3 ವರ್ಷದಲ್ಲಿ ರಾಜ್ಯದಲ್ಲಿ 3,548 ರೈತರ ಆತ್ಮಹತ್ಯೆ

KannadaprabhaNewsNetwork |  
Published : Aug 31, 2026, 01:45 AM IST
ಕೊಟ್ಟೂರಿನಲ್ಲಿ ನಡೆದ ಕಲ್ಪತರು ಕಲಾ ಟ್ರಸ್ಟ್ ರವರ   5ನೇ  ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಕಳೆದ ಮೂರು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ 3,548 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಳೆದ ಮೂರು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ 3,548 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ 3,014 ಪ್ರಕರಣಗಳು ಸಾಲ ಬಾಧೆಯಿಂದ ಸಂಭವಿಸಿವೆ. ಇನ್ನುಳಿದ 524 ಪ್ರಕರಣಗಳು ಕೈಗಡ ಸಾಲ, ವಾಣಿಜ್ಯ ಸಾಲ, ಹೊಲದ ವ್ಯವಹಾರ ಮುಂತಾದ ಕಾರಣಗಳಿಂದ ಸಂಭ‍ವಿಸಿವೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಇತ್ತೀಚೆಗೆ ನಡೆದ ವಿಧಾನಪರಿಷತ್ ಅಧಿವೇಶನದಲ್ಲಿ ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಅವರು ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿ ಒದಗಿಸಿದ್ದಾರೆ.

ಆದರೆ ವರದಿಯಾದ ಆತ್ಮಹತ್ಯೆ ಪ್ರಕರಣಗಳ ಪೈಕಿ 534 ಪ್ರಕರಣಗಳನ್ನು ಸರ್ಕಾರ ಪರಿಹಾರ ನೀಡದೆ ತಿರಸ್ಕರಿಸಿರುವುದಕ್ಕೆ ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪರಿಷತ್ತಿನಲ್ಲಿ ಕೇಳಿರುವ ಪ್ರಶ್ನೆಗೆ ಸರ್ಕಾರ ನೀಡಿರುವ ಉತ್ತರಕ್ಕೆ ಸಾಮಾಜಿಕ ಜಾಲತಾಣ ಮೂಲಕ ಪ್ರತಿಕ್ರಿಯಿಸಿರುವ ಅವರು, ಕೃಷಿ ಸಾಲದ ಹೊರೆಯಿಂದ ಆತ್ಮಹತ್ಯೆಗೆ ಶರಣರಾದ ರೈತರ ಕುಟುಂಬದ ವಾರಸುದಾರರಿಗೆ ಐದು ಲಕ್ಷ ರು.ಗಳ ಮೊತ್ತ ಪರಿಹಾರವಾಗಿ ನೀಡುವ ಆದೇಶವಿದ್ದರೂ ಅನ್ನದಾತರ ಸಾವಿನಲ್ಲೂ ಸಂವೇದನಾಹೀನತೆ, ಪರಿಹಾರ ನೀಡಲೂ ಮೀನಾಮೇಷ ಇದೆ. ಇದೇನಾ ಕಾಂಗ್ರೆಸ್ ಸರ್ಕಾರದ ರೈತಪರ ಆಡಳಿತ ಎಂದು ಅವರು ಪ್ರಶ್ನಿಸಿದ್ದಾರೆ.

165 ರೈತರಿಗೆ ಪರಿಹಾರ ನೀಡಿಲ್ಲ:

