ಮಂಡ್ಯ ತಾಲೂಕು ಗಾಣದಾಳು ಗ್ರಾಪಂ ಆಶಾ ಕಾರ್ಯಕರ್ತೆ ಕೆ.ವಿ.ಜ್ಯೋತಿ ಅವರನ್ನು ನಿಯಮಬಾಹಿರವಾಗಿ ಕೆಲಸದಿಂದ ಅನರ್ಹಗೊಳಿಸಿರುವುದನ್ನು ವಿರೋಧಿಸಿ ಆಶಾ ಕಾರ್ಯಕರ್ತೆಯರು ಜಿಪಂ ಎದುರು ಪ್ರತಿಭಟನೆ.
ಕನ್ನಡಪ್ರಭ ವಾರ್ತೆ ಮಂಡ್ಯ
ನಿಯಮ ಬಾಹಿರವಾಗಿ ಆಶಾ ಕಾರ್ಯಕರ್ತೆಯನ್ನು ಕರ್ತವ್ಯದಿಂದ ಅನರ್ಹಗೊಳಿಸಿರುವುದನ್ನು ರದ್ದುಪಡಿಸಿ, ತಕ್ಷಣವೇ ಮರು ನೇಮಕ ಮಾಡಿಕೊಳ್ಳುವಂತೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ನಗರದಲ್ಲಿ ಪ್ರತಿಭಟನೆ ನಡೆಸಿದರು.ನಗರದ ಜಿಪಂ ಕಚೇರಿ ಎದುರು ಸೇರಿದ ಕಾರ್ಯಕರ್ತರು, ಗಾಣದಾಳು ಗ್ರಾಮ ಪಂಚಾಯ್ತಿಯ ಆಶಾ ಕಾರ್ಯಕರ್ತೆ ಹಾಗೂ ಸಂಘದ ಜಿಲ್ಲಾ ಕಾರ್ಯದರ್ಶಿ ಕೆ.ವಿ.ಜ್ಯೋತಿ ಅವರನ್ನು ನಿಯಮಬಾಹಿರವಾಗಿ ಕೆಲಸದಿಂದ ಅನರ್ಹಗೊಳಿಸಿರುವುದನ್ನು ವಿರೋಧಿಸಿದರು.
ಆಶಾ ಕಾರ್ಯಕರ್ತೆ ಜ್ಯೋತಿ ಅವರು ಆಶಾ ಸಂಘಟನೆಯು ತಾಲೂಕು ವೈದ್ಯಾಧಿಕಾರಿಗಳಿಗೆ ಆಶಾ ಕಾರ್ಯಕರ್ತೆಯರ ಹಲವಾರು ನೈಜ ಕುಂದುಕೊರತೆಗಳನ್ನು ಪ್ರಸ್ತಾಪಿಸಿ ವಿವರವಾದ ಪತ್ರವನ್ನು ಸಲ್ಲಿಸಿದ್ದರು. ರಜೆ ರಹಿತ ಕೆಲಸ ಮಾಡಿಸಬಾರದು. ಜಿಪಿಎಸ್ ಫೋಟೋ ತೆಗೆದು ಹಾಕಲು ಒತ್ತಡ ಹಾಕಬಾರದು. ಪ್ರತಿಯೊಂದಕ್ಕೂ ರಜೆ ಪತ್ರ, ಇನ್ನಿತರೆ ಕಾರಣಗಳಿಗೆ ಪತ್ರ ಕೊಡಲು ಸೂಚಿಸುವುದನ್ನು ನಿಲ್ಲಿಸಬೇಕು. ವೈಯಕ್ತಿಕ ಕೆಲಸಗಳಿಗೆ ಮತ್ತು ಸಮತೋಲನ ಜೀವನಕ್ಕೆ ತುಂಬಾ ಸಮಸ್ಯೆ ಆಗುತ್ತಿದೆ ಎಂದು ಪತ್ರ ಬರೆದಿದ್ದರು. ಈ ಬಗ್ಗೆ ಪಿಎಚ್‌ಸಿ ವೈದ್ಯಾಧಿಕಾರಿ ಡಾ. ಸುದರ್ಶನ್ ಅವರು ಪ್ರತಿಕ್ರಿಯಿಸಿ ಆಶಾಗಳಿಗೆ ರಜೆ ಕೊಟ್ಟು ಸಾಕಾಗಿದೆ ಎಂದರು. ರಜೆ ಕೊಡುವುದಕ್ಕೆ ಆಕ್ಷೇಪಿಸಿದ್ದರು. ಈ ಬಗ್ಗೆ ಜ್ಯೋತಿ ಪ್ರಶ್ನೆ ಮಾಡಿದ್ದನ್ನೇ ಕಾರಣವಾಗಿಟ್ಟುಕೊಂಡು ಒಂದು ವರ್ಷದ ಬಳಿಕ ಅವರನ್ನು ಕರ್ತವ್ಯದಿಂದ ವಿಮುಕ್ತಿಗೊಳಿಸಿದ್ದಾರೆ ಎಂದು ಆರೋಪಿಸಿದರು.ಜ್ಯೋತಿ ಅವರು ಎತ್ತಿರುವ ಪ್ರಶ್ನೆ ಸತ್ಯಾಂಶಗಳ ಪ್ರಕಾರ ಸರಿಯಾಗಿದ್ದರು. ಅಭಿವ್ಯಕ್ತಿ ಶೈಲಿ ಸರಿ ಇರಲಿಲ್ಲ ಎಂದು ದಕ್ಕಾಗಿ ಈಗಾಗಲೇ ಕ್ಷಮೆಯಾಚಿಸಿದ್ದಾರೆ. ಆದರೂ ಅವರ ಅನರ್ಹತೆಗೆ ಮಾಡಲಾಗಿದೆ ಎಂದು ಕಿಡಿಕಾರಿದರು.
ಚಂದಗಾಲು ಪಿಎಚ್‌ಸಿ ವ್ಯಾಪ್ತಿಯ ವಿ.ಸಿ.ಫಾರ್ಮ್ ಗ್ರಾಮದ ಆಶಾ ಕಾರ್ಯಕರ್ತೆಯಾಗಿ ಎಲ್ಲಾ ಹಕ್ಕುಗಳು, ಕರ್ತವ್ಯಗಳು ಮತ್ತು ಪ್ರೋತ್ಸಾಹಧನಗಳೊಂದಿಗೆ ತಕ್ಷಣವೇ ಮರು ನೇಮಕ ಮಾಡಿ ಜ್ಯೋತಿ ಅವರಿಗೆ ಆದೇಶ ನೀಡಬೇಕು ಎಂದು ಆಗ್ರಹಿಸಿದರು. ಮುಖಂಡರಾದ ಎಂ.ಉಮಾದೇವಿ, ಉಗ್ರ ನರಸಿಂಹೇಗೌಡ, ಸಂಧ್ಯಾ ಪಿ.ಎಸ್., ಪ್ರೊ. ಲತಾ, ಎಂ.ಬಿ. ಪುಷ್ಪಾವತಿ, ಪಲ್ಲವಿ, ಜ್ಯೋತಿ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.