ಅಪಾಯಕಾರಿಯಾದ ವೈದ್ಯಕೀಯ ಸಮಸ್ಯೆಯಿಂದ ಬಳಲುತ್ತಿದ್ದ 2 ವರ್ಷದ ಬಾಲಕಿಯ ಜೀವವನ್ನು ವೈಟ್ ಫೀಲ್ಡ್ ಮೆಡಿಕವರ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಉಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಹದೇವಪುರ

ಅಪಾಯಕಾರಿಯಾದ ವೈದ್ಯಕೀಯ ಸಮಸ್ಯೆಯಿಂದ ಬಳಲುತ್ತಿದ್ದ 2 ವರ್ಷದ ಬಾಲಕಿಯ ಜೀವವನ್ನು ವೈಟ್ ಫೀಲ್ಡ್ ಮೆಡಿಕವರ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಉಳಿಸಿದ್ದಾರೆ.

ಈ ಪ್ರಕರಣದಲ್ಲಿ ಮಕ್ಕಳ ತಜ್ಞೆ ಡಾ.ಲೀನತಾ ರೆಡ್ಡಿ ಪ್ರಮುಖ ಪಾತ್ರವಹಿಸಿ ಅಪರೂಪದ ‘ರಪುಂಜಲ್ ಸಿಂಡ್ರೋಮ್’ (Rapunzel Syndrome) ಎಂಬ ಸ್ಥಿತಿಯನ್ನು ಗುರುತಿಸಿ ಚಿಕಿತ್ಸೆ ನೀಡಿದ್ದಾರೆ.

ಮಗು ಬಾಲ್ಯದಿಂದಲೇ ಕೂದಲು, ರಬ್ಬರ್ ಬ್ಯಾಂಡ್‌ ಹಾಗೂ ಬಲೂನ್ ತುಂಡುಗಳಂತಹ ಆಹಾರವಲ್ಲದ ವಸ್ತುಗಳನ್ನು ತಿನ್ನುವ ವಿಚಿತ್ರ ಅಭ್ಯಾಸ ಹೊಂದಿತ್ತು. ಇದರಿಂದ ಹೊಟ್ಟೆಯೊಳಗೆ ದೊಡ್ಡ ಪ್ರಮಾಣದ ಕೂದಲಿನ ಗುಡ್ಡೆ (Trichobezoar) ರೂಪಗೊಂಡಿತ್ತು. ಈ ಅಪರೂಪದ ಸ್ಥಿತಿಗೆ ‘ರಪುಂಜಲ್ ಸಿಂಡ್ರೋಮ್’ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಇದು ಚಿಕ್ಕ ವಯಸ್ಸಿನ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ, 2 ವರ್ಷದ ಮಗುವಿನಲ್ಲಿ ಕಂಡುಬಂದಿರುವುದು ಅತ್ಯಂತ ಅಪರೂಪವಾಗಿದೆ. ಕೆಲವು ದಿನಗಳಿಂದ ಮಗುವಿಗೆ ತೀವ್ರ ಹೊಟ್ಟೆನೋವು, ನಿರಂತರ ವಾಂತಿ ಹಾಗೂ ಆಹಾರ ಸೇವನೆ ಕಡಿಮೆಯಾಗಿತ್ತು. ಇದರಿಂದ ಪಾಲಕರು ಆತಂಕಕ್ಕೊಳಗಾಗಿದ್ದರು.ಮೊದಲಿಗೆ ಗ್ಯಾಸ್ಟ್ರೋ ಎಂಟರಾಲಜಿಸ್ಟ್‌ ಡಾ.ರೂಪೇಶ್ ಎಂಡೋಸ್ಕೋಪಿಯ ಮೂಲಕ ಗಡ್ಡೆ ತೆಗೆಯಲು ಪ್ರಯತ್ನಿಸಿದರು. ಆದರೆ, ಗುಡ್ಡೆಯ ಗಾತ್ರ ಮತ್ತು ವ್ಯಾಪ್ತಿ ಹೆಚ್ಚಾಗಿದ್ದರಿಂದ ಶಸ್ತ್ರಚಿಕಿತ್ಸೆ ಅನಿವಾರ್ಯವಾಯಿತು. ಮೆಡಿಕವರ್ ವೈದ್ಯರ 4 ಜನರ ತಂಡ ಲ್ಯಾಪರೋಸ್ಕೊಪಿಕ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಿದ್ದು, ಸುಮಾರು 25 ಸೆಂ.ಮೀ ಉದ್ದ ಮತ್ತು 480 ಗ್ರಾಂ ತೂಕದ ದೊಡ್ಡ ಕೂದಲಿನ ಗುಡ್ಡೆಯನ್ನು ಹೊರತೆಗೆದಿದೆ.