ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಮಹತ್ವಾಕಾಂಕ್ಷೆಯ ಡಾ.ಕೆ.ಶಿವರಾಮ ಕಾರಂತ ಬಡಾವಣೆಯ ನಿವೇಶನ ಹಂಚಿಕೆಗೆ ಕಾಲ ಕೂಡಿ ಬಂದಿದೆ. ಬಡಾವಣೆಗೆ ಜಮೀನು ಬಿಟ್ಟು ಕೊಟ್ಟ ಭೂಮಾಲೀಕರಿಗೆ, ರೈತರಿಗೆ 18 ಸಾವಿರ ನಿವೇಶನಗಳ ಪೈಕಿ ಕೆಲ ಭೂಮಾಲೀಕರಿಗೆ ಸೋಮವಾರ ಮುಖ್ಯಮಂತ್ರಿಗಳು ಸಾಂಕೇತಿಕವಾಗಿ ನಿವೇಶನಗಳನ್ನು ಹಂಚಿಕೆ ಮಾಡಲಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಮಹತ್ವಾಕಾಂಕ್ಷೆಯ ಡಾ.ಕೆ.ಶಿವರಾಮ ಕಾರಂತ ಬಡಾವಣೆಯ ನಿವೇಶನ ಹಂಚಿಕೆಗೆ ಕಾಲ ಕೂಡಿ ಬಂದಿದೆ. ಬಡಾವಣೆಗೆ ಜಮೀನು ಬಿಟ್ಟು ಕೊಟ್ಟ ಭೂಮಾಲೀಕರಿಗೆ, ರೈತರಿಗೆ 18 ಸಾವಿರ ನಿವೇಶನಗಳ ಪೈಕಿ ಕೆಲ ಭೂಮಾಲೀಕರಿಗೆ ಸೋಮವಾರ ಮುಖ್ಯಮಂತ್ರಿಗಳು ಸಾಂಕೇತಿಕವಾಗಿ ನಿವೇಶನಗಳನ್ನು ಹಂಚಿಕೆ ಮಾಡಲಿದ್ದಾರೆ.ಭೂಮಾಲೀಕರಿಗೆ ನಿವೇಶನ ವಿತರಣೆ ಮತ್ತು ಸಾರ್ವಜನಿಕರಿಂದ ಅರ್ಜಿ ಸಲ್ಲಿಕೆಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ಆ.5ರಂದು ಹಮ್ಮಿಕೊಳ್ಳಲು ಉದ್ದೇಶಿಸಲಾಗಿತ್ತು. ಆದರೆ, ವಿವಿಧ ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಈಗ ಆ.31 ಬೆಳಗ್ಗೆ 11.30ಕ್ಕೆ ನೆಹರು ತಾರಾಲಯದ ಯು.ಆರ್.ಭವನದಲ್ಲಿ ಸಾಂಕೇತಿಕವಾಗಿ ಸಿಎಂ ಡಿ.ಕೆ.ಶಿವಕುಮಾರ್ ಅವರು 600ಕ್ಕೂ ಹೆಚ್ಚು ಭೂಮಾಲೀಕರಿಗೆ ನಿವೇಶನ ವಿತರಿಸಲಿದ್ದಾರೆ, ಉಳಿದವರಿಗೆ ಕೌಂಟರ್‌ನಲ್ಲಿ ವಿತರಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಬಿಡಿಎ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೈಕೋರ್ಟ್ ನಿವೇಶನ ಹಂಚಿಕೆಗೆ ಹಸಿರು ನಿಶಾನೆ ತೋರಿಸಿರುವ ಹಿನ್ನೆಲೆಯಲ್ಲಿ ಪ್ರಾಧಿಕಾರವು ಭೂಮಾಲೀಕರಿಗೆ ನಿವೇಶನ ವಿತರಿಸುವ ಜತೆಗೆ, ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸುವ ಪ್ರಕ್ರಿಯೆಗೂ ಸೋಮವಾರ ಚಾಲನೆ ನೀಡಲಿದೆ ಎಂದು ಬಿಡಿಎ ಮೂಲಗಳು ತಿಳಿಸಿವೆ.ಉತ್ತರ ಬೆಂಗಳೂರಿನ ಆವಲಹಳ್ಳಿ, ರಾಮಗೊಂಡನಹಳ್ಳಿ, ಜಾರಕಬಂಡೆ ಕಾವಲ್ ಸೇರಿದಂತೆ ಒಟ್ಟು 17 ಹಳ್ಳಿಗಳ ಸುಮಾರು 3,069 ಎಕರೆ ಪ್ರದೇಶದಲ್ಲಿ ಬಡಾವಣೆ ನಿರ್ಮಾಣಗೊಂಡಿದೆ. ಕಳೆದೊಂದು ದಶಕದಿಂದ ಬಡಾವಣೆ ನಿರ್ಮಾಣ ವಿವಾದದಲ್ಲಿ ಸಿಲುಕಿತ್ತು. ಅದನ್ನು ಸರಿದಾರಿಗೆ ತರಲು ಸುಪ್ರೀಂ ಕೋರ್ಟ್ ವಿಶೇಷ ಮೂವರು ಸದಸ್ಯರ ಸಮಿತಿ ರಚಿಸಿತ್ತು. ಹೈಕೋರ್ಟ್‌ನ ನಿವೃತ್ತ ನ್ಯಾ.ಎ.ವಿ. ಚಂದ್ರಶೇಖರ್, ಮಾಜಿ ಡಿಜಿ ಮತ್ತು ಐಜಿಪಿ ಎಸ್.ಟಿ.ರಮೇಶ್ ಹಾಗೂ ಬಿಡಿಎ ಮಾಜಿ ಕಮಿಷನರ್ ಜಯಕರ್ ಜೆರೋಮ್ ಅವರನ್ನೊಳಗೊಂಡ ಈ ಸಮಿತಿಯ ಮೇಲ್ವಿಚಾರಣೆಯಲ್ಲಿ ಲೇಔಟ್ ಅಭಿವೃದ್ಧಿ ಕಂಡಿದೆ.
