ಖರೀದಿ ನೆಪದಲ್ಲಿ 3 ಕೋಟಿ ಮೌಲ್ಯದ ಚಿನ್ನಾಭರಣ ಸುಲಿಗೆ

KannadaprabhaNewsNetwork |  
Published : May 21, 2026, 04:15 AM IST
Gold

ಸಾರಾಂಶ

ಚಿನ್ನ ಖರೀದಿಸುವುದಾಗಿ ನಂಬಿಸಿ ಚಿನ್ನ ವ್ಯಾಪಾರ ಮಳಿಗೆಯಿಂದ ₹3.18 ಕೋಟಿ ಮೌಲ್ಯದ ಒಡವೆಗಳನ್ನು ಸಿನಿಮಾ ಶೈಲಿಯಲ್ಲಿ ದುಷ್ಕರ್ಮಿಗಳು ದೋಚಿರುವ ಘಟನೆ ಮಲ್ಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿ ನಡೆದಿದೆ.

 ಬೆಂಗಳೂರು :  ಚಿನ್ನ ಖರೀದಿಸುವುದಾಗಿ ನಂಬಿಸಿ ಚಿನ್ನ ವ್ಯಾಪಾರ ಮಳಿಗೆಯಿಂದ ₹3.18 ಕೋಟಿ ಮೌಲ್ಯದ ಒಡವೆಗಳನ್ನು ಸಿನಿಮಾ ಶೈಲಿಯಲ್ಲಿ ದುಷ್ಕರ್ಮಿಗಳು ದೋಚಿರುವ ಘಟನೆ ಮಲ್ಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿ ನಡೆದಿದೆ.

ನಗರ್ತಪೇಟೆಯ ಬಂಗಾರ ಅಂಗಡಿ

ನಗರ್ತಪೇಟೆಯ ಬಂಗಾರ ಅಂಗಡಿಯ ವ್ಯವಸ್ಥಾಪಕ ಮಹೇಂದ್ರ ಕುಮಾರ್.ಡಿ.ಜೈನ್‌ ಒಡವೆ ಕಳೆದುಕೊಂಡಿದ್ದು, ಈ ಕೃತ್ಯ ಎಸಗಿ ಪರಾರಿಯಾಗಿರುವ ಪರೇಶ್ ಸೋನಿ, ಶ್ಯಾಮ್ ಹಾಗೂ ಚಂದ್ರಶೇಖರ್ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಮೂರು ದಿನಗಳ ಹಿಂದೆ ಮಲ್ಲೇಶ್ವರ ಸಂಪಿಗೆ ರಸ್ತೆಯಲ್ಲಿ ಕಚೇರಿಯೊಂದಕ್ಕೆ ಚಿನ್ನ ವ್ಯಾಪಾರದ ವ್ಯವಹಾರ ಮಾತುಕತೆಗೆ ಕರೆಸಿಕೊಂಡು ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಂಚನೆ ಹೇಗೆ?:

ದೂರು ನೀಡಿರುವ ಮಹೇಂದ್ರ ಅವರು, ತಾನು ನಗರ್ತಪೇಟೆಯಲ್ಲಿ ‘ಮೇಹ್ವಾ ಗೋಲ್ಡ್ ಪ್ರೈ.ಲಿ’ ಹೆಸರಿನ ಸಗಟು ಚಿನ್ನಾಭರಣ ವ್ಯಾಪಾರ ಮಳಿಗೆಯಲ್ಲಿ ವ್ಯವಸ್ಥಾಪಕನಾಗಿದ್ದೇನೆ. ಮೇ 16 ರಂದು ಅಂಗಡಿಯಲ್ಲಿರುವಾಗ ನಮ್ಮ ಅಂಗಡಿಯ ರಾಜ್ಯ ಮಾರಾಟ ವ್ಯವಸ್ಥಾಪಕ ಗೌತಮ್ ಕರೆ ಮಾಡಿ ಮಲ್ಲೇಶ್ವರದ ಸಂಪಿಗೆ ರಸ್ತೆಯ 4ನೇ ಅಡ್ಡರಸ್ತೆ, 3ನೇ ಮಹಡಿ ನಂ-46 ರಲ್ಲಿ ‘ಮಾಹಿ ಎಂಟರ್ ಪ್ರೈಸಸ್’ ಹೆಸರಿನ ಸಗಟು ಚಿನ್ನ ವ್ಯಾಪಾರ ಅಂಗಡಿಯ ವ್ಯಾಪಾರಿ ಪರೇಶ್ ಸೋನಿ ಎಂಬಾತ ಇದ್ದಾನೆ. 

