ಪಿಎಸೈ ಅಕ್ರಮ, ಕೆಪಿಎಸ್ಸಿ ಅಕ್ರಮಗಳ ಪ್ರಕರಣಗಳು ಬೆಳಕಿಗೆ ಬಂದು, ಉದ್ಯೋಕಾಂಕ್ಷಿಗಳು ಮೋಸ ಹೋಗುತ್ತಿರುವ ಬಗ್ಗೆ ಬಹಿರಂಗವಾಗುತ್ತಿದ್ದರೂ ಮಧ್ಯವರ್ತಿಗಳ ಮಾತಿಗೆ ಅನೇಕರ ಈಗಲೂ ವಂಚನೆಗೊಳಗಾಗುತ್ತಿರುವ ಘಟನೆಗಳು ಅಚ್ಚರಿ ಮೂಡಿಸಿವೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಪಿಎಸೈ ಅಕ್ರಮ, ಕೆಪಿಎಸ್ಸಿ ಅಕ್ರಮಗಳ ಪ್ರಕರಣಗಳು ಬೆಳಕಿಗೆ ಬಂದು, ಉದ್ಯೋಕಾಂಕ್ಷಿಗಳು ಮೋಸ ಹೋಗುತ್ತಿರುವ ಬಗ್ಗೆ ಬಹಿರಂಗವಾಗುತ್ತಿದ್ದರೂ ಮಧ್ಯವರ್ತಿಗಳ ಮಾತಿಗೆ ಅನೇಕರ ಈಗಲೂ ವಂಚನೆಗೊಳಗಾಗುತ್ತಿರುವ ಘಟನೆಗಳು ಅಚ್ಚರಿ ಮೂಡಿಸಿವೆ.

ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್ (ಪಿಎಸ್‌ಐ) ಹುದ್ದೆ ಕೊಡಿಸುವುದಾಗಿ ನಂಬಿಸಿ, ₹60 ಲಕ್ಷ ಪಡೆದು ವಂಚಿಸಿರುವ ಆರೋಪದಡಿ ಬೆಂಗಳೂರಿನ 8 ಜನರ ವಿರುದ್ಧ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುರಪುರ ತಾಲೂಕಿನ ತಳ್ಳಳ್ಳಿ (ಬಿ) ಗ್ರಾಮದ ದೇವೇಂದ್ರ ಎಂಬುವವರು ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಈ ಸಂಬಂಧ ಕೆಂಭಾವಿ ಪೊಲೀಸರು ಬೆಂಗಳೂರಿನ ಗಿರೀಶ್, ದೀಪಕ್, ಶಶಾಂಕ್‌ಗೌಡ, ಉತ್ತೇಜ, ಶ್ರೇಯಸ್‌ಗೌಡ, ಆನಂದ್, ಎಂ.ಸಿ. ರಂಗನಾಥ್ ಹಾಗೂ ಸತ್ಯ ಅಲಿಯಾಸ್ ಸತೀಶ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಏನಿದು ಪ್ರಕರಣ ?: ಸುರಪುರ ತಾಲೂಕು ಮೂಲದ ದೇವೇಂದ್ರ ದಿಡ್ಡಿಮನಿ ಬೆಂಗಳೂರಿನಲ್ಲಿ ಮೂರು ವರ್ಷಗಳ ಹಿಂದೆ ಕಾರು ಚಾಲನೆ ಮಾಡುತ್ತಿದ್ದರು. ಈ ವೇಳೆ ದೇವೇಂದ್ರಗೆ ನೆಲಮಂಗಲ ಸಮೀಪದ ದೊಡ್ಡಬಿದರಕಲ್‌ನ ಗಿರೀಶ ಎಂಬಾತ ಪರಿಚಯವಾಗಿದ್ದ. ದೇವೇಂದ್ರನ ಅಣ್ಣನ ಪತ್ನಿ ಪಿಎಸ್‌ಐ ನೇಮಕಾತಿಗೆ ತಯಾರಿ ನಡೆಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಗಿರೀಶ್‌, ತನಗೆ ಪ್ರಭಾವಿಗಳ ಸಂಪರ್ಕವಿದ್ದು, ಪಿಎಸೈ ಹುದ್ದೆ ಕೊಡಿಸುವುದಾಗಿ ಭರವಸೆ ನೀಡಿದ್ದ.

