ಕನ್ನಡಪ್ರಭ ವಾರ್ತೆ ಉಡುಪಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಅ.28 ಮತ್ತು 29ರಂದು ವಿಶ್ವ ಬಂಟರ ಸಮ್ಮೇಳನ-2023 ( ಕ್ರೀಡಾ ಸಂಗಮ ಮತ್ತು ಸಾಂಸ್ಕೃತಿಕ ಸಂಭ್ರಮ) ಉಡುಪಿಯಲ್ಲಿ ಅದ್ದೂರಿಯಾಗಿ ನಡೆಯಲಿದೆ. ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟಿಸಲಿದ್ದು, ಸಮಾರೋಪ ಸಮಾರಂಭದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭಾಗವಹಿಸಲಿದ್ದಾರೆ. ಈ ಬಗ್ಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ನೀಡಿದರು. ಅ.28ರಂದು ಬೆಳಗ್ಗೆ 9 ಗಂಟೆಗೆ ಉಡುಪಿ ನಗರದ ಬೋರ್ಡ್ ಹೈಸ್ಕೂಲ್‌ನಿಂದ ಬೃಹತ್ ಮೆರವಣಿಗೆಯಲ್ಲಿ ಅಜ್ಜರಕಾಡು ಮೈದಾನಕ್ಕೆ ಅತಿಥಿ ಗಣ್ಯರನ್ನು ಕರೆ ತರಲಾಗುವುದು. 11 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮೇಳನವನ್ನು ಉದ್ಘಾಟಿಸಿ, ಕ್ರೀಡೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಸಚಿವ ಬಿ.ರಮಾನಾಥ ರೈ, ಉಡುಪಿಯ ಅಷ್ಟ ಮಠಾಧೀಶರು ಮತ್ತು ಇತರ ಮಠಾಧೀಶರು ಭಾಗವಹಿಸಲಿದ್ದಾರೆ ಎಂದರು. * ಸಾಧಕರಿಗೆ ಸನ್ಮಾನ ಏಷ್ಯನ್ ಗೇಮ್ಸ್ ಬ್ಯಾಡ್ಮಿಂಟನ್ ಪದಕ ವಿಜೇತ ಚಿರಾಗ್ ಶೆಟ್ಟಿ, ಅಂಡರ್-19 ವರ್ಲ್ಡ್ ಜೂನಿಯರ್ ಚಾಂಪಿಯನ್ ಆಯುಷ್ ಶೆಟ್ಟಿ ಕಾರ್ಕಳ, ಡಾ.ಎ.ಸದಾನಂದ ಶೆಟ್ಟಿ ಮಂಗಳೂರು, ಡಾ.ಎಂ.ಎನ್.ರಾಜೇಂದ್ರ ಕುಮಾರ್, ಕೆ.ಪ್ರಕಾಶ್ ಶೆಟ್ಟಿ, ಚಂದ್ರಹಾಸ ಕೆ. ಶೆಟ್ಟಿ, ಪ್ರವೀಣ್ ಶೆಟ್ಟಿ ವಕ್ವಾಡಿ, ಸತೀಶ್ ಶೆಟ್ಟಿ ಪಟ್ಲ, ಸಂತೋಷ್ ಶೆಟ್ಟಿ ಪುಣೆ, ವಿಶು ಶೆಟ್ಟಿ ಅಂಬಲಪಾಡಿ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು. ನಂತರ ಕ್ರೀಡೋತ್ಸವ ನಡೆಯಲಿದ್ದು, ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 11 ಗಂಟೆ ವರೆಗೆ ಪ್ರೊ-ಕಬಡ್ಡಿ ಮಾದರಿಯಲ್ಲಿ 8 ತಂಡಗಳ ಮಧ್ಯೆ ಕಬಡ್ಡಿ ಪಂದ್ಯಾಟ ನಡೆಯಲಿದೆ. ಅ. 29ರಂದು ಸಾಂಸ್ಕೃತಿಕ ವೈಭವ - ಸಮಾರೋಪ ಸಮಾರಂಭದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿಶೇಷ ಅತಿಥಿಯಾಗಿ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಉಪಸ್ಥಿತರಿರಲಿದ್ದಾರೆ. ಮೂಡುಬಿದಿರೆಯ ಡಾ.