3 ಬಿಜೆಪಿ, 3 ಕಾಂಗ್ರೆಸ್, 2 ಪಕ್ಷೇತರ ಅಭ್ಯರ್ಥಿಗಳಿಗೆ ಗೆಲುವು

KannadaprabhaNewsNetwork |  
Published : Nov 27, 2024, 01:01 AM IST
ಚುನಾವಣೆ | Kannada Prabha

ಸಾರಾಂಶ

8 ಸ್ಥಾನದಲ್ಲಿ 3 ಬಿಜೆಪಿ, 3 ಕಾಂಗ್ರೆಸ್‌, 2 ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಮಂಗಳವಾರ ತಾಲೂಕು ಕೇಂದ್ರದಲ್ಲಿ ಮತ ಎಣಿಕೆ ನಡೆಯಿತು.

ಕನ್ನಡಪ್ರಭ ವಾರ್ತೆ ಕಾರ್ಕಳ

ಕಾರ್ಕಳ ತಾಲೂಕಿನ 6 ಗ್ರಾಮ ಪಂಚಾಯಿತಿಗಳಲ್ಲಿ ತೆರವಾಗಿರುವ 8 ಸದಸ್ಯ ಸ್ಥಾನಗಳಿಗೆ ನ. 23ರಂದು ಉಪಚುನಾವಣೆ ನಡೆದಿತ್ತು. ‌ಮಂಗಳವಾರ ತಾಲೂಕು ಕೇಂದ್ರದಲ್ಲಿ ಮತ ಎಣಿಕೆ ನಡೆದಿದ್ದು. 8 ಸ್ಥಾನದಲ್ಲಿ 3 ಬಿಜೆಪಿ ಅಭ್ಯರ್ಥಿ, 3 ಕಾಂಗ್ರೆಸ್ ಹಾಗೂ 2 ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ನಲ್ಲೂರು ಗ್ರಾ.ಪಂ.ನ (ಅ.ಜಾ ಮತ್ತು ಮಹಿಳಾ ಮೀಸಲಾತಿ) 1 ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಸವಿತಾ ಶ್ರೀಧರ್ (321) ಹಾಗೂ ಬಿಜೆಪಿಯ ಸುಮತಿ (256) ಮತ ಪಡೆದಿದ್ದು, 65 ಮತಗಳ ಅಂತರದಲ್ಲಿ ಸವಿತಾ ಶ್ರೀಧ‌ರ್ ಜಯಭೇರಿ ಸಾಧಿಸಿದ್ದಾರೆ.

ಈದು ಪಂಚಾಯಿತಿನಲ್ಲಿ 1 ಸ್ಥಾನ(ಅನುಸೂಚಿತ ಪಂಗಡ ಮತ್ತು ಮಹಿಳಾ ಮೀಸಲಾತಿ)ಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಯಂತಿ (296) ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ವಾರಿಜಾ (204) ಮತ ಪಡೆದಿದ್ದು, 92 ಮತಗಳ ಅಂತರದಲ್ಲಿ ಜಯಂತಿ ಗೆಲುವು ಸಾಧಿಸಿದ್ದಾರೆ.

ನೀರೆ ಗ್ರಾ.ಪಂ. (3 ಸ್ಥಾನ) ನೀರೆ - 1 (ಅ.ಪಂ. ಮಹಿಳಾ ಮೀಸಲಾತಿ)ರಲ್ಲಿ ಖಾಲಿಯಿದ್ದ 1 ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಸೌಮ್ಯ ಎಂಬವರು ಓರ್ವರೆ ನಾಮಪತ್ರ ಸಲ್ಲಿಸಿದ್ದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನೀರೆ - 2 (ಹಿಂದುಳಿದ ಅ ವರ್ಗ/ಸಾಮಾನ್ಯ) ರಲ್ಲಿ ಖಾಲಿಯಿದ್ದ 2 ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಪ್ರಸನ್ನ ಆಚಾರ್ಯ (151) ಮಹೇಶ್ (405) ಹಾಗೂ ರಾಜೇಂದ್ರ ಶೆಟ್ಟಿ (422) ಮತ ಪಡೆಯುವ ಮೂಲಕ ಗೆಲುವು ಪಕ್ಷೇತರ ಅಭ್ಯರ್ಥಿಗಳ ಪಾಲಾಗಿದೆ.

ಕೆರ್ವಾಶೆ ಗ್ರಾ.ಪಂ.ನಲ್ಲಿ ಖಾಲಿಯಿದ್ದ 1 (ಸಾಮಾನ್ಯ ಮೀಸಲಾತಿ) ಸದಸ್ಯ ಸ್ಥಾನಕ್ಕೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಧರ್ಮರಾಜ ಹೆಗ್ಡೆ (367) ಹಾಗೂ ಕಾಂಗ್ರೆಸ್‌ನ ನಾರಾಯಣ ನಾಯಕ್ (213) ಮತ ಪಡೆದಿದ್ದು, 154 ಮತಗಳ ಅಂತರದಲ್ಲಿ ಗೆಲುವು ಬಿಜೆಪಿ ಅಭ್ಯರ್ಥಿಯ ಪಾಲಾಗಿದೆ.

ನಿಟ್ಟೆ ಗ್ರಾ.ಪಂ.ನ (ಸಾಮಾನ್ಯ ಮಹಿಳೆ ಮೀಸಲಾತಿ) 1 ಸದಸ್ಯ ಸ್ಥಾನಕ್ಕೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಜ್ಯೋತಿ ರೀನಾ ಡಿ’ಸೋಜಾ (352) ಹಾಗೂ ಕಾಂಗ್ರೆಸ್‌ನ ಲಿನೆಟ್ ಮರೀನಾ ಡಿ‘ಸೋಜಾ (228) ಮತ ಪಡೆದಿದ್ದು, 124 ಮತಗಳ ಅಂತರದಲ್ಲಿ ಗೆಲುವು ಜ್ಯೋತಿ ರೀನಾ ಡಿ‘ಸೋಜಾ ಪಾಲಾಗಿದೆ.

