5 ಹುಲಿಗಳ ಕೊಂದ 3 ಹಂತಕರ ಬಂಧನ

KannadaprabhaNewsNetwork |  
Published : Jun 29, 2025, 01:36 AM ISTUpdated : Jun 29, 2025, 07:24 AM IST
ಹುಲಿ | Kannada Prabha

ಸಾರಾಂಶ

ಮಲೆ ಮಹದೇಶ್ವರ ವನ್ಯಜೀವಿಧಾಮದ ಮೀಣ್ಯಂನಲ್ಲಿ 5 ಹುಲಿಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ವಿಷ ಪ್ರಾಶನದಿಂದ ಹುಲಿಗಳು ಮೃತಪಟ್ಟಿದ್ದು ಖಚಿತವಾದ ಬೆನ್ನಲ್ಲೇ, ವಿಷ ಹಾಕಿದ ಮೂವರನ್ನು ಬಂಧಿಸಲಾಗಿದೆ.

 ಹನೂರು

ಮಲೆ ಮಹದೇಶ್ವರ ವನ್ಯಜೀವಿಧಾಮದ ಮೀಣ್ಯಂನಲ್ಲಿ 5 ಹುಲಿಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ವಿಷ ಪ್ರಾಶನದಿಂದ ಹುಲಿಗಳು ಮೃತಪಟ್ಟಿದ್ದು ಖಚಿತವಾದ ಬೆನ್ನಲ್ಲೇ, ವಿಷ ಹಾಕಿದ ಮೂವರನ್ನು ಬಂಧಿಸಲಾಗಿದೆ.

ಹುಲಿ ಹಸುವನ್ನು ಕೊಂದಿದ್ದಕ್ಕೆ ಕೋಪಗೊಂಡು, ಹಸುವಿನ ಮಾಲೀಕ ಕೋನಪ್ಪ ಈ ಕೃತ್ಯವೆಸಗಿದ ರೂವಾರಿ. ಈತನ ಕುಮ್ಮಕ್ಕಿನಿಂದ ಮಾದುರಾಜು, ನಾಗರಾಜು ಎಂಬುವರು ಕೀಟನಾಶಕವನ್ನು ಹಸುವಿನ ದೇಹಕ್ಕೆ ಸಿಂಪಡಿಸಿದ್ದರು. ಈ ಮೂವರನ್ನೂ ಈಗ ಬಂಧಿಸಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಇವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಸೆಕ್ಷನ್‌ 9.27ರ ಮತ್ತು ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್‌ 24ರ ಉಲ್ಲಂಘನೆಯಡಿ ಪ್ರಕರಣ ದಾಖಲಿಸಲಾಗಿದೆ.

ಆರೋಪಿಗಳನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಲಾಯಿತು. ಬಳಿಕ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಈ ವೇಳೆ ನ್ಯಾಯಾಧೀಶರು ಅವರನ್ನು ಜೂ.30ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಸೂಚಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಅವರನ್ನು ಮತ್ತೆ ಸೋಮವಾರ ಅರಣ್ಯಾಧಿಕಾರಿಗಳು ತಮ್ಮ ವಶಕ್ಕೆ ಪಡೆಯುವ ಸಾಧ್ಯತೆ ಇದೆ.

ಮುಗ್ಧರಂತೆ ವರ್ತಿಸಿದ್ದರು:

ವಿಚಿತ್ರವೆಂದರೆ ಈ ಹುಲಿಗಳು ಸತ್ತ ದಿನ ಈ ಮೂವರು ಸೇರಿದಂತೆ ಹಲವು ಸ್ಥಳೀಯರನ್ನು ಅಧಿಕಾರಿಗಳು ಕರೆದು ಪರಿಶೀಲನೆ ನಡೆಸಿದ್ದರು. ಆದರೆ ಅವರು ಆಗ ತಮಗೇನೂ ಗೊತ್ತೇ ಇಲ್ಲ ಎಂಬಂತೆ ಮುಗ್ಧರ ರೀತಿ ವರ್ತಿಸಿದ್ದರು. ಆದರೆ ತೀವ್ರ ವಿಚಾರಣೆ ನಂತರ ವಿಷ ಹಾಕಿದ್ದು ಇವರೇ ಎಂದು ದೃಢಪಟ್ಟಿದೆ. ಇವರೂ ತಾವು ಕೃತ್ಯ ಎಸಗಿದ್ದಾಗಿ ಒಪ್ಪಿದ್ದಾರೆ,

