ಅಭಿವೃದ್ಧಿ ಹೆಸರಿನಲ್ಲಿ ಉದ್ಯಾನಗಳ ಶೇ.5 ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಲು ಸರ್ಕಾರ ಹೊರಡಿಸಿರುವ ಹೊಸ ನಿಯಮದ ಕುರಿತು ಎಲ್ಲೆಡೆ ಭಾರೀ ಜನಾಕ್ರೋಶ ವ್ಯಕ್ತವಾಗಿದ್ದು, ಪರಿಸರವಾದಿ ಯಲ್ಲಪ್ಪರೆಡ್ಡಿ ಮತ್ತು ವಾಕರ್ಸ್‌ ಅಸೋಸಿಯೇಷನ್‌ ನೇತೃತ್ವದಲ್ಲಿ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಭಾನುವಾರ ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಭಿವೃದ್ಧಿ ಹೆಸರಿನಲ್ಲಿ ಉದ್ಯಾನಗಳ ಶೇ.5 ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಲು ಸರ್ಕಾರ ಹೊರಡಿಸಿರುವ ಹೊಸ ನಿಯಮದ ಕುರಿತು ಎಲ್ಲೆಡೆ ಭಾರೀ ಜನಾಕ್ರೋಶ ವ್ಯಕ್ತವಾಗಿದ್ದು, ಪರಿಸರವಾದಿ ಯಲ್ಲಪ್ಪರೆಡ್ಡಿ ಮತ್ತು ವಾಕರ್ಸ್‌ ಅಸೋಸಿಯೇಷನ್‌ ನೇತೃತ್ವದಲ್ಲಿ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಭಾನುವಾರ ಪ್ರತಿಭಟನೆ ನಡೆಯಿತು.

ಸರ್ಕಾರಿ ಉದ್ಯಾನವನಗಳು (ಸಂರಕ್ಷಣೆ) ಕಾಯ್ದೆ, 1975ಕ್ಕೆ ತಿದ್ದುಪಡಿ ತರುವ ಮಸೂದೆಯು ಉದ್ಯಾನವನ ಮತ್ತು ಉದ್ಯಾನ ಭೂಮಿಯ ಕೆಲವು ಭಾಗಗಳನ್ನು ಸಾರ್ವಜನಿಕ ಮೂಲಸೌಕರ್ಯ ಮತ್ತು ಉಪಯುಕ್ತತೆ ಯೋಜನೆಗಳಿಗೆ ಬಳಸಲು ಅನುವು ಮಾಡಿಕೊಡುತ್ತದೆ. ಇದು ನಗರದ ಪರಿಸರ ವ್ಯವಸ್ಥೆಯನ್ನು ಹಾಳು ಮಾಡಲಿದ್ದು, ಶೇ.5ರಷ್ಟಲ್ಲ ಪಾರ್ಕಿನ ಒಂದಿಂಚು ಜಾಗವನ್ನು ಕೊಡಲು ಒಪ್ಪುವುದಿಲ್ಲ ಎಂದು ಜಾಗೃತಿ ವಾಕ್‌ನಲ್ಲಿ ಪಾಲ್ಗೊಂಡಿದ್ದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು ಮಾತ್ರವಲ್ಲ ರಾಜ್ಯದಲ್ಲಿರುವ ಯಾವುದೇ ಉದ್ಯಾನವನ ಅಥವಾ ಉದ್ಯಾನದ ಒಟ್ಟು ವ್ಯಾಪ್ತಿಯ 5 ಪ್ರತಿಶತದಷ್ಟು ಭಾಗವನ್ನು ಮಾರಾಟ, ಗುತ್ತಿಗೆ, ಉಡುಗೊರೆ, ವಿನಿಮಯ ಅಥವಾ ಅಡಮಾನದ ಮೂಲಕ ನಿರ್ದಿಷ್ಟ ಸಾರ್ವಜನಿಕ ಉದ್ದೇಶಗಳಿಗಾಗಿ ಪರಭಾರೆ ಮಾಡಲು ಈ ತಿದ್ದುಪಡಿ ಅವಕಾಶ ನೀಡುತ್ತದೆ. ಇದೊಂದು ದುರುದ್ದೇಶಪೂರಿತ ಮಸೂದೆಯಾಗಿದ್ದು ರಾಜ್ಯ ಸರ್ಕಾರ ಕೂಡಲೇ ಕಾಯ್ದೆ ತಿದ್ದುಪಡಿಯನ್ನು ಹಿಂಪಡೆಯಬೇಕು ಎಂದು ನಿವೃತ್ತ ಐಎಫ್‌ಎಸ್‌ ಅಧಿಕಾರಿ, ಪರಿಸರವಾದಿ ಯಲ್ಲಪ್ಪರೆಡ್ಡಿ ಅವರು ಆಗ್ರಹಿಸಿದರು.

