ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶಿರಸಿ ಉಪ ಕಾರಾಗೃಹ (ಸಬ್‌ಜೈಲ್‌) ಕಳೆದ ಮೂರು ವರ್ಷಗಳಿಂದ ಸ್ಥಗಿತಗೊಂಡಿದ್ದು, ಆರೋಪಿತರನ್ನು ಹಳಿಯಾಳ ಹಾಗೂ ಕಾರವಾರ ಜೈಲುಗಳಿಗೆ ಕಳುಹಿಸುವುದು ಅನಿವಾರ್ಯವಾಗಿದ್ದರಿಂದ ಪೊಲೀಸ್‌ ಇಲಾಖೆಯ ಮೇಲೆ ಒತ್ತಡ ಹೆಚ್ಚಾಗಿದೆ.

ಹಳಿಯಾಳ, ಕಾರವಾರ ಜೈಲುಗಳ ಅವಲಂಬನೆ । ಪೊಲೀಸ್‌ ಇಲಾಖೆಯ ಮೇಲೆ ಒತ್ತಡ ಹೆಚ್ಚಳ

ಪ್ರವೀಣ ಹೆಗಡೆ ಕರ್ಜಗಿ

ಕನ್ನಡಪ್ರಭ ವಾರ್ತೆ ಶಿರಸಿ

ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶಿರಸಿ ಉಪ ಕಾರಾಗೃಹ (ಸಬ್‌ಜೈಲ್‌) ಕಳೆದ ಮೂರು ವರ್ಷಗಳಿಂದ ಸ್ಥಗಿತಗೊಂಡಿದ್ದು, ಆರೋಪಿತರನ್ನು ಹಳಿಯಾಳ ಹಾಗೂ ಕಾರವಾರ ಜೈಲುಗಳಿಗೆ ಕಳುಹಿಸುವುದು ಅನಿವಾರ್ಯವಾಗಿದ್ದರಿಂದ ಪೊಲೀಸ್‌ ಇಲಾಖೆಯ ಮೇಲೆ ಒತ್ತಡ ಹೆಚ್ಚಾಗಿದೆ.

ನಗರದ ಸ್ಟೇಟ್‌ ಬ್ಯಾಂಕ್‌ ವೃತ್ತದ ಬಳಿಯ ಹಳೆಯ ತಹಸೀಲ್ದಾರ ಕಚೇರಿ ಆವರಣದಲ್ಲಿ 2014ರಿಂದ ಉಪ ಕಾರಾಗೃಹ ಕಾರ್ಯಾರಂಭಗೊಂಡಿತ್ತು. ಕಳೆದ ಮೂರು ವರ್ಷದ ಹಿಂದೆ ವಿಚಾರಣಾಧೀನ ಇಲ್ಲಿನ ಕೈದಿಗಳನ್ನು ಕಾರವಾರ ಹಾಗೂ ಹಳಿಯಾಳದ ಬಂಧಿಖಾನೆಗೆ ಸ್ಥಳಾಂತರಿಸಿ, ಕಟ್ಟಡ ನೆಲಸಮಗೊಳಿಸಿ, ಇಲ್ಲಿನ ಜಾಗದಲ್ಲಿ ಸರ್ಕಾರಿ ವಿವಿಧ ಇಲಾಖೆಯ ಕಚೇರಿಗಳ ಸಮುಚ್ಛಯ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ಹಳೆಯ ಕಾರಾಗೃಹದಲ್ಲಿ ಸುಮಾರು 40ಕ್ಕೂ ಹೆಚ್ಚು ಆರೋಪಿಗಳನ್ನು ಇಲ್ಲಿ ವಿಚಾರಣೆಗಾಗಿ ಇಡಲಾಗುತ್ತಿತ್ತು. ಇದರಿಂದ ಶಿರಸಿ, ಸಿದ್ದಾಪುರ, ಮುಂಡಗೋಡ, ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಆರೋಪಿತರನ್ನು ಈ ಸಬ್ ಜೈಲಿಗೆ ವರ್ಗಾಯಿಸಲಾಗುತ್ತಿತ್ತು. ಆದರೆ ಈ ನಾಲ್ಕು ತಾಲೂಕಿನವರು ಕಳೆದ ಮೂರು ವರ್ಷಗಳಿಂದ ದೂರದ ಕಾರವಾರ ಕೇಂದ್ರ ಕಾರಾಗೃಹ ಹಾಗೂ ಹಳಿಯಾಳದ ಉಪ ಕಾರಾಗೃಹಕ್ಕೆ ಹೋಗಬೇಕಾಗಿದೆ.

