೆಗೆ ವಿರೋಧ