ಬಿಜೆಪಿ ಜನಪ್ರತಿನಿಧಿಗಳ ಬೆಂಬಲ:

ಭಾನುವಾರ ಬೆಳಗ್ಗೆ 7.30ಕ್ಕೆ ಲಾಲ್‌ಬಾಗ್‌ ಪಶ್ಚಿಮ ದ್ವಾರದಿಂದ ಪರಿಸರ ವಿರೋಧಿ ಕಾಯ್ದೆ ಕುರಿತು ಜನರಿಗೆ ಜಾಗೃತಿ ಮೂಡಿಸುವ ಜಾಗೃತಿ ವಾಕ್‌ ಆರಂಭಗೊಂಡಿತು. ಈ ಜಾಗೃತಿ ವಾಕ್‌ನಲ್ಲಿ ಬಿಜೆಪಿಯ ಸಂಸದರಾದ ಪಿ.ಸಿ.ಮೋಹನ್‌, ಡಾ.ಎನ್‌.ಮಂಜುನಾಥ್‌, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ, ಶಾಸಕ ಸಿ.ಕೆ.ರಾಮಮೂರ್ತಿ, ಬಿಬಿಎಂಪಿ ಮಾಜಿ ಉಪಮೇಯರ್‌ ಎಸ್‌. ಹರೀಶ್‌, ಉಮೇಶ್‌ಶೆಟ್ಟಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಪ್ರತಿಭಟನಾಕಾರರು ‘ಬೇಕೇ ಬೇಕು ಲಾಲ್ ಬಾಗ್ ಬೇಕು’, ‘ಪಾರ್ಕ್‌ ಜಾಗ ವಾಣಿಜ್ಯ ಬಳಕೆಗೆ ಬೇಡ ಬೇಡ’, ‘ರಾಜ್ಯ ಸರ್ಕಾರಕ್ಕೆ ಧಿಕ್ಕಾರ...,’ ಬೇಕೇ ಬೇಕು ನ್ಯಾಯಬೇಕು...’ ಎಂಬಿತ್ಯಾದಿ ಘೋಷಣೆಗಳನ್ನು ಕೂಗುತ್ತಾ ಲಾಲ್‌ಬಾಗ್‌ ಪಶ್ಚಿಮ ದ್ವಾರದಿಂದ ಪೂರ್ವ ದ್ವಾರದ ವರೆಗೂ ಜಾಗೃತಿ ವಾಕ್‌ನಲ್ಲಿ ಸಾಗಿದರು. ಲಾಲ್‌ಬಾಗ್‌ ಬಂಡೆ ಮೇಲೆಯೂ ನೂರಾರು ಮಂದಿ ಘೋಷಣೆ ಕೂಡಿ ಸರ್ಕಾರದ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜಾಗೃತಿ ವಾಕ್‌ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡ ಪ್ರವೀಣ್ ಶೆಟ್ಟಿ, ನಟಿಯರಾದ ಸುಧಾ ಬೆಳವಾಡಿ, ಪ್ರಣೀತಾ, ನಟಿ ಸಂಯುಕ್ತಾ ಹೊರನಾಡು, ಐಟಿ ಉದ್ಯೋಗಿಗಳು ಸೇರಿದಂತೆ ಇತರರು ಪಾಲ್ಗೊಂಡು ಪರಿಸರ ಉಳಿಸಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

--ಪೋಸ್ಟ್‌ ಕಾರ್ಡ್‌ ಅಭಿಯಾನ!

ಲಾಲ್‌ಬಾಗ್‌ ಬಂಡೆ ಉಳಿಸಿ ಹೋರಾಟದೊಂದಿಗೆ ರಾಜ್ಯದ ಪಾರ್ಕ್‌ಗಳ ಹೋರಾಟಕ್ಕೆ ಮುಂದಾಗುವಂತೆ ಕರೆ ನೀಡಿದ ಲಾಲ್‌ಬಾಗ್‌ ವಾಕರ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ಉಮೇಶ್‌ ಅವರು, ಉದ್ಯಾನದ ಶೇ.5 ಜಾಗ ಉಳಿಸಿ ಹೋರಾಟದ ಕುರಿತು ಪ್ರತಿಯೊಬ್ಬರು ಧ್ವನಿಯೆತ್ತಬೇಕು. ‘ಪೋಸ್ಟ್‌ ಕಾರ್ಡ್‌ ಅಭಿಯಾನ’ದ ಮೂಲಕ ಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಪತ್ರ ಬರೆದು ಉದ್ಯಾನಗಳನ್ನು ಉಳಿಸುವಂತೆ ಮನವಿ ಮಾಡಬೇಕೆಂದು ಸಾರ್ವಜನಿಕರಲ್ಲಿ ಕೋರಲಾಗುವುದು ಎಂದು ಹೇಳಿದರು.

ಫೋಟೋ ಕ್ಯಾಪ್ಷನ್‌

ಲಾಲ್‌ಬಾಗ್‌ನ ಬೃಹತ್‌ ಬಂಡೆ ತಂಬಿಕೊಂಡು ತೇಜಸ್ವಿ ಸೂರ್ಯ ಪ್ರತಿಭಟನೆ.ಬಿಜೆಪಿಯ ಸಂಸದರು ಹಾಗೂ ವಾಕರ್ಸ್‌ ಅಸೋಸಿಯೇಷನ್‌ನಿಂದ ಪ್ರತಿಭಟನೆ.