ರೈತರ ಪಂಪ್‌ಸೆಟ್‌ಗಳಿಗೆ 10 ಗಂಟೆ ವಿದ್ಯುತ್‌ ಪೂರೈಕೆಗೆ ಒತ್ತಾಯ

KannadaprabhaNewsNetwork | Published : Oct 26, 2023 1:00 AM

ಸಾರಾಂಶ

ರೈತರ ಪಂಪ್‌ಸೆಟ್‌ಗಳಿಗೆ 10 ಗಂಟೆಗಳ ಕಾಲ ಸಮರ್ಪಕ ವಿದ್ಯುತ್ ಪೂರೈಸಲು ಒತ್ತಾಯಿಸಿ ಹೆಸ್ಕಾಂ ಕಚೇರಿ ಎದುರು ರತ್ನಭಾರತ ರೈತ ಸಮಾಜದ ನೇತೃತ್ವದಲ್ಲಿ ರೈತರು ಮುತ್ತಿಗೆ ಹಾಕಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ರೈತರ ಪಂಪ್‌ಸೆಟ್‌ಗಳಿಗೆ 10 ಗಂಟೆಗಳ ಕಾಲ ಸಮರ್ಪಕ ವಿದ್ಯುತ್ ಪೂರೈಸಲು ಒತ್ತಾಯಿಸಿ ಬುಧವಾರ ರತ್ನ ಭಾರತ ರೈತ ಸಮಾಜದ ನೂರಾರು ರೈತರು ಇಲ್ಲಿಯ ನವನಗರ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಹೆಸ್ಕಾಂ ಕಚೇರಿಯಲ್ಲಿ ಸಮಾವೇಶಗೊಂಡ ರೈತರು ಸರ್ಕಾರ ಹಾಗೂ ಹೆಸ್ಕಾಂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ರತ್ನ ಭಾರತ ರೈತ ಸಮಾಜದ ರಾಷ್ಟ್ರೀಯ ಉಪಾಧ್ಯಕ್ಷ ಹೇಮನಗೌಡ ಬಸನಗೌಡ್ರ ಮಾತನಾಡಿ, ರಾಜ್ಯಾದ್ಯಂತ ಬರಗಾಲದಿಂದ ರೈತರು ಕಂಗೆಟ್ಟಿದ್ದಾರೆ. ಇರುವ ಅಲ್ಪಸಲ್ಪ ನೀರಾವರಿ ಬೆಳೆಗೆ ಸಮರ್ಪಕ ವಿದ್ಯುತ್ ದೊರೆಯದೆ ಬೆಳೆ ನಾಶವಾಗುವ ಆತಂಕದಲ್ಲಿ ರೈತರಿದ್ದಾರೆ. ಹೆಸ್ಕಾಂನವರು ಸರಬರಾಜು ಮಾಡುವ 5 ಗಂಟೆ ವಿದ್ಯುತ್ ಯಾವುದಕ್ಕೂ ಸಾಲುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯಾದ್ಯಂತ ಭೀಕರ ಬರಗಾಲದಿಂದಾಗಿ ಮುಂಗಾರು ಸಂಪೂರ್ಣ ಕೈಕೊಟ್ಟಿದ್ದು, ಹಿಂಗಾರು ಬೆಳೆಗಳಿಗೆ ಮಳೆ ಇಲ್ಲದೆ ಒಣಗಿ ಹೋಗುತ್ತಿದೆ. ರೈತರು ಇರುವ ಪಂಪ್ ಸೆಟ್‌ಗಳ ನೀರು ಹಾಯಿಸಿ ಬೆಳೆ ಉಳಿಸಿಕೊಳ್ಳುತ್ತಿದ್ದರು. ಈ ಹಿಂದೆ ಹೆಸ್ಕಾಂನವರು ದಿನಕ್ಕೆ 7 ಗಂಟೆಗಳ ಕಾಲ ವಿದ್ಯುತ್‌ ಪೂರೈಸುತ್ತಿದ್ದರು. ಆದರೆ, ಕಳೆದ 15 ದಿನಗಳಿಂದ 5 ಗಂಟೆ ಮಾತ್ರ ಅದೂ ರಾತ್ರಿ 11 ರಿಂದ 4 ಗಂಟೆಯ ವಿದ್ಯುತ್‌ ಪೂರೈಸುತ್ತಿದ್ದು ರೈತ ಇನ್ನಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಮಳೆ ಇಲ್ಲದೇ ರೈತನು ಬೆಳೆದ ಅಲ್ಪ ಸ್ವಲ್ಪ ಬೆಳೆಯು ಒಣಗಿ ಹೊಗುತ್ತಿದ್ದು, ಮತ್ತಷ್ಟು ರೈತರು ಸಾಲಬಾಧೆಗೆ ಹೆದರಿ ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿ ಉದ್ಭವವಾಗಿದೆ. ಮುಖ್ಯಮಂತ್ರಿಗಳು ರೈತನ ಮಗನಾಗಿದ್ದು, ಕೂಡಲೇ 15 ದಿನಗಳ ಒಳಗೆ ರಾಜ್ಯದಲ್ಲಿ ಬೋರ್‌ವೆಲ್‌ವುಳ್ಳ ರೈತರಿಗೆ ಹಗಲು 10 ಗಂಟೆಗಳ ವಿದ್ಯುತ್‌ ಪೂರೈಸಲು ವಿದ್ಯುತ್ ಕಂಪನಿಗಳಿಗೆ ಆದೇಶ ಹೊರಡಿಸಬೇಕು. ಹೆಸ್ಕಾಂನವರು ಹಾಗೂ ರಾಜ್ಯ ಸರ್ಕಾರ ಡ್ಯಾಮ್‌ಗಳಲ್ಲಿ ನೀರಿಲ್ಲ, ಹೀಗಾಗಿ, ವಿದ್ಯುತ್‌ ಉತ್ಪಾದನೆ ಕಡಿಮೆಯಾಗಿದ್ದು ರೈತರಿಗೆ ವಿದ್ಯುತ್‌ ಪೂರೈಸಲು ಆಗುವುದಿಲ್ಲ ಎಂಬ ಸಬೂಬು ಹೇಳದೆ ಅನ್ಯ ರಾಜ್ಯಗಳಿಂದ ವಿದ್ಯುತ್‌ ಖರೀದಿಸಿ ಪೂರೈಸಲು ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಭಾಗದ ಇನ್ನೂ ಕೆಲವರ ಮನೆಗಳಿಗೆ ವಿದ್ಯುತ್ ದರ ಬರುತ್ತಿದೆ. ಉಚಿತ ವಿದ್ಯುತ್ ಎಂದು ಹೇಳಿರುವ ರಾಜ್ಯ ಸರ್ಕಾರ ಈಗ ಹಣ ಪಡೆಯುತ್ತಿರುವುದು ಸರಿಯಲ್ಲ ಎಂದು ಹರಿಹಾಯ್ದರು.