ಕಳೆದ 3 ವರ್ಷಗಳಿಂದ ಬಡಾವಣೆ ನಿರ್ಮಾಣಕ್ಕೆ ಭೂಮಿ ನೀಡಿದ ರೈತರು ಮತ್ತು ಭೂಮಾಲೀಕರಿಗೆ ನಿವೇಶನ ಹಂಚಿಕೆಗೆ ತಡೆಹಿಡಿಯಲಾಗಿತ್ತು. ಇದು ಬಿಡಿಎ ಮೇಲೆ ಆರ್ಥಿಕ ಹೊರೆ ಹೆಚ್ಚುವಂತೆ ಮಾಡಿತ್ತು. ಈ ಕುರಿತು ಪ್ರಾಧಿಕಾರವು ನ್ಯಾಯಾಲಯದಲ್ಲಿ ತನ್ನ ಅಳಲು ತೋಡಿಕೊಂಡ ಹಿನ್ನೆಲೆಯಲ್ಲಿ ಹೈಕೋರ್ಟ್ ನಿವೇಶನ ಹಂಚಿಕೆಗೆ ಒಪ್ಪಿಗೆ ನೀಡಿದ್ದರಿಂದ ಇಂದು ಭೂಮಾಲೀಕರಿಗೆ ನಿವೇಶನಗಳನ್ನು ಪ್ರಾಧಿಕಾರ ಹಂಚಿಕೆ ಮಾಡಲು ಸಿದ್ಧತೆ ನಡೆಸಿದೆ.ಬಡಾವಣೆ ನಿರ್ಮಾಣಕ್ಕೆ ಸುಮಾರು 3,200 ರೈತರು ಮತ್ತು ಭೂಮಾಲೀಕರು ಜಾಗ ನೀಡಿದ್ದಾರೆ. ಈ ಬಡಾವಣೆಯಲ್ಲಿ ವಿವಿಧ ಅಳತೆಯ 34,992 ನಿವೇಶನಗಳನ್ನು ರಚಿಸಿದ್ದು, ಸುಮಾರು 18 ಸಾವಿರ ನಿವೇಶನಗಳನ್ನು ಬಡಾವಣೆಗೆ ಭೂಮಿ ನೀಡಿದ ರೈತರು ಮತ್ತು ಭೂಮಾಲೀಕರಿಗೆ ಮೀಸಲಿಡಲಾಗಿದೆ. --
ಚ.ಅಡಿಗೆ 6 ಸಾವಿರ ರು.ಶಿವರಾಮ ಕಾರಂತ ಬಡಾವಣೆಯಲ್ಲಿ ವಸತಿ ನಿವೇಶನಗಳ ಬೆಲೆಯನ್ನು ಪ್ರತಿ ಚದರ ಅಡಿಗೆ 6 ಸಾವಿರ ರು. ನಿಗದಿಪಡಿಸಲಾಗಿದೆ. 3 ವರ್ಷಗಳ ಹಿಂದೆ ಚದರ ಅಡಿ ನಿವೇಶನಕ್ಕೆ 4,999 ರು. ನಿಗದಿಪಡಿಸಲು ಪ್ರಸ್ತಾಪಿಸಲಾಗಿತ್ತು. ಈಗ ದರ ಪರಿಷ್ಕರಿಸಲಾಗಿದ್ದು, ಚದರ ಅಡಿಗೆ 1000 ರು. ಹೆಚ್ಚಿಸಲಾಗಿದೆ. ಪರಿಷ್ಕೃತ ದರದನ್ವಯ 30/40 ಅಡಿ (1,200 ಚದರ ಅಡಿ) ನಿವೇಶನದ ದರ 72 ಲಕ್ಷ ರು.ಗಳಷ್ಟಾಗಲಿದೆ.--
ನಿವೇಶನ ಹಂಚಿಕೆಬಿಡಿಎ ವತಿಯಿಂದ ಸೋಮವಾರ ಬೆಳಗ್ಗೆ 11.30ಕ್ಕೆ ನೆಹರು ತಾರಾಲಯದ ಯು.ಆರ್.ಭವನದಲ್ಲಿ ಡಾ.ಕೆ.ಶಿವರಾಮ ಕಾರಂತ ಬಡಾವಣೆಯ ಭೂಮಾಲೀಕರಿಗೆ ನಿವೇಶನ ಹಂಚಿಕೆ ಪತ್ರ ವಿತರಣೆ ನಡೆಯಲಿದೆ. ಸಿಎಂ ಡಿ.ಕೆ.ಶಿವಕುಮಾರ್ ಕಾರ್ಯಕ್ರಮ ಉದ್ಘಾಟಿಸುವರು. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ, ಆಹಾರ ಸಚಿವ ರಿಜ್ವಾನ್ ಅರ್ಷದ್ ಉಪಸ್ಥಿತರಿರುವರು. ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರೀಸ್ ಅಧ್ಯಕ್ಷತೆ ವಹಿಸುವರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ಪಿ.ಸಿ.ಮೋಹನ್, ಶಾಸಕರಾದ ಎನ್.ಮುನಿರಾಜು, ಎಸ್.ಆರ್.ವಿಶ್ವನಾಥ್ ಪಾಲ್ಗೊಳ್ಳುವರು.