ರಾಗಿ ಕಟಾವು ಯಂತ್ರಕ್ಕೆ 2700 ರು. ನಿಗದಿ

KannadaprabhaNewsNetwork |  
Published : Nov 12, 2025, 01:15 AM IST

ಸಾರಾಂಶ

ರಾಗಿ ಕಟಾವು ಮಾಡುವ ಯಂತ್ರಗಳಿಗೆ ಪ್ರತಿ ಗಂಟೆಗೆ 2,700 ರೂ.ಗಳನ್ನು ನಿಗದಿಪಡಿಸಿ ಸಭೆಯಲ್ಲಿ ನಿರ್ಣಯ

ಕನ್ನಡಪ್ರಭ ವಾರ್ತೆ, ತುಮಕೂರು

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಿರುವ ರಾಗಿ ಬೆಳೆಯು ಬಹುತೇಕ ಕಾಳು ತುಂಬುವ ಹಂತದಿಂದ ಬಲಿಯುವ ಹಂತ ತಲುಪಿದ್ದು, ಈಗಾಗಲೇ ಅಲ್ಲಲ್ಲಿ ಕಟಾವು ಕಾರ್ಯ ಪ್ರಾರಂಭವಾಗಿರುವುದರಿಂದ ರೈತರ ಅನುಕೂಲಕ್ಕಾಗಿ ರಾಗಿ ಕಟಾವು ಮಾಡುವ ಯಂತ್ರಗಳಿಗೆ ಪ್ರತಿ ಗಂಟೆಗೆ 2,700 ರೂ.ಗಳನ್ನು ನಿಗದಿಪಡಿಸಿ ಸಭೆಯಲ್ಲಿ ನಿರ್ಣಯವನ್ನು ಕೈಗೊಳ್ಳಲಾಯಿತು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಮುಂಗಾರು ಹಂಗಾಮಿನ ರಾಗಿ ಬೆಳೆಯ ಕಟಾವು ಯಂತ್ರಗಳ ಬಾಡಿಗೆ ದರ ನಿಗದಿ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು ರಾಗಿ ಕಟಾವು ಯಂತ್ರಗಳ ಮಾಲೀಕರು ಬೆಳೆ ಕಟಾವು ಮಾಡಲು ರೈತರಿಂದ ಹೆಚ್ಚಿನ ಬಾಡಿಗೆ ದರವನ್ನು ವಸೂಲಿ ಮಾಡುತ್ತಿದ್ದಾರೆ ಎನ್ನುವ ದೂರುಗಳು ರೈತರಿಂದ ಬಂದ ಹಿನ್ನೆಲೆಯಲ್ಲಿ ಈ ದರವನ್ನು ನಿಗದಿಗೊಳಿಸಲಾಗಿದೆ. ಸಭೆಯ ನಿರ್ಣಯದಂತೆ ಕಂಬೈಂಡ್ ಹಾರ್ವೆಸ್ಟ್ ಯಂತ್ರಕ್ಕೆ ಪ್ರತಿ ಗಂಟೆಗೆ 2,700 ರು. ಹಾಗೂ ಟ್ರ್ಯಾಕ್ಟರ್ ಚಾಲಿತ ಕಟಾವು ಯಂತ್ರಗಳಿಗೆ 2,400 ರು. ಮೀರದಂತೆ ಬಾಡಿಗೆಯನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.

ರಾಗಿ ಕಟಾವಿಗಾಗಿ ಜಿಲ್ಲೆಗೆ ಆಗಮಿಸುವ ಯಂತ್ರಗಳು ಕೃಷಿ ಇಲಾಖೆಗೆ ಕಡ್ಡಾಯವಾಗಿ ಮಾಹಿತಿ ನೀಡಿ ಕಾರ್ಯನಿರ್ವಹಿಸಬೇಕು. ಕಟಾವಿಗೆ ಸುಸ್ಥಿತಿಯಲ್ಲಿರುವ ಯಂತ್ರೋಪಕರಣಗಳನ್ನು ಮಾತ್ರ ಬಳಸಬೇಕು. ಬೆಳೆ ಕಟಾವಿಗಾಗಿ ಹಾರ್ವೆಸ್ಟರ್ ಹಬ್ ಯೋಜನೆಯಡಿ ಕೃಷಿ ಇಲಾಖೆಯಿಂದ ಸಣ್ಣ ಮತ್ತು ಅತಿ ಸಣ್ಣ ರೈತರ ಉಪಯೋಗಕ್ಕಾಗಿ ನೀಡಿರುವ ಕಟಾವು ಯಂತ್ರಗಳನ್ನು ಸದ್ಬಳಕೆ ಮಾಡಬೇಕು. ಕಟಾವು ಯಂತ್ರಗಳಿಗೆ ಜಿಪಿಎಸ್ ಅಳವಡಿಸಿ ಮಾಹೆವಾರು ಚಲನ-ವಲನ ವರದಿಯನ್ನು ತಮಗೆ ನೀಡಬೇಕೆಂದು ಸೂಚನೆ ನೀಡಿದರು.

ಬಾಡಿಗೆ ದರಕ್ಕಿಂತ ಹೆಚ್ಚಿನ ದರ ಪಡೆಯುವ ರಾಗಿ ಕಟಾವು ಯಂತ್ರದ ಮಾಲೀಕರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ರನ್ವಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ್ ಎಸ್. ಕಳ್ಳೆನ್ನವರ ಮಾತನಾಡಿ, ಜಿಲ್ಲೆಯಲ್ಲಿ 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 151375 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದೆ. ಹಾರ್ವೆಸ್ಟರ್ ಹಬ್ ಯೋಜನೆಯಡಿ ಸರ್ಕಾರದಿಂದ ಜಿಲ್ಲೆಗೆ 7 ಕಟಾವು ಯಂತ್ರಗಳನ್ನು ನೀಡಲಾಗಿದ್ದು, ಸಣ್ಣ ಹಾಗೂ ಅತಿ ಸಣ್ಣ ರೈತರ ಉಪಯೋಗಕ್ಕೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಪುರುಷೋತ್ತಮ್, ಸೇರಿದಂತೆ ಜಿಲ್ಲೆಯ ರೈತ ಮುಖಂಡರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