ಕಡ್ತಲದ 1 ಸ್ಥಾನ(ಹಿಂದುಳಿದ ಬ ವರ್ಗ)ಕ್ಕೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ದೀಕ್ಷಿತ್‌ ಶೆಟ್ಟಿ (371), ಬಿಜೆಪಿಯ ಗುಣವತಿ ಅರವಿಂದ ಹೆಗ್ಡೆ (283) ಮತ ಪಡೆದಿದ್ದು, 87 ಮತಗಳ ಅಂತರದಲ್ಲಿ ಗೆಲುವು ಕಾಂಗ್ರೆಸ್ ಅಭ್ಯರ್ಥಿ ದೀಕ್ಷಿತ್ ಶೆಟ್ಟಿ ಪಾಲಾಗಿದೆ.

ಕಾಂಗ್ರೆಸ್ ಹರ್ಷ:

ಕಾರ್ಕಳ ವಿಧಾನ ಸಭಾ ಕ್ಷೇತದ ವಿವಿಧ ಗ್ರಾಮ ಪಂಚಾಯಿತಿಯ ಎಂಟು ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಏಳು ಕಡೆಗಳಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧಿಸಿದ್ದು ಅವರಲ್ಲಿ ಒಂದು ಅಭ್ಯರ್ಥಿಯು ಅವಿರೋಧ ಆಯ್ಕೆಯಾಗಿದ್ದಾರೆ. ಉಳಿದ ಆರು ಸ್ಥಾನದ ಸ್ಪರ್ಧೆಯಲ್ಲಿ ಎರಡು ಸ್ಥಾನವನ್ನು ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಗೆದ್ದು ಕಳೆದ ಬಾರಿಕ್ಕಿಂತ ಹೆಚ್ಚು ಎರಡು ಸ್ಥಾನವನ್ನು ಪಡೆದಿದ್ದಾರೆ. ಈದು ಗ್ರಾಮದಲ್ಲಿ ನಮ್ಮ ಬಳಿಯಿದ್ದ ಒಂದು ಸ್ಥಾನವನ್ನು ನಾವು ಕಳೆದುಕೊಂಡರೂ ನಲ್ಲೂರು, ನೀರೆ ಮತ್ತು ಕಡ್ತಲದಲ್ಲಿ ಮೂರು ಹೆಚ್ಚುವರಿ ಸ್ಥಾನವನ್ನು ಪಡೆದುಕೊಂಡಿದ್ದೇವೆ. ಬಿಜೆಪಿ ಬೆಂಬಲಿತರು ಸ್ಪರ್ಧಿಸಿದ್ದ ಏಳು ಸ್ಥಾನಗಳಲ್ಲಿ ಮೂರನ್ನು ಗೆದ್ದಿದ್ದು ಎರಡು ಸ್ಥಾನವನ್ನು ಬಿಜೆಪಿಯ ಬಂಡಾಯ ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದರಾವ್ ತಿಳಿಸಿದ್ದಾರೆ.

ಬಿಜೆಪಿ ಹರ್ಷ :

ಕಾರ್ಕಳ: ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೇರೆ ಬೇರೆ ಗ್ರಾಮ ಪಂಚಾಯತ್‌ಗಳಲ್ಲಿ 07 ಸ್ಥಾನಗಳಿಗೆ ನಡೆದ ಮರು ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಐದು ಬೆಂಬಲಿತ ಅಭ್ಯರ್ಥಿಗಳು ಜಯಭೇರಿಗಳಿಸಿದ್ದು, ಭಾರತೀಯ ಜನತಾ ಪಾರ್ಟಿ ಕಾರ್ಕಳ ಮಂಡಲ ಹರ್ಷ ವ್ಯಕ್ತಪಡಿಸಿದ್ದಾರೆ.

ಗ್ರಾಮ ಪಂಚಾಯಿತಿಗಳ ಏಳು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಆ ಭಾಗದ ಮತದಾರರು ಭಾರತೀಯ ಜನತಾ ಪಾರ್ಟಿಯ ಮೇಲೆ ನಂಬಿಕೆ ಇಟ್ಟು ಮತದಾನ ಮಾಡಿ ಬೆಂಬಲಿಸಿದ್ದಾರೆ. ಜನರಿಗೆ ಬಿಜೆಪಿಯೇ ಭರವಸೆ ಎಂಬುವುದು ಖಾತ್ರಿಯಾಗಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಹಾಗೂ ಕಾರ್ಕಳದಲ್ಲಿ ಕಾಂಗ್ರೆಸ್ ನಾಯಕರ ದಬ್ಬಾಳಿಕೆಗೆ ಕ್ಷೇತ್ರದ ಜನ ತಕ್ಕ ಉತ್ತರ ನೀಡಿದ್ದಾರೆ ಎಂದು ಬಿಜೆಪಿ ಹರ್ಷ ವ್ಯಕ್ತಪಡಿಸಿದೆ.

PREV

Recommended Stories

ಶಿಕ್ಷಕರು ಬಡವರಾದ್ರು, ಹೃದಯದಿಂದ ಶ್ರೀಮಂತರು
ಕೈ ಹಿಡಿದು ದಡ ಸೇರಿಸುವುದು ಶಿಕ್ಷಕ ಮಾತ್ರ