ಜೆನ್‌-ಝೀ, ಯೂಟ್ಯೂಬರ್ಸ್‌ ಜೊತೆ ಎಚ್ಡಿಕೆ ಸಂವಾದ

KannadaprabhaNewsNetwork |  
Published : Aug 31, 2026, 01:45 AM IST
HDK | Kannada Prabha

ಸಾರಾಂಶ

ರಾಜ್ಯದ ಹಿತದೃಷ್ಟಿಯಿಂದ ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಭಾನುವಾರ ಜೆನ್‌-ಝೀಗಳು, ಯೂಟ್ಯೂಬರ್‌ಗಳು, ಸಾಮಾಜಿಕ ಮಾಧ್ಯಮದ ಪ್ರಭಾವಿಗಳು, ವಕೀಲರು ಮತ್ತು ನಾಗರಿಕರೊಂದಿಗೆ ಮುಕ್ತ ಸಂವಾದ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದ ಹಿತದೃಷ್ಟಿಯಿಂದ ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಭಾನುವಾರ ಜೆನ್‌-ಝೀಗಳು, ಯೂಟ್ಯೂಬರ್‌ಗಳು, ಸಾಮಾಜಿಕ ಮಾಧ್ಯಮದ ಪ್ರಭಾವಿಗಳು, ವಕೀಲರು ಮತ್ತು ನಾಗರಿಕರೊಂದಿಗೆ ಮುಕ್ತ ಸಂವಾದ ನಡೆಸಿದರು.

ಅತಿ ಮುಖ್ಯವಾಗಿ ಅಕ್ರಮಗಳ ಆಗರವಾಗಿರುವ ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ (ಬಿಎಂಐಸಿ) ಅಥವಾ ನೈಸ್ ಯೋಜನೆ, ಬಿಡದಿ ಟೌನ್‌ಶಿಪ್ ಯೋಜನೆ ನೆಪದಲ್ಲಿ ರೈತರ ಭೂಮಿ ಲೂಟಿ ಹಾಗೂ ಕೆಪಿಎಸ್‌ಸಿ ಕರ್ಮಕಾಂಡದ ಬಗ್ಗೆ ಈ ಸಂವಾದ ಕೇಂದ್ರೀಕೃತವಾಗಿತ್ತು.

ಈ ಸಂದರ್ಭದಲ್ಲಿ ಇವರೆಲ್ಲರೂ ಕೇಳಿದ ಪ್ರಶ್ನೆಗಳಿಗೆ ವಿವರವಾಗಿ, ಸಮಗ್ರವಾಗಿ ದಾಖಲೆಗಳ ಸಮೇತ ಉತ್ತರ ಮತ್ತು ವಿವರಣೆ ನೀಡಿದ ಕುಮಾರಸ್ವಾಮಿ, ಸಮೃದ್ಧವಾದ ಕರ್ನಾಟಕವನ್ನು ಕೊಳ್ಳೆ ಹೊಡೆಯುವ ದೊಡ್ಡ ಹುನ್ನಾರವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ನಡೆಸುತ್ತಿದೆ. ಯೋಜನೆಗಳ ನೆಪದಲ್ಲಿ ರೈತರ ಭೂಮಿ ಕಸಿದುಕೊಂಡು ರಿಯಲ್ ಎಸ್ಟೇಟ್ ದಂಧೆಕೋರರಿಗೆ ಹಸ್ತಾಂತರಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ನೈಸ್‌ನಿಂದ ರಾಜ್ಯಕ್ಕೆ ಮಹಾವಂಚನೆ;

ನೈಸ್ ಯೋಜನೆ ಕೂಡ ರಾಜ್ಯದ ಜನರನ್ನು ಲೂಟಿ ಮಾಡಿದ ಯೋಜನೆಯಾಗಿದ್ದು, ಸಾವಿರಾರು ಎಕರೆ ರೈತರ ಭೂಮಿಯನ್ನು ಲಪಟಾಯಿಸಿದೆ. 111 ಕಿ.ಮೀ. ಉದ್ದದ ಕಾಂಕ್ರೀಟ್ ರಸ್ತೆ ನಿರ್ಮಿಸಬೇಕಾಗಿದ್ದ ನೈಸ್ ಕಂಪನಿ ಕೇವಲ 5 ಕಿ.ಮೀ ದೂರದ ರಸ್ತೆಯನ್ನಷ್ಟೇ ನಿರ್ಮಿಸಿ ವಾಹನ ಸವಾರರಿಂದ ಅಕ್ರಮವಾಗಿ ಸುಲಿಗೆ ಮಾಡುತ್ತಿದೆ. ಯೋಜನಾ ಚೌಕಟ್ಟು ಒಪ್ಪಂದ ಹಾಗೂ ಯೋಜನಾ ತಾಂತ್ರಿಕ ಒಪ್ಪಂದಗಳನ್ನು ಉಲ್ಲಂಘಿಸಿ ರಾಜ್ಯಕ್ಕೆ ಮಹಾ ವಂಚನೆ ಯಾಸಗಿದೆ ಎಂದು ಸಚಿವರು ಜೆನ್‌-ಝೀಗಳಿಗೆ ಮನವರಿಕೆ ಮಾಡಿಕೊಟ್ಟರು.

ಈ ಬಗ್ಗೆ ರಾಜ್ಯ ಹೈಕೋರ್ಟ್ ಹೇಳಿರುವ ಅಭಿಪ್ರಾಯಗಳನ್ನು ಸಂವಾದದಲ್ಲಿ ಎಳೆಎಳೆಯಾಗಿ ಬಿಡಿಸಿಟ್ಟ ಕೇಂದ್ರ ಸಚಿವರು; ಯಾವುದೇ ಕಾರಣಕ್ಕೂ ರಾಜ್ಯದ ಜನ ನೈಸ್ ರಸ್ತೆಯಲ್ಲಿ ಟೋಲ್ ಪಾವತಿ ಮಾಡಬಾರದು ಎನ್ನುವ ತಮ್ಮ ಅಭಿಪ್ರಾಯವನ್ನು ಪುನರುಚ್ಚರಿಸಿದರು.