ಎಂ. ಮೋಹನ್ ಆಳ್ವ, ಉತ್ತರ ಮುಂಬೈ ಸಂಸದ ಗೋಪಾಲ ಶೆಟ್ಟಿ, ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವೆ ಶೋಭಾ ಕರಂದ್ಲಾಜೆ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಶೆಟ್ಟಿ ಮತ್ತಿತರು ಉಪಸ್ಥಿತರಿರುವರು. ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಉಪಾಧ್ಯಕ್ಷರು, ಪ್ರ.ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಜೊತೆ ಕಾರ್ಯದರ್ಶಿ ಚಂದ್ರಹಾಸ ಡಿ.ಶೆಟ್ಟಿ, ಕ್ರೀಡಾಕೂಟ ಸಂಚಾಲಕ ಗಿರೀಶ್ ಶೆಟ್ಟಿ ತೆಳ್ಳಾರು, ಸಹಸಂಚಾಲಕ ಡಾ. ರೋಶನ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಸಮ್ಮೇಳನದಲ್ಲಿ ಮಿಂಚಲಿರುವ ಸಿನಿತಾರೆಯರು ಸಮ್ಮೇಳನದಲ್ಲಿ ದೇಶದ ಪ್ರಮುಖ ಸಿನಿತಾರೆಯರಾದ ಸುನಿಲ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಐಶ್ವರ್ಯ ರೈ, ಶಿಲ್ಪಾ ಶೆಟ್ಟಿ, ರಿಷಬ್ ಶೆಟ್ಟಿ, ಗುರುಕಿರಣ್ ಶೆಟ್ಟಿ, ಶ್ರೀನಿಧಿ ಶೆಟ್ಟಿ, ಶಿವಧ್ವಜ್ ಶೆಟ್ಟಿ, ಅನುಷ್ಕಾ ಶೆಟ್ಟಿ, ಪೂಜಾ ಹೆಗ್ಡೆ, ರಾಜ್ ಬಿ. ಶೆಟ್ಟಿ, ರೂಪೇಶ್ ಶೆಟ್ಟಿ, ಯಶ್ ಹಾಗೂ ಭಾರತದ ಹೆಸರಾಂತ ಚಿತ್ರತಾರೆಯರು, ನಿರ್ಮಾಪಕರು, ನಿರ್ದೇಶಕರು ಭಾಗವಹಿಸಲಿದ್ದಾರೆ. ಅದ್ದೂರಿ ಮೆರವಣಿಗೆ ಉದ್ಘಾಟನೆಗೆ ಮೊದಲು ನಡೆಯುವ ಅದ್ದೂರಿ ಮೆರವಣಿಗೆಯಲ್ಲಿ 62ಕ್ಕೂ ಅಧಿಕ ಬಂಟರ ಸಂಘಗಳ 6,000-7,000 ಮಂದಿ ಭಾಗವಹಿಸಲಿದ್ದಾರೆ. ವಿವಿಧ ಕಲಾ ತಂಡಗಳು, ವೈವಿಧ್ಯಮಯ ಸ್ತಬ್ಧ ಚಿತ್ರಗಳು, ಕಂಬಳದ ಕೋಣಗಳು, ಕೇರಳದ ತೈಯ್ಯಂ, ಹುಲಿ ವೇಷ, ಕೀಲುಕುದುರೆ ಗೊಂಬೆಗಳು, ಹೊನ್ನಾವರ ಬ್ಯಾಂಡ್ ಸೆಟ್, ಅಗೋಳಿ ಮಂಜಣ್ಣನ ವೇಷ, ಚೆಂಡೆ, ವಾದ್ಯ, ಡೋಲು, ನಾಗಸ್ವರ, ಬಣ್ಣದ ಕೊಡೆಗಳು ಹಾಗೂ ವಿವಿಧ ವಿನೋದಾವಳಿಗಳು ಮೆರವಣಿಗಯೆ ಮೆರುಗು ಹೆಚ್ಚಿಸಲಿದೆ. ಆ ಬಳಿಕ ಅಜ್ಜರಕಾಡು ಮೈದಾನದಲ್ಲಿ ವೈವಿಧ್ಯಮಯ ಸಮವಸ್ತ್ರ ಧರಿಸಿದ ಬಂಟರ ತಂಡಗಳಿಂದ ಆಕರ್ಷಕ ಪಥಸಂಚಲನ ನಡೆಯಲಿದೆ.