ಒಬ್ಬ ಆರೋಪಿತನನ್ನು ಜೈಲಿಗೆ ಕಳಿಸುವಾಗ ಮೂವರು ಪೊಲೀಸರು ಜತೆಗೆ ಹೋಗಬೇಕಾಗಿದ್ದು, ಇದರಿಂದ ಪೊಲೀಸ್ ಇಲಾಖೆ ಸಿಬ್ಬಂದಿ ಹೊರೆ ಅನುಭವಿಸಬೇಕಾಗಿದೆ. ಅಲ್ಲದೇ, ಜಿಲ್ಲಾ ಕೇಂದ್ರ ಕಾರವಾರ ಹಾಗೂ ಹಳಿಯಾಳಕ್ಕೆ ಸಮಯಕ್ಕೆ ಸರಿಯಾದ ಬಸ್ಸಿನ ವ್ಯವಸ್ಥೆ ಇಲ್ಲದಿರುವುದರಿಂದ ಸಂಕಷ್ಟ ಎದುರಿಸಬೇಕಾಗಿದೆ. ಶಿರಸಿಯ ಕೆಲವು ಸರ್ಕಾರಿ ಇಲಾಖೆಯ ಕಟ್ಟಡಗಳನ್ನು ಪರಿಶೀಲನೆ ನಡೆಸಲಾಗಿದ್ದರೂ, ಯಾವುದೇ ಕಟ್ಟಡಗಳು ಸಬ್ಜೈಲ್ ಗೆ ಉಪಯುಕ್ತವಾಗಿಲ್ಲ. ಈ ಕಾರಣದಿಂದ ಕಾರವಾರ ಹಾಗೂ ಹಳಿಯಾಳದ ಕಾರಾಗೃಹಕ್ಕೆ ಹೋಗುವ ಪರಿಸ್ಥಿತಿಯಿದೆ ಎಂದು ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.

ನ್ಯಾಯವಾದಿ ಹಾಗೂ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಯತ್ನದಿಂದ 2014ರಲ್ಲಿ ಹೈಕೋರ್ಟ್ ರಿಟ್ ಪಿಟಿಶನ್ ಆದೇಶದ ಮೇರೆಗೆ ಶಿರಸಿಯಲ್ಲಿ ಉಪ ಕಾರಾಗೃಹ ಪುನರಾರಂಭವಾಗಿತ್ತು. ಶಿರಸಿಯ ಚಿಪಗಿ ಸರ್ಕಲ್‌ ಬಳಿಯಲ್ಲಿರುವ ತರಬೇತಿ ಕೇಂದ್ರದ ಕಟ್ಟಡವನ್ನು ತಾತ್ಕಾಲಿಕ ಜೈಲಿಗೆ ಬಳಕೆಗೆ ಪ್ರಸ್ತಾವನೆ ಸಲ್ಲಿಸಿದರೂ ಅದು ತಿರಸ್ಕಾರಗೊಂಡಿರುವ ಕಾರಣ ಪೊಲೀಸರಿಗೆ ಇನ್ನಷ್ಟು ತಲೆನೋವಾಗಿದೆ. ಶಿರಸಿಯಲ್ಲಿ ಆದಷ್ಟು ಶೀಘ್ರವಾಗಿ ಉಪ ಕಾರಾಗೃಹ ಆರಂಭಕ್ಕೆ ಸರ್ಕಾರ ಇಚ್ಛಾಶಕ್ತಿ ವಹಿಸುವುದು ಅನಿವಾರ್ಯ ಎಂಬ ಆಗ್ರಹ ಕೇಳಿ ಬಂದಿದೆ.ಬಜೆಟ್‌ನಲ್ಲಿ ಘೋಷಣೆಯಾಗಲಿ

ಮುಂದಿನ ವರ್ಷಗಳಲ್ಲಿ ಶಿರಸಿ ಜಿಲ್ಲೆಯಾಗುತ್ತದೆ ಎಂಬ ಕಾರಣದಿಂದ ಇಲ್ಲಿ ಕೇಂದ್ರ ಕಾರಾಗೃಹದ ಅವಶ್ಯಕತೆಯಿಂದ ತಾಲೂಕಿನ ಸಿರ್ಸಿಮಕ್ಕಿ ಸಮೀಪದ ಸಹಸ್ರಳ್ಳಿಯಲ್ಲಿ 5.35 ಎಕರೆ ಜಾಗ ಮಂಜೂರುಗೊಂಡಿದ್ದು, ಕಾರಾಗೃಹದ ಕಟ್ಟಡ ನಿರ್ಮಾಣಕ್ಕೆ ಬಂಧಿಖಾನೆ ಇಲಾಖೆಯು 2022ರಲ್ಲಿ ₹10 ಕೋಟಿ ವೆಚ್ಚದಲ್ಲಿ ಸುಮಾರು 125 ಆರೋಪಿಗಳನ್ನು ವಿಚಾರಣೆಗೆ ಇಡಲು ಅನುಕೂಲವಾಗಲು ಲೊಕೋಪಯೋಗಿ ಇಲಾಖೆಯ ಮೂಲಕ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿ, ಹಣಕಾಸು ಇಲಾಖೆಯ ಬಳಿ ಮಂಜೂರಿಗೆ ಕಳುಹಿಸಲಾಗಿದೆ. ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಬೇಕು. ಇಲ್ಲವಾದಲ್ಲಿ ಪ್ರತ್ಯೇಕವಾಗಿ ಶಿರಸಿಯಲ್ಲಿ ಕಾರಾಗೃಹ ನಿರ್ಮಾಣಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಒತ್ತಡ ಹೇರಿದರೆ ಶಿರಸಿಯಲ್ಲಿ ಕಾರಾಗೃಹದ ಕಟ್ಟಡ ನಿರ್ಮಾಣಗೊಳ್ಳಲಿದೆ.