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರೈತರ ಬದುಕು ಅಯೋಮಯವಾಗಿದೆ. 2023-24 ರಿಂದ 2025-26 ರವರೆಗೆ ರಾಜ್ಯದಲ್ಲಿ ಒಟ್ಟು 3,548 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಕರುಳು ಹಿಂಡುವ ಸಂಗತಿ. ಆದರೆ, ಕಷ್ಟದಲ್ಲಿದ್ದ ರೈತ ಕುಟುಂಬಗಳಿಗೆ ನೆರವಾಗಬೇಕಿದ್ದ ಕಾಂಗ್ರೆಸ್ ಸರ್ಕಾರದ ಸಂವೇದನಾಹೀನತೆಗೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ. ಅರ್ಹವೆಂದು ಪರಿಗಣಿಸಿರುವ 3,014 ಪ್ರಕರಣಗಳ ಪೈಕಿ 165 ರೈತ ಕುಟುಂಬಗಳಿಗೆ ಇಂದಿಗೂ ಪರಿಹಾರ ದೊರೆತಿಲ್ಲ. 2023 ರಿಂದಲೂ ಒಂದಿಲ್ಲೊಂದು ನೆಪ ಹೇಳುತ್ತಾ, ಮೃತಪಟ್ಟ ರೈತರ ಕುಟುಂಬಗಳಿಗೆ ಪರಿಹಾರ ನೀಡದೆ ಅಲೆದಾಡಿಸುತ್ತಿರುವುದು ಕಾಂಗ್ರೆಸ್ ಸರ್ಕಾರದ ದಯನೀಯ ಆಡಳಿತಕ್ಕೆ ಕನ್ನಡಿ ಹಿಡಿದಂತಾಗಿದೆ.

2023-24ರಲ್ಲಿ 1,088 ಅರ್ಹ ಪ್ರಕರಣಗಳಲ್ಲಿ 8 ಪ್ರಕರಣ, 2024-25: 1,041 ಅರ್ಹ ಪ್ರಕರಣಗಳಲ್ಲಿ 55 ಪ್ರಕರಣ ಹಾಗೂ 2025-26ರಲ್ಲಿ 885 ಅರ್ಹ ಪ್ರಕರಣಗಳಲ್ಲಿ 102 ಪ್ರಕರಣಗಳಲ್ಲಿ ರೈತ ಕುಟುಂಬಗಳಿಗೆ ಇಲ್ಲಿವರೆಗೆ ಪರಿಹಾರ ದೊರೆತಿಲ್ಲ ಎಂದು ಅವರು ತಿಳಿಸಿದ್ದಾರೆ.

ಪಿಎಂ ಕಿಸಾನ್ ಯೋಜನೆಯಡಿ ಅನ್ನದಾತರಿಗೆ ರಾಜ್ಯ ಸರ್ಕಾರದಿಂದ ನೀಡಲಾಗುತ್ತಿದ್ದ ಹೆಚ್ಚುವರಿ ನಾಲ್ಕು ಸಾವಿರ ನೆರವನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ವರ್ಷದಿಂದಲೇ ಏಕಾಏಕಿ ಸ್ಥಗಿತಗೊಳಿಸುವ ಮೂಲಕ, ರೈತರ ಆರ್ಥಿಕ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿತ್ತು. ಅನ್ನದಾತರ ಬೆವರಿನ ಮೇಲೆ ಬದುಕುವ ಸರ್ಕಾರ, ಅವರ ಸಂಕಷ್ಟದ ಸಂದರ್ಭದಲ್ಲಿ ಬೆನ್ನಿಗೆ ನಿಲ್ಲಬೇಕೇ ಹೊರತು, ಅವರ ಕುಟುಂಬಗಳನ್ನು ಪರಿಹಾರಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡಿಸಬಾರದು ಎಂದು ಹೇಳಿದ್ದಾರೆ.

ರೈತರ ಸಾವಿನಲ್ಲೂ ರಾಜಕೀಯ ಹುಡುಕುವ, ಪರಿಹಾರ ನೀಡಲು ಮೀನಾಮೇಷ ಎಣಿಸುವ ಈ ಜನವಿರೋಧಿ, ರೈತವಿರೋಧಿ ಕಾಂಗ್ರೆಸ್ ಸರ್ಕಾರದ ಧೋರಣೆ ಖಂಡಿಸಿರುವ ಛಲವಾದಿ ನಾರಾಯಣಸ್ವಾಮಿ, ಬಾಕಿ ಇರುವ ಎಲ್ಲ ಅರ್ಹ ರೈತ ಆತ್ಮಹತ್ಯೆ ಪ್ರಕರಣಗಳಿಗೆ ತಕ್ಷಣ ಪರಿಹಾರ ಬಿಡುಗಡೆ ಮಾಡಿ, ಮೃತ ರೈತರ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಕ್ರೀಡಾಸಕ್ತಿ ಬೆಳೆಸಬೇಕು: ಚಲುವರಾಯಸ್ವಾಮಿ
ಯುವಕರೇ, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮುಂದಾಗಿ: ಶಂಕರಲಿಂಗೇಗೌಡ