ಡಿಸಿಎಫ್ ಚಕ್ರಪಾಣಿ, ಎಸಿಎಫ್ ಗಜಾನನ ಹೆಗಡೆ ಹಾಗೂ ಹೂಗ್ಯಂ ಅರಣ್ಯ ವಲಯಾಧಿಕಾರಿ ಮಾದೇಶ್ ತಂಡವು ಆರೋಪಿಗಳನ್ನು ಶನಿವಾರ ಬಂಧಿಸಿತು. ಬಳಿಕ ಅವರನ್ನು ಘಟನಾ ಸ್ಧಳಕ್ಕೆ ಕರೆದೊಯ್ದು ಸ್ಧಳ ಪರಿಶೀಲನೆ ನಡೆಸಲಾಯಿತು.

ಪ್ರಕರಣವೇನು?:

ಮಲೆ ಮಹದೇಶ್ವರ ವನ್ಯಜೀವಿಧಾಮದ ಮೀಣ್ಯಂನಲ್ಲಿ ಒಂದು ತಾಯಿ ಹುಲಿ ಮತ್ತು ನಾಲ್ಕು ಮರಿ ಹುಲಿಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದವು. ತಾಯಿ ಹುಲಿಗೆ 8 ವರ್ಷ, ಮರಿ ಹುಲಿಗಳಿಗೆ 10 ತಿಂಗಳಾಗಿತ್ತು. ಕಾಡಿಗೆ ಹಸುಗಳನ್ನು ಮೇಯಲು ಬಿಟ್ಟಾಗ ಕೋನಪ್ಪನಿಗೆ ಸೇರಿದ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದಿತ್ತು. ಇದರಿಂದ ಕೋಪಗೊಂಡ ಆರೋಪಿಗಳು ಮೃತ ಹಸುವಿನ ದೇಹಕ್ಕೆ ಪೊರೇಟ್ ಎಂಬ ಕೀಟನಾಶಕ ಸಿಂಪರಣೆ ಮಾಡಿದ್ದರು. ಈ ವಿಷಪೂರಿತ ಹಸುವಿನ ಮಾಂಸ ತಿಂದ ಹುಲಿಗಳು ಮೃತಪಟ್ಟಿವೆ ಎಂದು ದೃಢಪಟ್ಟಿದೆ.

- ಮಲೆಮಹದೇಶ್ವರ ಬೆಟ್ಟದಲ್ಲಿ 5 ಹುಲಿಗಳು ಇತ್ತೀಚೆಗೆ ಏಕಾಏಕಿ ಸಾವು

- ತನಿಖೆ ವೇಳೆ ಮೃತ ಹಸುವಿನ ದೇಹಕ್ಕೆ ಕೀಟನಾಶಕ ಸಿಂಪಡಣೆ ದೃಢ

- ಇದೇ ಹಸುವನ್ನು ತಿಂದಿದ್ದ ತಾಯಿ ಹುಲಿ, 5 ಹುಲಿಮರಿಗಳು ಸಾವು

- ಈ ಹಸುವಿನ ದೇಹಕ್ಕೆ ಕೀಟನಾಶಕ ಸಿಂಪಡಿಸಿದ್ದ 3 ಸ್ಥಳೀಯರು

- ಹಸುವನ್ನು ಹುಲಿ ಕೊಂಡಿದ್ದ ಪ್ರತೀಕಾರವಾಗಿ ಹೀಗೆ ಮಾಡಿದ್ದರು

- ಕೃತ್ಯ ಎಸಗಿದ್ದ ಹಸು ಮಾಲೀಕ ಸೇರಿ ಎಲ್ಲ ಮೂವರ ಬಂಧನ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆಕೋರಿಕೆ:ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