ಬಳಿಕ, ಸರ್ಕಾರಿ ನೌಕರಿಗಳ ಕೊಡಿಸುವ ಪ್ರಭಾವವುಳ್ಳವರು ಎಂಬ ನೆಪದಲ್ಲಿ ದೀಪಕ್, ಶಶಾಂಕ್‌ಗೌಡ, ಉತ್ತೇಜ, ಶ್ರೇಯಸ್‌ಗೌಡ ಹಾಗೂ ಆನಂದ್ ಸಹಿತ ಕೆಲವರನ್ನು ದೇವೇಂದ್ರಗೆ ಪರಿಚಯಿಸಿದ್ದ ಗಿರೀಶ್‌ ಆರಂಭದಲ್ಲಿ ₹1 ಕೋಟಿಗೆ ಬೇಡಿಕೆ ಇಟ್ಟಿದ್ದ. ಇದಾದ ನಂತರ, ದೇವೇಂದ್ರ ಏ.7 ರಂದು ಅರಸಿನಕುಂಟೆಯ ಕೊಠಡಿಯೊಂದರಲ್ಲಿ ಗಿರೀಶ್ ಮತ್ತು ದೀಪಕ್‌ಗೆ ₹20 ಲಕ್ಷ ನಗದು ನೀಡಿದ್ದಾರೆ. ಬಳಿಕ ಲಕ್ಷ್ಮೀ ವೆಂಕಟೇಶ್ವರ ಎಂಟರ್‌ಪ್ರೈಸಸ್, ಉತ್ತೇಜ ಹಾಗೂ ಎಂ.ಸಿ. ರಂಗನಾಥ್ ಅವರ ಖಾತೆಗಳಿಗೆ ವಿವಿಧ ಹಂತಗಳಲ್ಲಿ ₹40 ಲಕ್ಷ ವರ್ಗಾವಣೆ ಮಾಡಿದ್ದಾರೆ. ಒಟ್ಟು ₹60 ಲಕ್ಷ ನೀಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಸಾಲ, ಆಸ್ತಿ ಮಾರಾಟ ಮಾಡಿ ಹಣ: ಪಿಎಸ್‌ಐ ಹುದ್ದೆ ಸಿಗಲಿದೆ ಎಂಬ ಆಸೆಯಿಂದ ದೇವೇಂದ್ರ ಮನೆ ಮೇಲೆ ಸಾಲ ಮಾಡಿ ಹೊಲ ಮಾರಾಟ ಮಾಡಿ, ಸಂಬಂಧಿಕರಿಂದ ಸಾಲ ಪಡೆದು ಹಣ ಹೊಂದಿಸಿದ್ದಾಗಿ ತಿಳಿಸಿದ್ದಾರೆ. ನೇಮಕಾತಿ ಆಗದಿದ್ದಾಗ ಹಣ ವಾಪಸ್ ಕೇಳಿದರೂ ಆರೋಪಿಗಳು ಸ್ಪಂದಿಸಿಲ್ಲ. ಹುದ್ದೆಯೂ ಇಲ್ಲ, ಹಣವೂ ಇಲ್ಲದಂತಾಗಿ ದೇವೇಂದ್ರ ಪೊಲೀಸರ ಮೊರೆ ಹೋಗಿದ್ದಾರೆ. ಪೊಲೀಸರು ಹಣ ವರ್ಗಾವಣೆ, ಆರೋಪಿಗಳ ಸಂಪರ್ಕ ಜಾಲದ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

ಸರ್ಕಾರಿ ಹುದ್ದೆಯಲ್ಲಿ ವಂಚಿಸುವ ಅನೇಕ ಪ್ರಕರಣಗಳು ಬೆಳಕಿಗೆ ಬರುತ್ತಿದ್ದರೂ, ಈಗಲೂ ಆಕಾಂಕ್ಷಿಗಳ ಮಧ್ಯವರ್ತಿಗಳ ಮೂಲಕ ಮೋಸ ಹೋಗುತ್ತಿರುವುದು ವಿಪರ್ಯಾಸ. ಈ ಪ್ರಕರಣದ ಬಗ್ಗೆ ಎಫ್‌ಐಆರ್‌ ದಾಖಲಿಸಿ ಸಂಬಂಧಿತ ಠಾಣೆಗೆ ಕಳುಹಿಸಲಾಗಿದೆ. ಜತೆಗೆ ಸ್ಥಳೀಯವಾಗಿಯೂ ತನಿಖೆ ಕೈಗೊಂಡಿದ್ದೇವೆ ಎಂದು ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ್‌ ಹೇಳಿದರು.