ಕುಕ್ಕೆ ಸುಬ್ರಹ್ಮಣ್ಯದಲ್ಲಿ ಫೆ. 8ರಂದು ತಾಲೂಕು ಭಜನೋತ್ಸವ ನಡೆಯಲಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಮಾಧವ ಗೌಡ ಹೇಳಿದರು.

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಫೆ. 8ರಂದು ತಾಲೂಕು ಭಜನೋತ್ಸವ ನಡೆಯಲಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಮಾಧವ ಗೌಡ ಹೇಳಿದರು.ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮಾರ್ಗದರ್ಶನ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್, ಸುಳ್ಯ ತಾಲೂಕು, ತಾಲೂಕು ಭಜನೋತ್ಸವ ಸಮಿತಿ ಸುಬ್ರಹ್ಮಣ್ಯ ವಲಯದ ಸಹಯೋಗದಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ.ವಿ ಹೆಗ್ಗಡೆ ಮಾರ್ಗದರ್ಶನದಲ್ಲಿ ಭಜನೋತ್ಸವ ನಡೆಯಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.8ರಂದು ಸಂಜೆ ಸುಮಾರು100ಕ್ಕೂ ಅಧಿಕ ತಂಡಗಳ ಸಾವಿರಕ್ಕೂ ಹೆಚ್ಚು ಭಜಕರಿಂದ ಕುಣಿತ ಭಜನೆ ಪ್ರದರ್ಶಿತವಾಗಲಿದೆ. ಮಧ್ಯಾಹ್ನ 120ಕ್ಕೂ ಅಧಿಕ ಭಜನಾ ತಂಡಗಳಿಂದ ಕುಳಿತು ಭಜನೆ ಬಳಿಕ ಕುಣಿತ ಭಜನೆ ನಡೆಯಲಿದೆ ಎಂದರು.ವೈಭವದ ಮೆರವಣಿಗೆ: 8ರಂದುಬೆಳಗ್ಗೆ ಕಾಶಿಕಟ್ಟೆ ಶ್ರೀ ಮಹಾಗಣಪತಿ ಸನ್ನಿಧಿಯಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ತನಕ ಚೆಂಡೆ, ವಾದ್ಯಘೋಷ ಮತ್ತು ವಿವಿಧ ಧಾರ್ಮಿಕ ವೇಷ ಭೂಷಣ ಹಾಗೂ ಭಜಕರ ಕುಣಿತ ಭಜನೆಯೊಂದಿಗೆ ವೈಭವದ ಮೆರವಣಿಗೆ ನಡೆಯಲಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.

ಉದ್ಘಾಟನೆ: ನಂತರ ರಥಬೀದಿ ಸಭಾಂಗಣದಲ್ಲಿ ತಾಲೂಕು ಭಜನೋತ್ಸವ ನಡೆಯಲಿದ್ದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಉದ್ಘಾಟಿಸಲಿದ್ದಾರೆ. ತಾಲೂಕು ಭಜನೋತ್ಸವ ಸಮಿತಿ ಅಧ್ಯಕ್ಷ ಡಾ. ರವಿ ಕಕ್ಕೆಪದವು ಅಧ್ಯಕ್ಷತೆ ವಹಿಸಲಿದ್ದಾರೆ. ಕುಕ್ಕೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್.ಎಸ್.ಇಂಜಾಡಿ, ಸುಬ್ರಹ್ಮಣ್ಯ ಠಾಣಾಧಿಕಾರಿ ಆಂಜನೇಯ ರೆಡ್ಡಿ, ಯೋಜನೆಯ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ, ಭಜನಾ ಪರಿಷತ್ ರಾಜ್ಯ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್, ಸುಬ್ರಹ್ಮಣ್ಯ ಗ್ರಾ.ಪಂ.ಅಧ್ಯಕ್ಷೆ ಸುಜಾತಾ ಕಲ್ಲಾಜೆ ಮತ್ತಿತರರು ಮುಖ್ಯಅತಿಥಿಗಳಾಗಿದ್ದಾರೆ.

ಸಮಾರೋಪ: ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಭಜನೋತ್ಸವ ಸಮಿತಿ ಅಧ್ಯಕ್ಷ ಗಿರಿಧರ ಸ್ಕಂದ ವಹಿಸಲಿದ್ದಾರೆ. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಯೋಜನೆ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ, ಕುಕ್ಕೆ ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠದ ದಿವಾನ ಸುದರ್ಶನ ಜೋಯಿಸರು ಮತ್ತಿತರರು ಮುಖ್ಯಅತಿಥಿಗಳಾಗಿದ್ದಾರೆ. ಸಮಾರಂಭದಲ್ಲಿ ಭಜನಾ ಸಾಧಕರನ್ನು ಸನ್ಮಾನಿಸಲಾಗುವುದು ಎಂದರು.

ಭಜನೋತ್ಸವ ಸಮಿತಿ ಅಧ್ಯಕ್ಷ ಡಾ.ರವಿ ಕಕ್ಕೆಪದವು, ಗೌರವಾಧ್ಯಕ್ಷ ಗಿರಿಧರ ಸ್ಕಂಧ, ಉಪಾಧ್ಯಕ್ಷ ಗಿರೀಶ್ ಆಚಾರ್ಯ ಪೈಲಾಜೆ, ಚಂದ್ರಶೇಖರ ಬಸವನಮೂಲೆ, ಕಾರ್ಯದರ್ಶಿ ಬಾಲಕೃಷ್ಣ ಗೌಡ.ಕೆ, ಜತೆ ಕಾರ್ಯದರ್ಶಿ ಸತೀಶ್.ಟಿ.ಎನ್, ಪ್ರಚಾರ ಸಮಿತಿ ಸಂಚಾಲಕ ರತ್ನಾಕರ ಸುಬ್ರಹ್ಮಣ್ಯ, ಮೆರವಣಿಗೆ ಸಮಿತಿ ಸಂಚಾಲಕ ಸಂತೋಷ್ ಕುಲ್ಕುಂದ, ಸುಬ್ರಹ್ಮಣ್ಯ ವಲಯ ಭಜನಾ ಪರಿಷತ್ ಅಧ್ಯಕ್ಷ ಚಂದ್ರಶೇಖರ ಕೊಂಡಾಲ, ಸೇವಾಪ್ರತಿನಿಧಿಗಳಾದ ಹರಿಣಾಕ್ಷಿ ಮಾಣಿಬೈಲು, ಸೈಲಜಾ ಕುಲ್ಕುಂದ ಉಪಸ್ಥಿತರಿದ್ದರು.