 ಆತ ನಮ್ಮ ಅಂಗಡಿಯಲ್ಲಿ ಆಭರಣ ನೋಡಿ ಖರೀದಿಸುವುದಾಗಿ ಆತ ಹೇಳಿದ್ದಾನೆ. ಹೀಗಾಗಿ ಆತನಿಗೆ ಅಂಗಡಿಗೆ ಚಿನ್ನಾಭರಣಗಳ ಸ್ಯಾಂಪಲ್‌ಗಳನ್ನು ತೋರಿಸಿ ಅವರು ಆಯ್ಕೆ ಮಾಡಿದ ಆಭರಣಗಳನ್ನು ಮರಳಿ ತರುವಂತೆಹೇಳಿದ್ದರು. ಅಂತೆಯೇ ನಮ್ಮ ಅಂಗಡಿಯಿಂದ ವಿವಿಧ ವಿನ್ಯಾಸದ ಸುಮಾರು 3 ಕೆಜಿ ಚಿನ್ನಾಭರಣಗಳನ್ನು ತೆಗೆದುಕೊಂಡು ನಾನು ಮತ್ತು ಕೆಲಸಗಾರ ಪ್ರಕಾಶ್ ಹೋಗಿದ್ದೆವು ಎಂದು ವಿವರಿಸಿದ್ದಾರೆ.

ಮಲ್ಲೇಶ್ವರ ಕಚೇರಿಯಲ್ಲಿ ಸೋನಿ ಅವರನ್ನು ಭೇಟಿಯಾದ ವೇಳೆ ಆ ಅಂಗಡಿಯಲ್ಲಿದ್ದ ಶ್ಯಾಮ್ ಮತ್ತು ಚಂದ್ರಶೇಖರ್ ರಾವ್‌ನನ್ನು ಸೋನಿ ಪರಿಚಯಿಸಿದರು. ನಂತರ ಸೋನಿಗೆ ನಾವು ತಂದಿದ್ದ ವಿವಿಧ ಬಗೆಯ ಚಿನ್ನದ ಆಭರಣಗಳನ್ನು ಟೇಬಲ್ ಮೇಲಿಟ್ಟು ತೋರಿಸಿ ಇಷ್ಟಪಡುವ ಆಭರಣ ಆರಿಸಿಕೊಳ್ಳುವಂತೆ ಹೇಳಿದೆವು. ಯಂತ್ರದಲ್ಲಿ ಆಭರಣಗಳ ತೂಕ ಪರೀಕ್ಷಿಸಿ ಶ್ಯಾಮ್ ಬರೆದುಕೊಳ್ಳುತ್ತಿದ್ದ. ಸಂಜೆ 4 ಗಂಟೆ ಸುಮಾರಿಗೆ ಆಭರಣಗಳ ಆಯ್ಕೆ ಬಳಿಕ ಅವುಗಳನ್ನು ಮರಳಿ ಪಡೆದು ಹೋಗಲು ಅನುವಾದೆವು.  

ಆಗ ಸೋನಿ, ತಮ್ಮ ಪಕ್ಕದ ಕ್ಯಾಬೀನ್‌ನಲ್ಲಿದ್ದ ಚಂದ್ರಶೇಖರ್ ರಾವ್ ಅವರಿಗೆ ಚಿನ್ನಾಭರಣ ಲಿಸ್ಟ್ ಮಾಡಿ ವಿನ್ಯಾಸದ ಪೋಟೋ ತೆಗೆದುಕೊಳ್ಳುವಂತೆ ಸೂಚಿಸಿದರು. ಆಗ 1.850 ಕೆಜಿ ತೂಕದ ವಿವಿಧ ಮಾದರಿಯ ಚಿನ್ನಾಭರಣಗಳನ್ನು ಪಡೆದು ಪೋಟೋ ತೆಗೆಯಲು ತೆರಳಿದರು. ಬಹಳ ಹೊತ್ತಾದರೂ ರಾವ್ ಹಾಗೂ ಶ್ಯಾಮ್ ಬರಲಿಲ್ಲ. ನಾವು ಅನುಮಾನಗೊಂಡು ಸೋನಿಯನ್ನು ವಿಚಾರಿಸಿದಾಗ ಆತ, ನಾನು ಹೋಗಿ ಅವರಿಬ್ಬರನ್ನು ಕರೆತರುವುದಾಗಿ ಹೇಳಿ ಕಾಲ್ಕಿತ್ತನು. ನಮಗೆ ವಂಚಿಸಿ ಚಿನ್ನಾಭರಣ ದೋಚಿರುವ ಆರೋಪಿಗಳನ್ನು ಪತ್ತೆ ಹಚ್ಚಿ ನ್ಯಾಯ ಕೊಡಿಸುವಂತೆ ಮಹೇಂದ್ರ ಕೋರಿದ್ದಾನೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

2 ವರ್ಷದ ಮಗುಗೆ ಶಸ್ತ್ರ ಚಿಕಿತ್ಸೆ ಮಾಡಿ 480 ಗ್ರಾಂ ಕೂದಲು, ರಬ್ಬರ್‌ ತೆಗೆದರು
ಔಷಧ ಮಳಿಗೆ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ, ವ್ಯತ್ಯಯವಿಲ್ಲ