ಸ್ವರಸಾಮ್ರಾಜ್ಞೆ ಎಸ್.ಜಾನಕಿ ಅವರನ್ನು ಚಿತ್ರರಂಗದವರು ಜಾನಕಿಯಮ್ಮ ಎಂದೇ ಕರೆದು ಗೌರವಿಸುತ್ತಿದ್ದರು. ಜಗತ್ತಿನಲ್ಲಿಯೇ ವಿಭಿನ್ನ ಧ್ವನಿಗಳಲ್ಲಿ ಹಾಡುವ ಅದ್ಭುತ ಗಾಯಕಿ ಜಾನಕಿಯಮ್ಮ ಸ್ವರಮಾಂತ್ರಿಕ ಸರಸ್ವತಿಯಾಗಿದ್ದರು. ಮಗುವಿನ ಧ್ವನಿ, ಯುವತಿ, ವೃದ್ದೆ ಧ್ವನಿಗಳಲ್ಲಿ ಹಾಡುಗಳನ್ನು ಹಾಡಿದ ಏಕೈಕ ಹಿನ್ನಲೆಗಾಯಕಿಯಾಗಿದ್ದರು.

ಕನ್ನಡಪ್ರಭ ವಾರ್ತೆ ಮಂಡ್ಯ

ದಕ್ಷಿಣ ಭಾರತದ ಗಾನ ಕೋಗಿಲೆ ಎಸ್.ಜಾನಕಿ ಅವರ ಅಗಲಿಕೆ ಸಿನಿಮಾ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಸೌತ್ ಮಲ್ಟಿಪಲ್‌ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಹೇಳಿದರು.

ನಗರದಲ್ಲಿರುವ ಗಾಂಧಿಭವನದಲ್ಲಿ ಪ್ರತಿಭಾಂಜಲಿ ಸುಮಗ ಸಂಗೀತ ಅಕಾಡೆಮಿ, ಕೃಷಿಕ ಅಲಯನ್ಸ್ ಸಂಸ್ಥೆ, ಮಹಾತ್ಮಗಾಂಧಿ ಸ್ಮಾರಕ ಟ್ರಸ್ಟ್ ಆಯೋಜಿಸಿದ್ದ ಪ್ರಖ್ಯಾತ ಹಿನ್ನಲೆಗಾಯಕಿ ಎಸ್.ಜಾನಕಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಮತ್ತು ನುಡಿ-ಪುಷ್ಪ-ಗೀತನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸ್ವರಸಾಮ್ರಾಜ್ಞೆ ಎಸ್.ಜಾನಕಿ ಅವರನ್ನು ಚಿತ್ರರಂಗದವರು ಜಾನಕಿಯಮ್ಮ ಎಂದೇ ಕರೆದು ಗೌರವಿಸುತ್ತಿದ್ದರು. ಜಗತ್ತಿನಲ್ಲಿಯೇ ವಿಭಿನ್ನ ಧ್ವನಿಗಳಲ್ಲಿ ಹಾಡುವ ಅದ್ಭುತ ಗಾಯಕಿ ಜಾನಕಿಯಮ್ಮ ಸ್ವರಮಾಂತ್ರಿಕ ಸರಸ್ವತಿಯಾಗಿದ್ದರು. ಮಗುವಿನ ಧ್ವನಿ, ಯುವತಿ, ವೃದ್ದೆ ಧ್ವನಿಗಳಲ್ಲಿ ಹಾಡುಗಳನ್ನು ಹಾಡಿದ ಏಕೈಕ ಹಿನ್ನಲೆಗಾಯಕಿಯಾಗಿದ್ದರು ಎಂದು ನುಡಿದರು.

