-ಶೇಷಮೂರ್ತಿ ಅವಧಾನಿ

ಕಲಬುರಗಿ : ಇಲ್ಲಿನ ಕೇಂದ್ರ ಕಾರಾಗೃಹದಿಂದ ಬೀದರ್‌ ಮೂಲದ ಮೂವರು ಸಜಾ ಕೈದಿಗಳು ತಮ್ಮ ಬನಿಯನ್‌, ಜಮಖಾನಾವನ್ನೇ ಬಳಸಿ ಹಗ್ಗ ಹೊಸೆದು ಪರಾರಿ ಆಗಿರುವುದು ಕಲಬುರಗಿ ಕಾರಾಗೃಹದ ಭದ್ರತಾ ಸಿಬ್ಬಂದಿಯ ಕಾರ್ಯ ವೈಖರಿಯನ್ನೇ ಪ್ರಶ್ನಿಸುವಂತಾಗಿದೆ. ಮಂಗಳವಾರ ಮುಂಜಾನೆ 4.35ರ ಸುಮಾರಿಗೆ ಕಾರಾಗೃಹದಿಂದ ಮೂವರು ಕೈದಿಗಳು ಪರಾರಿ ಆಗಿರುವ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗಿದೆ. ಇಲ್ಲಿನ ಕೇಂದ್ರ ಕಾರಾಗೃಹದಿಂದ ಗೋಡೆಗಳನ್ನು ಹಾರಿ ಮಂಗಳವಾರ ಬೆಳಗ್ಗೆ 4.35ರ ಹೊತ್ತಿಗೆ ಬೀದರ್‌ ಜಿಲ್ಲೆಯ ಬಸವ ಕಲ್ಯಾಣ ತಾಲೂಕಿನ ಇಸ್ಲಾಂಪುರದ ಮಸ್ತಾನ್, ಔರಾದ್ ತಾಲೂಕಿನ ಸಂತಾಪುರ ಗ್ರಾಮದ ಸಂತೋಷ ಬಸಪ್ಪ ಹಾಗೂ ಬೀದರ್‌ ತಾಲೂಕಿನ ಬಕ್ಕಚೌಡಿ ಗ್ರಾಮದ ಸಾಗರ ಭೀಮರಾಯ ಪರಾರಿಯಾಗಿದ್ದರು.

ಎಸ್ಕೇಪ್‌ ಕಹಾನಿ:

ಕಲಬುರಗಿ ಜೈಲಲ್ಲಿ ದುರಸ್ತಿ ಕಾರ್ಯ ನಡೆಯುತ್ತಿತ್ತು. ಇದಕ್ಕಾಗಿ ಗೋಡೆಗೆ ಏಣಿ ಇಡಲಾಗಿತ್ತು. ಇದನ್ನಲ್ಲಾ ಗಮನಿಸಿದ್ದ ಮೂವರು ಕೈದಿಗಳು ಅಲ್ಲಿಂದ ಪರಾರಿ ಆಗಲು ಮಾಸ್ಟರ್‌ ಪ್ಲ್ಯಾನ್‌ ಮಾಡಿದ್ದಾರೆ. ಅದಕ್ಕಾಗಿ ತಮ್ಮ ಬನಿಯನ್‌, ಹಾಸು- ಹೊದಿಕೆ ಬಳಸಿ ಹಗ್ಗ ಹೊಸೆದಿದ್ದಾರೆ.


ಜೈಲಿನೊಳಗಿನ 20 ಅಡಿ ಎತ್ತರದ ಗೋಡೆಗೆ ಏಣಿ ಇಡಲಾಗಿತ್ತು. ಇದನ್ನೇ ಅವಕಾಶವಾಗಿ ಬಳಸಿಕೊಂಡಿರುವ ಮೂವರು ಕೈದಿಗಳು ಅದರ ಮೇಲೇರಿ ತಾವು ಹೆಣೆದಿರುವ ಹಗ್ಗವನ್ನು ಕಂಬಕ್ಕೆ ಕಟ್ಟಿದ್ದಾರೆ. ಹಗ್ಗದ ಸಹಾಯದಿಂದ ಸಂತೋಷ್ ಮತ್ತು ಸಾಗರ ಗೋಡೆ ಮೇಲೇರಿ ಅಲ್ಲಿಂದ ಹಾರಿದ್ದಾರೆ. ಇನ್ನೊಬ್ಬ ಕೈದಿ ಮಸ್ತಾನ್‌ ಹಾರುವಾಗ ಆಯತಪ್ಪಿ ಬಿದ್ದಿದ್ದಾನೆ. ಆಗ ಆತನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸದ್ದಾಗಿದ್ದರಿಂದ ತಕ್ಷಣವೇ ಕೆಐಎಸ್‌ಎಫ್‌ ಕಾವಲು ಸಿಬ್ಬಂದಿ ಎದ್ದು ಬ್ಯಾಟರಿ ಬೆಳಕು ಹಾಕಿ ನೋಡಿದ್ದರೂ ಯಾರೂ ಕಂಡಿಲ್ಲ. ಭದ್ರತಾ ಸಿಬ್ಬಂದಿ ಅಲ್ಲಿಂದ ಹೋಗಿರುವುದು ಖಾತರಿಯಾದ ನಂತರ ಮುಸ್ತಾನ್‌ ಏಣಿ ಏರಿ, ಹಗ್ಗ ಹಿಡಿದು ಗೋಡೆ ಹಾರಿ ಪರಾರಿ ಆಗಿದ್ದಾನೆ. ಹೀಗೆ ಎಸ್ಕೇಪ್‌ ಆದ ಮೂವರು ಹೊರಗಡೆ ಅವರಿಗಾಗಿ ಕಾಯುತ್ತಿದ್ದ ಕಾರನ್ನು ಹತ್ತಿ ಪರಾರಿ ಆಗಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯ ಶಂಕೆ

ಕೈದಿಗಳು ಪರಾರಿಯಾಗಲು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಶಂಕಿಸಲಾಗಿದೆ. ಅಧಿಕಾರಿಗಳು ಏಣಿಯನ್ನು ರಾತ್ರಿ ವೇಳೆಯಾದರೂ ತೆಗೆದಿಡದೆ ನಿರ್ಲಕ್ಷಿಸಿರುವುದು ಅಚ್ಚರಿ ಮೂಡಿಸಿದೆ.