ಇಂದಿರಾನಗರದಲ್ಲಿರುವ ಎಸ್ತೆನೋಸ್‌ ಟೆಕ್ನಾಲಾಜಿಸ್‌ ಎಂಬ ಕಂಪನಿಯು ಕ್ವಾಲಿಟಿ ಅನಲಿಸ್ಟ್‌ ಹುದ್ದೆಯ ನೇಮಕಾತಿಯಲ್ಲಿ ಕಡ್ಡಾಯ ತೆಲುಗು, ತಮಿಳು ಭಾಷೆ ಬಲ್ಲವರಿಗೆ ಉದ್ಯೋಗ ಎಂದು ಪ್ರಕಟಿಸಿ ವಿವಾದ ಸೃಷ್ಟಿಸಿದೆ.

ಬೆಂಗಳೂರು: ಇಂದಿರಾನಗರದಲ್ಲಿರುವ ಎಸ್ತೆನೋಸ್‌ ಟೆಕ್ನಾಲಾಜಿಸ್‌ ಎಂಬ ಕಂಪನಿಯು ಕ್ವಾಲಿಟಿ ಅನಲಿಸ್ಟ್‌ ಹುದ್ದೆಯ ನೇಮಕಾತಿಯಲ್ಲಿ ಕಡ್ಡಾಯ ತೆಲುಗು, ತಮಿಳು ಭಾಷೆ ಬಲ್ಲವರಿಗೆ ಉದ್ಯೋಗ ಎಂದು ಪ್ರಕಟಿಸಿ ವಿವಾದ ಸೃಷ್ಟಿಸಿದೆ.

ಕನ್ನಡಿಗರ ಆಕ್ರೋಶಕ್ಕೆ ಗುರಿ

ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕೆಂಬ ವಿವಾದ ಭುಗಿಲೆದ್ದಿರುವಾಗಲೇ, ಇದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದ್ದು, ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದೆ. ಮಂಗಳವಾರ ಮಾಹಿತಿ ತಿಳಿಯುತ್ತಿದ್ದಂತೆ ಯುವ ಕರ್ನಾಟಕ ವೇದಿಕೆ ರಾಜ್ಯಾಧ್ಯಕ್ಷ ರೂಪೇಶ್‌ ರಾಜಣ್ಣ ಅವರ ಮಾರ್ಗದರ್ಶನದಲ್ಲಿ ವೇದಿಕೆಯ ಕಾರ್ಯಕರ್ತರು, ಎಸ್ತೆನೋಸ್‌ ಟೆಕ್ನಾಲಾಜಿ ಎಂಬ ಸಾಫ್ಟ್‌ವೇರ್‌ ಕಂಪನಿಗೆ ಭೇಟಿ ನೀಡಿ ಆಡಳಿತ ಮಂಡಳಿ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು.

ಸ್ಪಷ್ಟನೆ ನೀಡಿರುವ ಕಂಪನಿಯ ಆಡಳಿತ ಮಂಡಳಿ

ಈ ಕುರಿತು ಸ್ಪಷ್ಟನೆ ನೀಡಿರುವ ಕಂಪನಿಯ ಆಡಳಿತ ಮಂಡಳಿ ಪದಾಧಿಕಾರಿಗಳು, ನಮ್ಮ ಕಂಪನಿ ಹಲವು ರಾಜ್ಯಗಳಲ್ಲಿ ಶಾಖೆಗಳನ್ನು ನಡೆಸುತ್ತಿದೆ. ಆದ್ದರಿಂದ ಆಂಧ್ರ ಮತ್ತು ತಮಿಳುನಾಡಿನಲ್ಲಿ ಉದ್ಯೋಗಿಗಳ ಅವಶ್ಯಕತೆ ಇತ್ತು. ಸಾಮಾಜಿಕ ಜಾಲತಾಣದಲ್ಲಿ ಎಂಬಿಎ ಮತ್ತು ಬಿಬಿಎ ಪದವಿ ಪಡೆದ ಅಭ್ಯರ್ಥಿಗಳು ಕ್ವಾಲಿಟಿ ಅನಲಿಸ್ಟ್‌ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಆದರೆ, ನೇಮಕಾತಿಯಲ್ಲಿ ಕಡ್ಡಾಯ ತೆಲುಗು, ತಮಿಳು ಭಾಷೆ ಬಲ್ಲವರಿಗೆ ಉದ್ಯೋಗ ಎಂದು ಪ್ರಕಟಿಸಿತ್ತು. ಇದರಲ್ಲಿ ಯಾವುದೇ ದುರುದ್ದೇಶವಿಲ್ಲ. ಯಾವುದೇ ಕನ್ನಡಿಗರಿಗೆ ಅಪಚಾರ ಮಾಡುವ ಉದ್ದೇಶ ನಮ್ಮ ಕಂಪನಿಗಿಲ್ಲ. ಮುಂದೆಯೂ ಕನ್ನಡಿಗರಿಗೆ ಉದ್ಯೋಗಗಳಲ್ಲಿ ಆದ್ಯತೆ ಕೊಡುತ್ತೇವೆ. ಬೆಂಗಳೂರಿನ ಎಲ್ಲಾ ಕಂಪನಿಗಳು ಕನ್ನಡಿಗರಿಗೆ ಉದ್ಯೋಗ ಕೊಡಲಿ ಎಂದು ಹೇಳಿದರು.

ಘಟನೆಗೆ ಸಂಬಂಧಿಸಿ ಯುವ ಕರ್ನಾಟಕ ವೇದಿಕೆ ರಾಜ್ಯಾಧ್ಯಕ್ಷ ರೂಪೇಶ್‌ ರಾಜಣ್ಣ, ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗಬೇಕು ಎಂಬ ನಮ್ಮ ಅಭಿಯಾನಕ್ಕೆ ಇದು ಆರಂಭ ಮಾತ್ರ. ಯಾವುದೇ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಅಥವಾ ಇನ್ನಿತರ ವಿಷಯಗಳಲ್ಲಿ ಅವಮಾನ ಮಾಡಿದರೆ ನಾವು ಸಮ್ಮನಿರಲು ಸಾಧ್ಯವಿಲ್ಲ. ಈ ಕುರಿತು ಕನ್ನಡಿಗರು ಸಾಮಾಜಿಕ ಜಾಲತಾಣಗಳಲ್ಲಿ ದಾಖಲೆ ಸಮೇತ ಮಾಹಿತಿ ನೀಡಿದರೆ ಅವರ ನೆರವಿಗೆ ನಾವು ಸದಾ ಸಿದ್ಧರಿರುತ್ತೇವೆ ಎಂದಿದ್ದಾರೆ.