ಗಾಯಕಿ ಎಸ್.ಜಾನಕಿಯರವರು ೨೦ ಭಾಷೆಗಳಲ್ಲಿ ಸುಮಾರು ೪೮ ಸಾವಿರ ಹಾಡುಗಳನ್ನು ಹಾಡಿರುವ ಏಕೈಕ ಗಾಯಕಿಯಾಗಿದ್ದಾರೆ. ೪ ರಾಷ್ಟ್ರೀಯ ಪ್ರಶಸ್ತಿಗಳು ಮತ್ತು ೩೦ಕ್ಕೂ ಹೆಚ್ಚು ರಾಜ್ಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಸಿನಿಮಾ ಸಾಹಿತ್ಯಕ್ಕೆ ಜೀವ ತುಂಬಿದ ಸ್ವರಸಾಮಾಜ್ಞೆ ಮಾದರಿ ಸರಳ ಜೀವನ ನಡೆಸಿದರು ಎಂದು ಸ್ಮರಿಸಿದರು.

ಪ್ರತಿಭಾಂಜಲಿ ಸುಮಗಸಂಗೀತ ಅಕಾಡೆಮಿ ಅಧ್ಯಕ್ಷ ಪ್ರೊ.ಡೇವಿಡ್ ಪ್ರತಿಭಾಂಜಲಿ, ಸಾಹಿತ್ಯ-ಸಂಗೀತ ಕ್ಷೇತ್ರ ಇರುವ ತನಕ ಎಸ್.ಜಾನಕಿಯಮ್ಮ ಅವರು ಜೀವಂತ, ಮರೆತೇನಂದರೂ ಮರೆಯಲಾಗದು, ಸಂಗೀತ ಕ್ಷೇತ್ರವನ್ನು ಉತ್ತುಂಗಕ್ಕೇರಿಸಿದ ಸ್ವರಮಾಂತ್ರಿಕೆ ಎಂದು ನುಡಿದರು.

ಭಾರತೀಯ ಚಿತ್ರರಂಗದ ಅಪ್ರತಿಮ ಗಾನ ಕೋಗಿಲೆ ಎಸ್. ಜಾನಕಿ ಅವರಿಗೆ ಸಂಗೀತವೇ ಉಸಿರಾಗಿತ್ತು. ಇವರ ವಿಭಿನ್ನ ಧ್ವನಿಯ ಹಾಡುಗಳು ಕೇಳಲು ಮಧರವಾಗಿವೆ, ತಲೆದೂಗದ ಸಹೃದಯಿ ಇರಲಾರ, ಇಂದಿನ ಗಾಯಕರಿಗೆ ಮಾರ್ಗದರ್ಶನ ನೀಡುತ್ತಿದ್ದರು ಎಂದು ಸ್ಮರಿಸಿದರು.

ಇದೇ ವೇಳೆ ಪ್ರತಿಭಾಂಜಲಿ ಆಕಾಡೆಮಿ ಗಾಯಕರಾದ ಹಂಸಾ, ವಿಶ್ವಾಸ್, ಡೇವಿಡ್ ಪ್ರತಿಭಾಂಜಲಿ ಇವರು ಎಸ್.ಜಾನಕಮ್ಮ ಅವರ ಹಾಡುಗಳನ್ನು ಹಾಡಿದರು.

ಕಾರ್ಯಕ್ರಮದಲ್ಲಿ ಮಹಾತ್ಮಗಾಂಧಿ ಸ್ಮಾರಕ ಟ್ರಸ್ಟ್ನ ಲಿಂಗಣ್ಣಬಧುಕಾರ್, ಅಲಯನ್ಸ್ ಸಂಸ್ಥೆ ೧ನೇ ಜಿಲ್ಲಾ ರಾಜ್ಯಪಾಲ ಚಂದ್ರಶೇಖರ್, ಕಾರ್ಯದರ್ಶಿ ಧನಂಜಯ್‌ದರಸಗುಪ್ಪೆ, ಉದಯಶಂಕರ್, ಬಸವರಾಜು, ಡಿ.ಸಣ್ಣಯ್ಯ, ಪುಟ್ಟಸ್ವಾಮಿ, ಕಿಶೋರ್, ಮಹಾದೇವಯ್ಯ, ಮಂಜುಳಾ, ಲಕ್ಷ್ಮೀ ಮತ್ತಿತರರಿದ್ದರು.