ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧ ಬಳಿಯ ಚಾಲುಕ್ಯ ವೃತ್ತದಿಂದ ಎಸ್‌ಬಿಐ ವೃತ್ತ ಮತ್ತು ಎಸ್‌ಬಿಐ ವೃತ್ತದಿಂದ ಹಲಸೂರು ಗೇಟ್ ಠಾಣೆವರೆಗಿನ ಮಾರ್ಗದಲ್ಲಿರುವ 222 ಬೀದಿ ದೀಪಗಳ ಪೈಕಿ 140 ದೀಪಗಳು ಕಾರ್ಯ ನಿರ್ವಹಿಸುತ್ತಿಲ್ಲ! ಈ ಕುರಿತು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಖುದ್ದು ಪರಿಶೀಲಿಸಿ, ಇದಕ್ಕೆ ಕಾರಣರಾದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಜಿಬಿಎ ಮುಖ್ಯ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಆ.28ರಂದು ಕಾರಿನಲ್ಲಿ ಪ್ರಯಾಣಿಸುವ ವೇಳೆ ಹಲಸೂರು ಗೇಟ್‌ನಿಂದ ಎಸ್‌ಬಿಐ ವೃತ್ತದವರೆಗೆ 67 ದೀಪಗಳ ಪೈಕಿ 33 ಬಂದ್ ಆಗಿದ್ದವು. ಎಸ್‌ಬಿಐ ವೃತ್ತದಿಂದ ಚಾಲುಕ್ಯ ವೃತ್ತದವರೆಗಿನ 155 ದೀಪಗಳ ಪೈಕಿ 107 ಕಾರ್ಯ ನಿರ್ವಹಿಸುತ್ತಿರಲಿಲ್ಲ. ವಿದ್ಯುತ್ ದೀಪಗಳ ಕುರಿತು ಈಗಾಗಲೇ 2 ಬಾರಿ ಸಭೆ ನಡೆಸಲಾಗಿದೆ. ದೀಪಗಳು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಆದರೂ, ಮೆಜೆಸ್ಟಿಕ್‌ಗೆ ಸಂಪರ್ಕಿಸುವ ರಸ್ತೆ, ನ್ಯಾಯಾಲಯ ಸಂಕೀರ್ಣ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನಿವಾಸ ಸೇರಿದಂತೆ ನೂರಾರು ವಾಹನಗಳು ಸಂಚರಿಸುವ ರಸ್ತೆಯಲ್ಲೇ ಬೀದಿ ದೀಪಗಳ ನಿರ್ವಹಣೆ ಲೋಪವಿರುವುದು ಸ್ಪಷ್ಟವಾಗಿದೆ. ಹೀಗಾಗಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಜಿಬಿಎ ಮುಖ್ಯ ಆಯುಕ್ತರಿಗೆ ಸಚಿವರು ನಿರ್ದೇಶನ ನೀಡಿದ್ದಾರೆ.

ಜವಾಬ್ದಾರಿ, ಹೊಣೆಗಾರಿಕೆ ಇಲ್ಲ:

ನಗರಕ್ಕೆ ಅನುದಾನ, ಅಭಿವೃದ್ಧಿ ಯೋಜನೆಗಳು, ಅಧಿಕಾರಿ, ಹುದ್ದೆಗಳ ಕೊರತೆಯಿಲ್ಲ. ಅಧಿಕಾರಿಗಳಿಗೆ ಸಾಮಾನ್ಯ ಜವಾಬ್ದಾರಿ ಹಾಗೂ ಹೊಣೆಗಾರಿಕೆಯ ಕೊರತೆ ಇದೆ. ಕೆಲವರು ತಮಗೆ ಯಾವುದೇ ಜವಾಬ್ದಾರಿ, ಹೊಣೆಗಾರಿಕೆ ಇಲ್ಲ. ಎಲ್ಲವನ್ನು ಮೀರಿದವರು ನಾವು ಎಂದು ಭಾವಿಸಿದಂತಿದೆ. ಅಲ್ಲದೇ, ನಗರದ ಆಡಳಿತ ವ್ಯವಸ್ಥೆಯು ಇಂತಹ ಕೆಲವರನ್ನು ಪೋಷಿಸಿದಂತೆ ಕಾಣುತ್ತಿದೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಪದೇ ಪದೇ ಸೂಚನೆ ಹಾಗೂ ಎಚ್ಚರಿಕೆಗಳನ್ನು ನೀಡಿದ್ದರೂ, ಬೀದಿ ದೀಪಗಳ ನಿರ್ವಹಣೆಯಲ್ಲಿ ಸುಧಾರಣೆ ಮಾಡಲು ಕಾಳಜಿ ಕಾಣಿಸುತ್ತಿಲ್ಲ ಎಂದು ಸಚಿವರು ಬೇಸರ ವ್ಯಕ್ತಪಡಿಸಿದ್ದಾರೆ.

ಬೀದಿ ದೀಪಗಳ ಸಮರ್ಪಕ ನಿರ್ವಹಣೆಯಲ್ಲಿ ವಿಫಲರಾಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಿಬಿಎ ಮುಖ್ಯ ಆಯುಕ್ತರು ಮತ್ತು ಕೇಂದ್ರ ಪಾಲಿಕೆ ಆಯುಕ್ತರಿಗೆ ಸೂಚಿಸಿದ್ದೇನೆ.-ಕೃಷ್ಣ ಬೈರೇಗೌಡ ಬೆಂಗಳೂರು ನಗರಾಭಿವೃದ್ಧಿ ಸಚಿವ