ರಾಮನಗರ: ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಪೂರ್ಣಗೊಂಡಿದ್ದು, ಕರಡು ಮತದಾರರ ಪಟ್ಟಿಯನ್ನು ಸೋಮವಾರ ಜಿಲ್ಲೆಯಲ್ಲಿ ಅಧೀಕೃತವಾಗಿ ಪ್ರಕಟಿಸಲಾಗಿದ್ದು, ಒಟ್ಟು 8,28,037 ಮತದಾರರು ಕರಡು ಪಟ್ಟಿಯಲ್ಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ತಿಳಿಸಿದರು
ರಾಮನಗರ: ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಪೂರ್ಣಗೊಂಡಿದ್ದು, ಕರಡು ಮತದಾರರ ಪಟ್ಟಿಯನ್ನು ಸೋಮವಾರ ಜಿಲ್ಲೆಯಲ್ಲಿ ಅಧೀಕೃತವಾಗಿ ಪ್ರಕಟಿಸಲಾಗಿದ್ದು, ಒಟ್ಟು 8,28,037 ಮತದಾರರು ಕರಡು ಪಟ್ಟಿಯಲ್ಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಎಸ್‌ಐಆರ್ ಪ್ರಕ್ರಿಯೆ ಪ್ರಾರಂಭಕ್ಕೂ ಮುನ್ನ 9,38,586 ಮತದಾರರಿದ್ದರು. ಎಸ್‌ಐಆರ್ ಪ್ರಕ್ರಿಯೆಯಲ್ಲಿ 1,10,549 ಮತದಾರರು ಎನ್ಯೂಮರೇಷನ್ ಫಾರಂಗಳನ್ನು ನೀಡಿಲ್ಲ.ಮ್ಯಾಪಿಂಗ್ ಆಗದ 8,203 ಹಾಗೂ 11,188 ಅನಾಮಲೀಸ್ (ಹೆಸರು ಬದಲಾವಣೆ, ಪೋಷಕರ ಹೆಸರು ಬದಲಾವಣೆ, ವಯಸ್ಸಿನ ಅಂತರ) ಮತದಾರರು ಸೇರಿದಂತೆ ಒಟ್ಟು 20,191 ಜನರಿಗೆ ಬಿಎಲ್‌ಓ ಮೂಲಕ ನೋಟಿಸ್ ನೀಡಲಾಗುವುದು, 33,848 ಮತದಾರರು ಮರಣ ಹೊಂದಿದರೆ, 47,098 ಮತದಾರರು ಜಿಲ್ಲೆಯಿಂದ ಶಾಶ್ವತವಾಗಿ ವಲಸೆ ಹೋಗಿದ್ದಾರೆ, 15,761 ಈಗಾಗಲೇ ಇತರೆಡೆ ನೋಂದಾಯಿಸಿಕೊಂಡವರು, 13,061 ಗೈರು ಮತದಾರರು ಹಾಗೂ 781 ಇತರೆ ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.
ಜಿಲ್ಲಾದ್ಯಂತ ಕರಡು ಮತದಾರರ ಪಟ್ಟಿ ಪ್ರಕಟಗೊಂಡಿದ್ದು, ಇಂದಿನಿಂದ 2026ರ ಸೆಪ್ಟೆಂಬರ್ 23ರವರೆಗೆ ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕರಿಗೆ ಕಾಲಾವಕಾಶ ನೀಡಲಾಗಿದೆ. ಅಕ್ಟೋಬರ್ 22ರವರೆಗೆ ನೋಟಿಸ್ ಹಾಗೂ ಸಲ್ಲಿಸಲಾದ ಆಕ್ಷೇಪಣೆ ಅರ್ಜಿಗಳ ವಿಲೇವಾರಿ ನಡೆಯಲಿದೆ. 2026ರ ಅಕ್ಟೋಬರ್ 27 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಗೊಳ್ಳಲಿದ ಎಂದರು.ಮತದಾರರು ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಕರಡು ಪಟ್ಟಿಯನ್ನು ಪರಿಶೀಲಿಸಿ, ಯಾವುದೇ ಹಕ್ಕು ಮತ್ತು ಆಕ್ಷೇಪಣೆಗಳಿದ್ದಲ್ಲಿ ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಕರಡು ಪಟ್ಟಿಯಲ್ಲಿ ಹೆಸರಿಲ್ಲದ ಅರ್ಹ ಮತದಾರರು ನಮೂನೆ-6ರ ಮೂಲಕ ಮತದಾರರ ನೋಂದಣಾಧಿಕಾರಿಗಳು, ಬಿಎಲ್‌ಒ ಅಥವಾ ವೋಟರ್ ಸರ್ವಿಸ್ ಪೋರ್ಟಲ್ ಮೂಲಕ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು. 2026ರ ಅಕ್ಟೋಬರ್ 1ಕ್ಕೆ 18 ವರ್ಷ ತುಂಬುವ ಯುವ ಮತದಾರರೂ ಕೂಡ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ತಿಳಿಸಿದರು.
