ಜೆಡಿಎಸ್ ಬಣ ರಾಜಕೀಯದ ಪ್ರತಿಷ್ಠೆಗೆ ಸಿಲುಕಿದ್ದ ಸಾರಂಗಿ ಸೊಸೈಟಿ ಮಾಜಿ ಸಚಿವ ಬಿಜೆಪಿಯ ಕೆ.ಸಿ.ನಾರಾಯಣಗೌಡ ಮತ್ತು ಡಾಲು ರವಿ ಅವರ ಸ್ವಗ್ರಾಮ ಕೈಗೋನಹಳ್ಳಿ ವ್ಯಾಪ್ತಿಗೆ ಸೇರಿದ್ದು ಸಂಘವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಮಾಜಿ ಸಚಿವರು, ಮನ್ಮುಲ್ ನಿರ್ದೇಶಕರೊಂದಿಗೆ ಒಗ್ಗೂಡಿದ್ದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಸಾರಂಗಿ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಶಾಸಕ ಎಚ್.ಟಿ.ಮಂಜು ಬೆಂಬಲಿತ ಜೆಡಿಎಸ್‌ನ 9 ಅಭ್ಯರ್ಥಿಗಳು ಜಯಗಳಿಸುವ ಮೂಲಕ ಅಧಿಕಾರ ಹಿಡಿದಿದ್ದಾರೆ.

ಸಂಘದ ೧೨ ಸ್ಥಾನಗಳಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಒಂದು ಸ್ಥಾನಕ್ಕೆ ಶಾಸಕ ಎಚ್.ಟಿ.ಮಂಜು ಬೆಂಬಲಿತ ಮಂಜುಳಾ ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಶಾಸಕರ ಬಣದ ದುಗ್ಗನಹಳ್ಳಿ ನಾಗೇಶ್, ದನೇಶ್, ಶ್ಯಾರಹಳ್ಳಿ ಎಸ್.ಕೆ.ಗಂಗಾಧರ್, ಕೈಗೋನಹಳ್ಳಿ ಕೆ.ಕೆ.ನಂಜೇಗೌಡ, ಸುಕನ್ಯಾ ಪುಟ್ಟೇಗೌಡ, ನಾಗರಾಜೇಗೌಡ, ಸಾರಂಗಿ ಗಂಗಾಧರ್, ಚಿಕ್ಕಯ್ಯ ಜಯಗಳಿಸಿದ್ದಾರೆ.

ಉಳಿದಂತೆ ಮನ್ಮುಲ್ ನಿರ್ದೇಶಕ ಡಾಲು ರವಿ ಬಣದಿಂದ ಜಾಗಿನಕೆರೆ ಅಶೋಕ್, ವಿಶ್ವನಾಥ್, ಸಿ.ಎನ್.ಪುಷ್ಪ ಮಂಜೇಗೌಡ ಆಯ್ಕೆಯಾಗಿದ್ದಾರೆ.

ಜೆಡಿಎಸ್ ಬಣ ರಾಜಕೀಯದ ಪ್ರತಿಷ್ಠೆಗೆ ಸಿಲುಕಿದ್ದ ಸಾರಂಗಿ ಸೊಸೈಟಿ ಮಾಜಿ ಸಚಿವ ಬಿಜೆಪಿಯ ಕೆ.ಸಿ.ನಾರಾಯಣಗೌಡ ಮತ್ತು ಡಾಲು ರವಿ ಅವರ ಸ್ವಗ್ರಾಮ ಕೈಗೋನಹಳ್ಳಿ ವ್ಯಾಪ್ತಿಗೆ ಸೇರಿದ್ದು ಸಂಘವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಮಾಜಿ ಸಚಿವರು, ಮನ್ಮುಲ್ ನಿರ್ದೇಶಕರೊಂದಿಗೆ ಒಗ್ಗೂಡಿದ್ದರು.

ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಪುತ್ರ ಸಚಿನ್ ಕೂಡ ಶಾಸಕ ಎಚ್.ಟಿ.ಮಂಜು ಪಡೆ ವಿರುದ್ಧ ಸಂಘದ ಚುನಾವಣೆಯಲ್ಲಿ ಕೈಯಾಡಿಸಿದ್ದರಿಂದ ಚುನಾವಣೆ ಫಲಿತಾಂಶ ತಾಲೂಕಿನಾದ್ಯಂತ ಕುತೂಹಲ ಕೆರಳಿಸಿತ್ತು.

ಕಾಂಗ್ರಸ್ಸಿಗರಾಗಿದ್ದ ಡಾಲು ರವಿ ಕಳೆದ ವಿಧಾನಸಭಾ ಚುನಾವಣೆ ವೇಳೆ ಜೆಡಿಎಸ್ ಸೇರ್ಪಡೆಯಾಗಿ ಶಾಸಕ ಎಚ್.ಟಿ.ಮಂಜು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆ ನಂತರ ನಡೆದ ಮನ್ಮುಲ್ ಚುನಾವಣೆ ವೇಳೆ ಶಾಸಕರ ವಿರುದ್ಧ ಸಿಡಿದೆದ್ದ ರವಿ ತಮ್ಮದೇ ಬಣ ರಚಿಸಿಕೊಂಡು ಎಚ್.ಟಿ.ಮಂಜು ವಿರುದ್ಧ ಕ್ಷೇತ್ರದಲ್ಲಿ ಸಮರ ಸಾರಿದ್ದಾರೆ.

ಡಾಲು ರವಿಗೆ ಕಾಂಗ್ರೆಸ್ ಮತ್ತು ಬಿಜೆಪಿಯ ಮಾಜಿ ಸಚಿವ ಕೆ.ಸಿ.ನಾರಾಯಣಗೌಡರ ಬಣದ ಬೆಂಬಲವಿದೆ. ತಾಲೂಕು ಜೆಡಿಎಸ್ ಮಾಜಿ ಅಧ್ಯಕ್ಷ ಎ.ಎನ್.ಜಾನಕೀರಾಂ ಸೇರಿ ಹಲವು ರವಿ ಜೊತೆ ಗುರುತಿಸಿಕೊಂಡಿದ್ದರು. ಜೆಡಿಎಸ್‌ನಲ್ಲಿ ಪರ ವಿರೋಧ ಗುಂಪುಗಳಿದ್ದು, ಚುನಾವಣೆಯಲ್ಲಿ ಎರಡೂ ಬಣಗಳು ಪ್ರತಿಷ್ಠೆ ಪಣಕಿಟ್ಟು ಹೋರಾಟಕ್ಕಿಳಿದಿದ್ದವು.

ಚುನಾವಣೆಯಲ್ಲಿ ವಿಜೇತರಾದ ನಿರ್ದೇಶಕರನ್ನು ಶಾಸಕ ಎಚ್.ಟಿ.ಮಂಜು ಅಭಿನಂದಿಸಿ ಮಾತನಾಡಿ, ಇದು ಕ್ಷೇತ್ರದ ನೈಜ ಜೆಡಿಎಸ್ ಪಕ್ಷದ ಗೆಲವು ಎಂದಿದ್ದಾರೆ. ಇದು ಶಿಸ್ತು ಮತ್ತು ಅಶಿಸ್ತು, ಪಕ್ಷ ನಿಷ್ಠರು ಮತ್ತು ಅಪ್ರಮಾಣಿಕರ ನಡುವೆ ನಡೆದ ಚುನಾವಣೆಯಾಗಿದೆ. ಕ್ಷೇತ್ರದಲ್ಲಿ ಜೆಡಿಎಸ್ ಮತದಾರರು ಎಂದಿಗೂ ಪಕ್ಷ ವಿರೋಧಿ ಬಂಡಾಯಗಾರರನ್ನು ಒಪ್ಪುವುದಿಲ್ಲ ಎನ್ನುವ ಸಂದೇಶವನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ ಎಂದು ತಿಳಿಸಿದರು.