ಪ್ರತಿಭಟನಾ ಸ್ಥಳಕ್ಕೆ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಭೇಟಿ ನೀಡಿ ಮನವಿ ಪತ್ರ ಪಡೆದು ರೈತರ ಬೇಡಿಕೆ ಸ್ಪಂದಿಸಿ ದಿನಕ್ಕೆ 6 ಗಂಟೆಗಳ ಕಾಲ ವಿದ್ಯುತ್ ನೀಡುವುದಾಗಿ ಭರವಸೆ ನೀಡಿದರು. ಆದರೆ, ರೈತರು ಇದು ಯಾವುದಕ್ಕೂ ಸಾಲದು ದಿನದ 10 ಗಂಟೆಯ ವರೆಗೆ ವಿದ್ಯುತ್ ನೀಡಬೇಕು. ಸರ್ಕಾರಕ್ಕೆ 15 ದಿನ ಗಡುವು ನೀಡಲಾಗುವುದು. ಇಲ್ಲವಾದಲ್ಲಿ ಬಾರುಕೋಲು ಚಳವಳಿ ಮಾಡುವ ಮೂಲಕ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಚನ್ನಬಸಪ್ಪ ಹುಂಬಿ, ದೇವೇಂದ್ರಗೌಡ ಮುದಿಗೌಡರ, ಶಾಂತಪ್ಪ ನವಲಗುಂದ, ಶಿವಾನಂದ ಹುಬ್ಬಳ್ಳಿ, ಮಂಜುನಾಥ ನವಲಗುಂದ, ಚಂದ್ರಪ್ಪ ಬೆಣ್ಣಿ, ರಾಮಣ್ಣ ಓಲೇಕಾರ, ಚನ್ನಪ್ಪ ಸಂಕಣ್ಣವರ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.

Share this article