ಜಿಲ್ಲೆಯ ಕರಡು ಮತದಾರರ ಪಟ್ಟಿಯನ್ನು ಬಿಎಲ್‌ಒಗಳು ಗ್ರಾಮ ಸಭೆಯಲ್ಲಿ ತಿಳಿಸಲಿದ್ದಾರೆ ಹಾಗೂ ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ, ಗ್ರಾಮ ಪಂಚಾಯತ್‌ಗಳಲ್ಲಿ, ತಾಪಂಗಳಲ್ಲಿ, ತಹಸೀಲ್ದಾರ್ ಕಚೇರಿಯಲ್ಲಿ ಕರಡು ಮತದಾರರ ಪಟ್ಟಿಯ ಮಾಹಿತಿಯನ್ನು ಪ್ರಕಟಿಸಲಾಗಿದೆ ಎಂದರು.ನೋಟೀಸಿನಲ್ಲಿ ತಿಳಿಸಲಾದ ನಿಗದಿತ ಅವಧಿಯೊಳಗೆ ಮತದಾರರು ಲಿಖಿತ ಮನವಿಯೊಂದಿಗೆ ಮತದಾರರ ನೋಂದಣಾಧಿಕಾರಿ ಅಥವಾ ಸಹಾಯಕ ಮತದಾರರ ನೋಂದಣಾಧಿಕಾರಿಯನ್ನು ಭೇಟಿಯಾಗಲು ಸಾಧ್ಯವಾಗದಿದ್ದಲ್ಲಿ ಮತ್ತೊಂದು ಕಾಲಾವಕಾಶ ನೀಡಲಾಗುತ್ತದೆ. ಈ ಅವಧಿಯಲ್ಲಿಯೂ ಮತದಾರರು ವಿಚಾರಣೆಗೆ ಹಾಜರಾಗದಿದ್ದರೆ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲಾಗುತ್ತದೆ ಎಂದು ಹೇಳಿದರು.
ಇಂದು ಪ್ರಕಟವಾದ ಕರಡು ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ ಒಟ್ಟು 8,28,037 ಮತದಾರರಲ್ಲಿ 4,04,863 ಪುರುಷ ಮತದಾರರು, 4,23,136 ಮಹಿಳಾ ಮತದಾರರು ಹಾಗೂ ಇತರೆ 38 ಮತದಾರರಿದ್ದಾರೆ. 18-19 ವರ್ಷ ವಯಸ್ಸಿನ 7,927 ಮತದಾರರು, 80 ವರ್ಷ ಮೇಲ್ಪಟ್ಟ 20,634 ಮತದಾರರು, 85 ವರ್ಷಕ್ಕೂ ಹೆಚ್ಚು ವರ್ಷ ಮೇಲ್ಪಟ್ಟ 7,314 ಮತದಾರರು, 10,403 ವಿಶೇಷಚೇತನ ಮತದಾರರು, 15 ವಿಐಪಿ ಮತದಾರರು, 4 ಎನ್‌ಆರ್‌ಐ ಮತದಾರರು, 160 ಸೇವಾ ಮತದಾರರಿದ್ದಾರೆ ಎಂದರು.ಚುನಾವಣಾ ಆಯೋಗ ತಿಳಿಸಿರುವಂತೆ, 1987ರ ಜುಲೈ 1ಕ್ಕಿಂತ ಮೊದಲು ಜನಿಸಿದವರಾಗಿದ್ದರೆ, ಜನ್ಮ ದಿನಾಂಕ ಮತ್ತು ಅಥವಾ ಜನ್ಮ ಸ್ಥಳವನ್ನು ದೃಢೀಕರಿಸುವ ದಾಖಲೆಯನ್ನು ಒದಗಿಸಬೇಕು. 1987 ಜುಲೈ 1ರಿಂದ 2004ರ ಡಿಸೆಂಬರ್ 2ರೊಳಗೆ ಜನಿಸಿದ್ದವರು ಜನ್ಮ ದಿನಾಂಕ, ಅಥವಾ ಜನ್ಮ ಸ್ಥಳವನ್ನು ದೃಢೀಕರಿಸುವ ದಾಖಲೆ ಜತೆಗೆ ತಂದೆ ಅಥವಾ ತಾಯಿಗೆ ಸಂಬಂಧಿಸಿದಂತೆ ಅವರ ಜನ್ಮ ದಿನಾಂಕ ಅಥವಾ ಜನ್ಮ ಸ್ಥಳವನ್ನು ದೃಢೀಕರಿಸುವ ದಾಖಲೆಗಳನ್ನು ಸಲ್ಲಿಸಬೇಕು ಎಂದು ಯಶವಂತ್ ವಿ.ಗುರುಕರ್ ಹೇಳಿದರು.24ಕೆಆರ್ ಎಂಎನ್ 5.ಜೆಪಿಜಿ
ರಾಮನಗರದಲ್ಲಿ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.