ಕೆಪಿಎಸ್ಸಿಯಲ್ಲಿ ಅಕ್ರಮ:

ಕರ್ನಾಟಕದ ಭವಿಷ್ಯದ ದೃಷ್ಟಿಯಿಂದ ಕೆಪಿಎಸ್‌ಸಿ ಬಹಳ ಮಹತ್ವವಾದ ಸಂಸ್ಥೆ. ಅನೇಕ ಮಹನೀಯರು ಕಟ್ಟಿ ಬೆಳೆಸಿದ ಈ ಸಂಸ್ಥೆ ಇಂದು ಭ್ರಷ್ಟಾಚಾರದ ಕೂಪವಾಗಿದೆ. ಪ್ರತಿ ಹುದ್ದೆ ಆಯ್ಕೆ ಮತ್ತು ನೇಮಕಾತಿಯಲ್ಲಿ ಈ ಸಂಸ್ಥೆ ನಿರಂತರವಾಗಿ ಅಕ್ರಮ ಎಸಗುತ್ತಿದೆ. ಅಲ್ಲದೆ ಸಹಾಯಕ ಕಾರ್ಯಕಾರಿ ಎಂಜಿನಿಯರ್ ಗ್ರೇಡ್ 1 ಹುದ್ದೆಗಳ ನೇಮಕಾತಿ ಹಾಗೂ ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಕೂಡ ಸರ್ಕಾರ ಮತ್ತು ಕೆಪಿಎಸ್‌ಸಿ ಅಕ್ರಮ ಎಸಗಿರುವುದು ಸಾಬೀತಾಗಿದೆ. ರಾಜ್ಯದಲ್ಲಿ ನಿರುದ್ಯೋಗ ತಾಂಡವವಾಡುತ್ತಿದ್ದು, ಸರ್ಕಾರಕ್ಕೆ ಯಾವುದೇ ಬದ್ಧತೆ ಇಲ್ಲದಿರುವುದು ನನಗೆ ಬೇಸರ ಉಂಟು ಮಾಡಿದೆ ಎಂದು ಸಚಿವರು ಹೇಳಿದರು.

ರಾಜ್ಯದ ಭವಿಷ್ಯದ ದೃಷ್ಟಿಯಿಂದ ಕೆಪಿಎಸ್‌ಸಿ ಮಹತ್ವದ ಪಾತ್ರ ವಹಿಸಬೇಕು. ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿಗಳನ್ನು ಆಯ್ಕೆ ಮಾಡಿಕೊಡುವ ಗುರುತರ ಜವಾಬ್ದಾರಿ ಈ ಸಂಸ್ಥೆಗೆ ಇದೆ. ದುರುದೃಷ್ಟವಶಾತ್ ಕೆಪಿಎಸ್‌ಸಿ ದಾರಿ ತಪ್ಪಿದೆ ಎಂದು ಸಚಿವರು ನುಡಿದರು.

ಈ ನಿಟ್ಟಿನಲ್ಲಿ ಯುವಕರು ಎಚ್ಚೆತ್ತು ತಮ್ಮ ಮುಂದಿನ ಭವಿಷ್ಯಕ್ಕಾಗಿ ಸರಿಯಾದ ಮಾರ್ಗದಲ್ಲಿ ಹೋರಾಟ ನಡೆಸಬೇಕಿದೆ. ಕೆಟ್ಟ ವ್ಯವಸ್ಥೆಯನ್ನು ಬದಲಿಸುವ ಜೊತೆಗೆ ಜನಪರ ಮತ್ತು ಪ್ರಾಮಾಣಿಕವಾದ ಆಡಳಿತ ವ್ಯವಸ್ಥೆ ತರುವ ಕೆಲಸ ಮಾಡಬೇಕು ಎಂದು ಕುಮಾರಸ್ವಾಮಿ ಅವರು ಕರೆ ನೀಡಿದರು.

-ಕೋಟ್‌-

ಕರ್ನಾಟಕದ ಭವಿಷ್ಯದ ದೃಷ್ಟಿಯಿಂದ ನಡೆದ ಈ ಅರ್ಥಪೂರ್ಣ ಸಂವಾದವು ಅನೇಕ ಒಳನೋಟಗಳನ್ನು ನೀಡಿತು. ಪ್ರತಿಭಾನ್ವಿತ ಯುವಜನರು ಕೇಳಿದ ಅನೇಕ ಪ್ರಶ್ನೆಗಳಲ್ಲಿ ರಾಜ್ಯದ ಹಿತ ಅಡಗಿದೆ ಎಂಬುದರಲ್ಲಿ ಎರಡು ಮಾತೇ ಇಲ್ಲ ಎನ್ನುವುದು ನನ್ನ ಖಚಿತ ಅಭಿಪ್ರಾಯ.

-ಎಚ್‌.ಡಿ.ಕುಮಾರಸ್ವಾಮಿ, ಕೇಂದ್ರ ಕೈಗಾರಿಕಾ ಸಚಿವ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

222 ಬೀದಿ ದೀಪಗಳ ಪೈಕಿ 140 ದೀಪ ಬಂದ್!
ಲಾಲ್ಬಾಗಲ್ಲಿ ಪರಿಸರವಾದಿಗಳ ಪ್ರತಿಭಟನೆ